ಬಸವನಬಾಗೇವಾಡಿ: ಪಟ್ಟಣದಿಂದ ತಾಲ್ಲೂಕಿನ ಯಂಭತ್ನಾಳ ಗ್ರಾಮಕ್ಕೆ ನೇರ ಸಂಪರ್ಕ ಕಲ್ಪಿಸಲು ಸಾರಿಗೆ ಸಂಸ್ಥೆಯಿಂದ ನೂತನ ಬಸ್ ಸೇವೆ ಆರಂಭಿಸಲಾಗಿದ್ದು, ಮಂಗಳವಾರ ಗ್ರಾಮಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಬಸ್‌ಗೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಸಂಭ್ರಮದಿಂದ ಸ್ವಾಗತಿಸಿದರು.
ಗ್ರಾಮಸ್ಥರಾದ ಕರ್ನಾಟಕ ಪುಸ್ತಕ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಗಾನವರ ಮಾತನಾಡಿ, ‘ಗ್ರಾಮದ ವಯೋವೃದ್ಧರು, ಹೆಣ್ಣುಮಕ್ಕಳು, ನೌಕರಸ್ಥರು ಹಾಗೂ ವಿದ್ಯಾರ್ಥಿಗಳು ಪ್ರತಿನಿತ್ಯ ತಾಲ್ಲೂಕು ಕೇಂದ್ರಕ್ಕೆ ತೆರಳಲು ನೇರ ಬಸ್ ಸಂಪರ್ಕ ಕಲ್ಪಿಸಬೇಕೆಂಬುದು ಗ್ರಾಮಸ್ಥರ ಹಾಗೂ ವಿವಿಧ ಸಂಘಸಂಸ್ಥೆಗಳ ಬಹುದಿನಗಳ ಬೇಡಿಕೆಯಾಗಿತ್ತು. ಸಚಿವ ಶಿವಾನಂದ ಪಾಟೀಲ ಹಾಗೂ ಸಂಘ–ಸಂಸ್ಥೆಗಳ ಒತ್ತಾಸೆಯಿಂದ ನಮ್ಮ ಗ್ರಾಮಕ್ಕೆ ನೇರ ಬಸ್ ಸಂಪರ್ಕ ಸೇವೆ ಆರಂಭಿಸಿರುವುದು ಹರ್ಷವನ್ನುಂಟು ಮಾಡಿದೆ’ ಎಂದರು.
ಬಸವನಬಾಗೇವಾಡಿಗೆ ಹೋಗಿ ಬರಲು ಯಂಭತ್ನಾಳ ಅಷ್ಟೇ ಅಲ್ಲದೇ ಪಕ್ಕದ ತಾಲ್ಲೂಕಿನ ಹೊನ್ನುಟಗಿ, ಕುಮಟಗಿ, ಕಗ್ಗೋಡ, ಹಡಗಲಿ, ಶಿವಣಗಿ ಗ್ರಾಮಗಳ ಜನರಿಗೂ ನೇರ ಬಸ್ ಸೇವೆ ಅನುಕೂಲವಾಗಿದೆ. ಸಾರ್ವಜನಿಕರು ಬಸ್ ಚಾಲಕರು ಹಾಗೂ ನಿರ್ವಾಹಕರೊಂದಿಗೆ ಸೌಜನ್ಯದಿಂದ ವರ್ತಿಸಿ ಸುಗಮ ಸಂಚಾರ ಸೇವೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಅವಿನಾಶ ಬಾನಿಕೋಲ, ಮಹಾಂತೇಶ ಸಾಸಬಾಳ, ಹನುಮಂತ ಅಂಬಳನೂರ, ಶಂಕರ ಬೂದಿಹಾಳ, ಮಳಸಿದ್ದ ಬಂಡೆಪ್ಪಗೋಳ, ನಿಂಗಪ್ಪ ಅಜ್ಜೆಗೋಳ, ರಟಮಣ್ಣ ಅರ್ಜುಣಗಿ, ಶ್ರೀಶೈಲ ಅರ್ಜುಣಗಿ, ಕಲ್ಲಪ್ಪ ಹಳ್ಳಿ, ಬಾಬು ಕರ್ನಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.