ADVERTISEMENT

ಲಾಕ್‌ಡೌನ್: ಸಂಚಾರಕ್ಕೆ ಕಠಿಣ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 10 ಮೇ 2021, 6:33 IST
Last Updated 10 ಮೇ 2021, 6:33 IST
   

ವಿಜಯಪುರ: ನಗರದಲ್ಲಿ ಸೋಮವಾರ ಬೆಳಿಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಅರಸಿದ್ದಿ ಸಿಬ್ಬಂದಿಯೊಂದಿಗೆ ಸ್ವತಃ ರಸ್ತೆಗಳಿದು ವಾಹನಗಳ ತಪಾಸಣೆ ನಡೆಸಿ, ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿದರು.

ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದು, ದಂಡ ವಿಧಿಸಿದರು. ವಾಹನಗಳನ್ನು ಠಾಣೆಯಲ್ಲಿ ನಿಲ್ಲಿಸಿ, ನಡೆದುಕೊಂಡು ಹೋಗುವಂತೆ ಕೆಲವರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು.

ಮಹಾರಾಷ್ಟ್ರ-ಕರ್ನಾಟಕ ಗಡಿಯ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ವಿಜಯಪುರ ನಗರ ಪ್ರವೇಶಿಸುವ ಹಾಗೂ ನಗರದಿಂದ ಹೊರಗೆ ಹೋಗುವ ವಾಹನಗಳನ್ನು ತೀವ್ರ ತಪಾಸಣೆ ಮಾಡಲಾಗುತ್ತಿದೆ.

ADVERTISEMENT

ವಿಜಯಪುರ-ಹುಬ್ಬಳ್ಳಿ, ವಿಜಯಪುರ-ಕಲಬುರ್ಗಿ, ಸೊಲ್ಲಾಪುರ-ಬೆಂಗಳೂರು, ವಿಜಯಪುರ-ಅಥಣಿ ಹೆದ್ದಾರಿಗಳಲ್ಲಿ ಅಂತರ್ ಜಿಲ್ಲೆಗಳನ್ನು ಸಂಪರ್ಕಿಸುವ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದು, ಹೊರ ಜಿಲ್ಲೆಯ ವಾಹನಗಳು ಜಿಲ್ಲೆ ಪ್ರವೇಶಿಸದಂತೆ ತಡೆಯಲಾಗುತ್ತಿದೆ. ಜಿಲ್ಲೆಯಿಂದಲೂ ಹೊರಕ್ಕೆ ಹೋಗಲು ಬಿಡುತ್ತಿಲ್ಲ. ಅಗತ್ಯ ಸೇವೆ ಒದಗಿಸುವ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆಯಾದರೂ ತಪಾಸಣೆ ಮಾಡಿ ಬಿಡಲಾಗುತ್ತಿದೆ.

ಹಿಂದಿನ ದಿನಗಳಿಗೆ ಹೋಲಿಸಿದರೆ ಸೋಮವಾರ ವಾಹನ ಹಾಗೂ ಜನ ಸಂಚಾರ ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಇತ್ತು. ಪೊಲೀಸರ ಕಟ್ಟುನಿಟ್ಟಿನ ಕ್ರಮದಿಂದ ಆಸ್ಪತ್ರೆ, ಮೆಡಿಕಲ್, ವಿವಿಧ ಕಚೇರಿಗಳಿಗೆ ತೆರಳುವವರು ರಸ್ತೆ ಮೇಲೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

ಬೆಳಿಗ್ಗೆ6ರಿಂದ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತಾದರೂ ಕಠಿಣ ನಿರ್ಬಂಧಗಳಿಗೆ ಅಂಜಿದ ಜನರು ಹೊರಗೆ ಬರಲು ಹಿಂದೇಟು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.