ADVERTISEMENT

ಕೋವಿಡ್‌ ನಿರ್ವಹಣೆ; ಕೇಂದ್ರ, ರಾಜ್ಯ ವಿಫಲ

ಕಾಂಗ್ರೆಸ್‌ ಮುಖಂಡ ಅಬ್ದುಲ್‌ ಹಮೀದ್ ಮುಶ್ರೀಪ್ ಆರೋಪ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 14:22 IST
Last Updated 10 ಅಕ್ಟೋಬರ್ 2020, 14:22 IST
ವಿಜಯಪುರ ನಗರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ‘ಆರೋಗ್ಯ ಹಸ್ತ’ ಜನರ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಮುಖಂಡ ಅಬ್ದುಲ್‌ ಹಮೀದ್ ಮುಶ್ರೀಪ್ ಚಾಲನೆ ನೀಡಿದರು
ವಿಜಯಪುರ ನಗರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ‘ಆರೋಗ್ಯ ಹಸ್ತ’ ಜನರ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಮುಖಂಡ ಅಬ್ದುಲ್‌ ಹಮೀದ್ ಮುಶ್ರೀಪ್ ಚಾಲನೆ ನೀಡಿದರು   

ವಿಜಯಪುರ:ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್‌ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಜನ ಭಯಭೀತರಾಗಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಅಬ್ದುಲ್‌ ಹಮೀದ್ ಮುಶ್ರೀಪ್ ಆರೋಪಿಸಿದರು.

ನಗರದ ವಾರ್ಡ್‌ ನಂ.11,19, 20, 22 ಮತ್ತು 29ರಲ್ಲಿ ಶನಿವಾರ ಕೋವಿಡ್-19‌ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ‘ಕಾಂಗ್ರೆಸ್‌ ಆರೋಗ್ಯ ಹಸ್ತ’ಜನರ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬೇರೆ ಕಾಯಿಲೆಗಳಿಂದ ಬಳಲುತ್ತಿರುವ ಜನರುಕೋವಿಡ್‌ ಭಯದಿಂದಾಗಿ ಆಸ್ಪತ್ರೆಗಳಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ಜನರಲ್ಲಿ ಮುಖ್ಯವಾಗಿ ಆತ್ಮಸ್ಥೈರ್ಯ ತುಂಬಬೇಕಾಗಿದ್ದು, ಸರ್ಕಾರ ಈ ನಿಟ್ಟಿನಲ್ಲಿ ನಿರ್ಲಕ್ಷ್ಯವಹಿಸಿದೆ ಎಂದು ದೂರಿದರು.

ADVERTISEMENT

ಕೊರೊನಾ ರೋಗ ಬಂದ ನಂತರ ಕೇಂದ್ರ ಸರ್ಕಾರ ಜಾರಿಗೆ ತಂದ ಲಾಕ್‌ಡೌನ್‌ನಿಂದ ಜನರು ಉದ್ಯೋಗವಿಲ್ಲದೇ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರಜನಪರವಾದ ನಿರ್ಣಯಗಳನ್ನು ಕೈಗೊಳ್ಳದೇ ಮಾಸ್ಕ್‌ ಧರಿಸದವರಿಗೆ ದುಬಾರಿ ದಂಡವನ್ನು ವಿಧಿಸುತ್ತಿದ್ದು, ತಕ್ಷಣ ಇದನ್ನು ಹಿಂಪಡೆದು ಜನರಿಗೆ ಸಹಾಯವಾಗುವಂತಹ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೋವಿಡ್‌ನಿಂದ ಬಡವರು ಸಂಕಷ್ಟದಲ್ಲಿದ್ದು, ಸರ್ಕಾರ ಅವರ ಸಹಾಯಕ್ಕೆ ಧಾವಿಸಬೇಕು. ಸರ್ಕಾರದ ಕೈಯಲ್ಲಿ ಈ ಕೆಲಸ ನಿರ್ವಹಿಸಲು ಆಗದೇ ಇದ್ದರೆ ರಾಜೀನಾಮೆ ನೀಡಿ, ಮನೆಗೆ ಹೋಗುವುದು ಒಳಿತು ಎಂದರು.

ಜನ ಈ ರೋಗವನ್ನು ತಡೆಯುವ ನಿಟ್ಟಿನಲ್ಲಿ ಸ್ವಯಂ ಪ್ರೇರಣೆಯಿಂದ ಅಂತರ ಕಾಪಾಡಿಕೊಳ್ಳಬೇಕು, ಸ್ಯಾನಿಟೈಜೇಷನ್ ಮಾಡಿಕೊಳ್ಳಬೇಕು‌, ಮಾಸ್ಕ್‌ ಧರಿಸುವ ಮುಖಾಂತರ ತಮ್ಮನ್ನು ತಾವೂ ರಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜನ ಈ ರೋಗಕ್ಕೆ ಎಂದೂ ಭಯಭೀತರಾಗದೇ ಬದುಕು ಕಟ್ಟಿಕೊಳ್ಳಬೇಕು. ಕಾಂಗ್ರೆಸ್‌ ಪಕ್ಷ ಜನರ ಜೊತೆಗೆ ಇರಲಿದೆ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡರಾದ ಹೈದರ್‌ ನದಾಫ್‌, ಶಬ್ಬೀರ್‌ ಮನಗೂಳಿ, ಪವನ ಚಲವಾದಿ, ಅನ್ವರ್‌ ದ್ರಾಕ್ಷಿ, ಸರ್ಪರಾಜ ಬಗಲಿ, ಅಲ್ಲಾಭಕ್ಷ ಬಾಗಲಕೋಟ, ಇಲಿಯಾಸ ಬಕ್ಷಿ, ಫೈರೋಜ ಜಮಾದಾರ ನೇತೃತ್ವದಲ್ಲಿ ಮನೆ-ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ಮಾಡಲಾಯಿತು.

ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಅಬ್ದುಲ್‌ ರಜಾಕ್‌ ಹೋರ್ತಿ, ಮಹ್ಮದ್‌ ರಫೀಕ್‌ ಟಪಾಲ, ಬಡೇಪೀರ ಜುನೇದಿ, ರಫೀಕಅಹ್ಮದ್‌ ಇನಾಮದಾರ, ಇಲಿಯಾಸ ಸಿದ್ದಿಕಿ,ವಿಜಯಪುರ ನಗರ ಬ್ಲಾಕ್‌ ಅಧ್ಯಕ್ಷ ಜಮೀರ್‌ಅಹ್ಮದ್‌ ಬಕ್ಷಿ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಅಬ್ದುಲ್‌ ಕರೀಂ ಬಾಗವಾನ, ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ ಇದ್ದರು.

‘ಆರೋಗ್ಯ ಹಸ್ತಕ್ಕೆ ಜನರ ಸ್ಪಂದನೆ’

ವಿಜಯಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮಾರ್ಗದರ್ಶನದಲ್ಲಿ ನಗರದ 35 ವಾರ್ಡ್‌ಗಳಲ್ಲಿ ‘ಆರೋಗ್ಯ ಹಸ್ತ’ ಕಾರ್ಯಕ್ರಮವನ್ನು ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದು,ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಅಬ್ದುಲ್ ಹಮೀದ್ ‌ ಮುಶ್ರೀಪ್‌ ಹೇಳಿದರು.

ಪ್ರತಿ ವಾರ್ಡ್‌ಗೆ ತಲಾ ಇಬ್ಬರು ಕಾಂಗ್ರೆಸ್‌ ಕೊರೊನಾ ವಾರಿಯರ್ಸ್‌ಗಳನ್ನು ನೇಮಕ ಮಾಡಿದ್ದು, ಅವರಿಗೆ ಹೆಲ್ತ್‌ ಕಿಟ್‌ ನೀಡಲಾಗಿದೆ. ಅಲ್ಲದೇ, ಅವರಿಗೆ ವಿಮೆ ಮಾಡಿಸಲಾಗಿದೆ. ಕಾರ್ಯಕರ್ತರು ಮನೆ, ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ ಎಂದರು.

ಕೋವಿಡ್‌ ಲಕ್ಷಣ ಇರುವವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಸೂಕ್ತ ಚಿಕಿತ್ಸೆಗೆ ಮಾರ್ಗದರ್ಶನ, ಸಹಾಯ ಮಾಡಲಾಗುತ್ತಿದೆ ಎಂದು ಹೇಳಿದರು.

ಅಲ್ಲದೇ, ಅಲ್‌ ಅಮಿನ್ ವೈದ್ಯಕೀಯ‌ ಆಸ್ಪತ್ರೆಯಲ್ಲಿ ಬಡವರಿಗಾಗಿ 40 ಬೆಡ್‌ಗಳನ್ನು ಕೊರೊನಾ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ಮುಸ್ಲಿಂ ಸಮಾಜದಿಂದ ಖರ್ಚು, ವೆಚ್ಚವನ್ನು ಭರಿಸಲಾಗುತ್ತಿದೆ. ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.