ADVERTISEMENT

ವಿಜಯಪುರ ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ತೀವ್ರ ಕೊರತೆ: ಜನರ ಪರದಾಟ

ಇವೆ ಸದ್ಯ ಎರಡು ಸಾವಿರ ಡೋಸ್‌ ಮಾತ್ರ!

ಬಸವರಾಜ ಸಂಪಳ್ಳಿ
Published 1 ಮೇ 2021, 19:30 IST
Last Updated 1 ಮೇ 2021, 19:30 IST
ವಿಜಯಪುರ ನಗರದಲ್ಲಿ ಶನಿವಾರ ಲಸಿಕಾ ಕೇಂದ್ರದ ಮುಂಭಾಗ ಜನರು ಕೋವಿಡ್‌ ಲಸಿಕೆ ಪಡೆಯಲು ಕಾದುಕುಳಿತ್ತಿದ್ದರು
ವಿಜಯಪುರ ನಗರದಲ್ಲಿ ಶನಿವಾರ ಲಸಿಕಾ ಕೇಂದ್ರದ ಮುಂಭಾಗ ಜನರು ಕೋವಿಡ್‌ ಲಸಿಕೆ ಪಡೆಯಲು ಕಾದುಕುಳಿತ್ತಿದ್ದರು   

ವಿಜಯಪುರ: ‘ಲಸಿಕೆ ಪಡೆಯಿರಿ ಕೋವಿಡ್‌ನಿಂದ ಪಾರಾಗಿರಿ’ ಎಂದು ದೇಶದ ಪ್ರಧಾನಿಯಿಂದ ಸ್ಥಳೀಯ ಶಾಸಕರ ವರೆಗೂ ಎಲ್ಲರೂ ಹೇಳುತ್ತಲೇ ಇದ್ದಾರೆ. ಆದರೆ, ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆ ಕೊರತೆ ಎದುರಾಗಿದ್ದು, ಜನರು ಪರದಾಡುತ್ತಿದ್ದಾರೆ.

ಹೌದು, ಜಿಲ್ಲೆಯಲ್ಲಿ ಸದ್ಯ ಕೇವಲ ಎರಡು ಸಾವಿರ ಕೋವಿಡ್‌ ಲಸಿಕೆ ಇವೆ. ಹೀಗಾಗಿ ಈಗಾಗಲೇ ಪ್ರಥಮ ಡೋಸ್‌ ಪಡೆದವರು ಎರಡನೇ ಡೋಸ್‌ ಪಡೆಯಲಾಗದೇ ತೊಂದರೆಗೆ ಒಳಗಾಗಿದ್ದಾರೆ. ಅಲ್ಲದೇ, ಹೊಸದಾಗಿ ಲಸಿಕೆ ಪಡೆಯಲು ಆಸ್ಪತ್ರೆಗಳಿಗೆ ಎಡತಾಕುತ್ತಿರುವವರು ನಿರಾಶೆಯಿಂದ ಮನೆಗೆ ಮರಳುತ್ತಿದ್ದಾರೆ.

ಪ್ರಥಮ ಹಂತ: ಜನವರಿ 16 ರಿಂದ ಆರಂಭವಾದ ಪ್ರಥಮ ಹಂತದ ಲಸಿಕಾ ಅಭಿಯಾನದಡಿ ಜಿಲ್ಲೆಯಲ್ಲಿ ಇದುವರೆಗೆ 15,147 ಜನ ಆರೋಗ್ಯ ಕಾರ್ಯಕರ್ತರು ಪ್ರಥಮ ಡೋಸ್‌ ಹಾಗೂ 7746 ಜನ ಎರಡನೇ ಡೋಸ್‌ ಪಡೆದುಕೊಂಡಿದ್ದಾರೆ.

ADVERTISEMENT

ಎರಡನೇ ಹಂತ: ಫೆಬ್ರುವರಿ 8ರಿಂದ ಆರಂಭವಾದ ಎರಡನೇ ಹಂತದಲ್ಲಿ ಫ್ರಂಟ್‌ ಲೈನ್‌ ವರ್ಕರ್ಸ್‌ಗಳಿಗೆ ಕೋವಿಡ್‌ ಲಸಿಕೆ ನೀಡಲು ಉದ್ದೇಶಿಸಲಾಗಿತ್ತು. ಇದುವರೆಗೆ 11,488 ಜನ ಫ್ರಂಟ್‌ ಲೈನ್‌ ವರ್ಕರ್ಸ್‌ ಪ್ರಥಮ ಡೋಸ್‌ ಹಾಗೂ 4819 ಜನ ಎರಡನೇ ಡೋಸ್‌ ಪಡೆದುಕೊಂಡಿದ್ದಾರೆ.

ಮೂರನೇ ಹಂತ: ಮಾರ್ಚ್‌ 1ರಿಂದ ಆರಂಭವಾದ ಮೂರನೇ ಹಂತದ ಲಸಿಕಾ ಅಭಿಯಾನದಲ್ಲಿ 60 ವರ್ಷ ಮೇಲ್ಪಟ್ಟವರು 92,548 ಜನ ಪ್ರಥಮ ಡೋಸ್‌ ಹಾಗೂ 9098 ಜನ ಎರಡನೇ ಡೋಸ್‌ ಪಡೆದುಕೊಂಡಿದ್ದಾರೆ.

ಮೂರನೇ ಹಂತದಲ್ಲಿ 45 ರಿಂದ 60 ವರ್ಷದೊಳಗಿನ 1,00,702 ಜನ ಪ್ರಥಮ ಡೋಸ್‌ ಹಾಗೂ 6191 ಜನ ಎರಡನೇ ಡೋಸ್ ಪಡೆದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಸದ್ಯ ಜಿಲ್ಲೆಯಲ್ಲಿ 2 ಸಾವಿರ ಡೋಸ್‌ ಮಾತ್ರ ಕೋವಿಡ್‌ ಲಸಿಕೆ ಇದೆ. ಲಸಿಕೆ ಪೂರೈಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಬರುವ ನಿರೀಕ್ಷೆ ಇದೆ ಎಂದರು.

ಆರಂಭವಿಲ್ಲ: 18 ರಿಂದ 44 ವರ್ಷದೊಳಗಿನವರಿಗೆ ಮೇ 1ರಿಂದ ಲಸಿಕೆ ನೀಡಲು ಸರ್ಕಾರ ಉದ್ದೇಶಿಸಿತ್ತು. ಆದರೆ, ಕೊರತೆ ಎದುರಾಗಿರುವುದರಿಂದ ಸದ್ಯ ಲಸಿಕಾ ಅಭಿಯಾನ ಸ್ಥಗಿತವಾಗಿದೆ. ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವವರು ಲಸಿಕೆಗಾಗಿ ತುದಿಗಾಲಲ್ಲಿ ಕಾಯುತ್ತಿದ್ದಾರೆ.

ಲಸಿಕೆ ಪಡೆದವರಿಗೆ ಕೋವಿಡ್‌ ಬಂದರೂ ಅದರ ಪರಿಣಾಮ ಹೆಚ್ಚು ಬೀರುವುದಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿರುವುದರಿಂದ ಇದುವರೆಗೆ ಲಸಿಕೆ ಪಡೆಯಲು ಹಿಂದೇಟು ಹಾಕಿದ್ದವರು ಇದೀಗ ಲಸಿಕೆ ಪಡೆಯಲು ಮುಗಿಬಿದ್ದಿದ್ದಾರೆ. ಆದರೆ, ಲಸಿಕೆ ಕೊರತೆಯಿಂದ ಜನ ನಿರಾಶೆಯಾಗಿದ್ದಾರೆ.

ಮೊದಲ ಡೋಸ್‌ ಪಡೆದ 45 ದಿನಗಳ ನಂತರ ಎರಡನೇ ಡೋಸ್‌ ಹಾಕಿಸಿಕೊಳ್ಳಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಮೊದಲನೇ ಡೋಸ್‌ ಪಡೆದು 45 ದಿನವಾದರೂ ಎರಡನೇ ಡೋಸ್‌ ಪಡೆಯಲು ಸಾಧ್ಯವಾಗಿಲ್ಲ. ಲಸಿಕೆ ಪಡೆಯಲು ನಾಲ್ಕೈದು ದಿನಗಳಿಂದ ಆಸ್ಪತ್ರೆಗಳಿಗೆ ಅಲೆಯುತ್ತಿದ್ದೇನೆ. ಲಸಿಕೆ ಸಿಗದೇ ತೊಂದರೆಯಾಗಿದೆ ಎಂದು ವಿಜಯಪುರ ಜಲನಗರದ ನಿವಾಸಿ ಭರತ್‌ ಕುಮಾರ್‌ ಕುಂಬಾರ ಆತಂಕ ವ್ಯಕ್ತಪಡಿಸಿದರು.

***

ಕೋವಿಡ್‌ ಲಸಿಕೆ, ರೆಮ್‌ಡಿಸಿವಿರ್‌ ಇಂಜೆಕ್ಷನ್‌, ಬೆಡ್‌, ವೆಂಟಿಲೇಟರ್‌, ಆಕ್ಸಿಜನ್‌ ಸೇರಿದಂತೆ ಎಲ್ಲವೂ ಕೊರತೆ, ಕೊರತೆ. ಕೇಂದ್ರ, ರಾಜ್ಯ ಸರ್ಕಾರಗಳು ಏನು ಮಾಡುತ್ತಿವೆ.
–ಸಂಗಮೇಶ ಗೌಡರ, ವಿಜಯಪುರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.