ADVERTISEMENT

ವಿಜಯಪುರ| ಕ್ಷೀರ ಪೈಲಟ್‌ ಯೋಜನೆಗೆ ಚಾಲನೆ: ಹರಿಯಲಿದೆ ಹಾಲಿನ ಹೊಳೆ; ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 6:16 IST
Last Updated 9 ನವೆಂಬರ್ 2025, 6:16 IST
ವಿಜಯಪುರ ನಗರದಲ್ಲಿ ಬಿ.ಎಲ್.ಡಿ.ಇ ಸಂಸ್ಥೆ, ‘ಕೃಷಿಕಲ್ಪ’ ಫೌಂಡೇಷನ್ ಹಾಗೂ ‘ಅಕ್ಷಯಕಲ್ಪ’ ಫೌಂಡೇಷನ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ‘ಕ್ಷೀರ’ ಪೈಲಟ್ ಯೋಜನೆಗೆ ವಿನೂತನವಾಗಿ ಚಾಲನೆ ನೀಡಲಾಯಿತು 
ವಿಜಯಪುರ ನಗರದಲ್ಲಿ ಬಿ.ಎಲ್.ಡಿ.ಇ ಸಂಸ್ಥೆ, ‘ಕೃಷಿಕಲ್ಪ’ ಫೌಂಡೇಷನ್ ಹಾಗೂ ‘ಅಕ್ಷಯಕಲ್ಪ’ ಫೌಂಡೇಷನ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ‘ಕ್ಷೀರ’ ಪೈಲಟ್ ಯೋಜನೆಗೆ ವಿನೂತನವಾಗಿ ಚಾಲನೆ ನೀಡಲಾಯಿತು    

ವಿಜಯಪುರ: ಜಿಲ್ಲೆಯಲ್ಲಿ ಜಲಕ್ರಾಂತಿ, ಹಸಿರುಕ್ರಾಂತಿಯ ಬಳಿಕ ಕ್ಷೀರ ಕ್ರಾಂತಿಗೆ ಮುನ್ನುಡಿ ಬರೆಯಲು ‘ಕ್ಷೀರ’ ಯೋಜನೆಯನ್ನು ಬಬಲೇಶ್ವರ ತಾಲ್ಲೂಕಿನ 5 ಗ್ರಾಮಗಳಲ್ಲಿ ಪೈಲಟ್‌ ಯೋಜನೆಯಾಗಿ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆ ಯಶಸ್ವಿಯಾದರೆ ಭವಿಷ್ಯದಲ್ಲಿ ಇಡೀ ಜಿಲ್ಲೆಗೆ ವಿಸ್ತರಿಸುವ ಉದ್ದೇಶವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ನಗರದಲ್ಲಿ ಬಿ.ಎಲ್.ಡಿ.ಇ ಸಂಸ್ಥೆ, ಕೃಷಿಕಲ್ಪ ಫೌಂಡೇಷನ್ ಹಾಗೂ ಅಕ್ಷಯಕಲ್ಪ ಫೌಂಡೇಷನ್ ಸಹಯೋಗದಲ್ಲಿ ಜಿಲ್ಲೆಯಲ್ಲಿ ಸುಸ್ಥಿರ ಹೈನುಗಾರಿಕೆ ಉತ್ತೇಜಿಸಲು ಕ್ಷೀರ ಪೈಲಟ್ ಯೋಜನೆಗೆ ಸರ್ಕಾರಿ ಶಾಲಾ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ವಿನೂತನವಾಗಿ ಚಾಲನೆ ನೀಡಿ ಅವರು ಮಾತನಾಡಿದರು.

ತಿಪಟೂರಿನ ‘ಅಕ್ಷಯಕಲ್ಪ’ ಯೋಜನೆ ಮಾದರಿಯಾಗಿದ್ದು, ಅಲ್ಲಿನ ರೈತರು ವೈಜ್ಞಾನಿಕ ಪಶುಪಾಲನೆಯಿಂದ ಮಾಸಿಕ ₹1.5ಯಿಂದ ₹2 ಲಕ್ಷದ ಆದಾಯ ಗಳಿಸುತ್ತಿದ್ದಾರೆ. ಈ ಯಶಸ್ಸು ವಿಜಯಪುರ ಜಿಲ್ಲೆಯ ರೈತರಿಗೂ ತಲುಪಬೇಕು ಎಂಬ ಗುರಿಯೊಂದಿಗೆ ಬಿಎಲ್‌ಡಿಇ, ಕೃಷಿಕಲ್ಪ ಮತ್ತು ಅಕ್ಷಯಕಲ್ಪ ಸಹಯೋಗದಲ್ಲಿ ‘ಕ್ಷೀರ’ ಪೈಲಟ್ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.

ADVERTISEMENT

ಬೆಂಗಳೂರಿನ ಅಸೆಲ್ ಕಂಪನಿ ಸಂಸ್ಥಾಪಕ ಪ್ರಶಾಂತ ಪ್ರಕಾಶ ಮಾತನಾಡಿ, ಕಳೆದ 15 ರಿಂದ 20 ವರ್ಷಗಳ ಕಾಲ ನವ್ಯೋದ್ಯಮಗಳಿಗೆ ಉತ್ತೇಜನ ನೀಡಿ ನಗರಾಭಿವೃದ್ಧಿ ಮಾಡುವತ್ತ ಗಮನ ಹರಿಸಿದ್ದೆ. ಸಚಿವ ಎಂ. ಬಿ. ಪಾಟೀಲ ಅವರ ಸಹಯೋಗದಲ್ಲಿ ಈಗ ಬಿಯಾಂಡ್ ಬೆಂಗಳೂರು ಅಂದರೆ ಗ್ರಾಮೀಣ ಭಾಗಗಳಲ್ಲಿಯೂ ಕೈಗಾರಿಕೆಗಳನ್ನು ಪ್ರಾರಂಭಿಸಲು ಉತ್ತೇಜನ ನೀಡುವ ಕೆಲಸಗಳಿಗೆ ಆದ್ಯತೆ ನೀಡಿದ್ದೇನೆ ಎಂದರು.

ಜಿಲ್ಲೆಯ ಜನ ಕಾಯಕನಿಷ್ಠರಾಗಿದ್ದು, ಮುಂಬರುವ ದಿನಗಳಲ್ಲಿ ಶ್ವೇತಕ್ರಾಂತಿಗೂ ಕೊಡುಗೆ ನೀಡಲಿದ್ದಾರೆ. ಈ ಯೋಜನೆಯ ಯಶಸ್ಸಿಗೆ ಸಚಿವರು ಬೆನ್ನೆಲುಬಾಗಿ ನಿಂತಿರುವುದರಿಂದ ಮುಂದಿನ ಐದು ವರ್ಷಗಳಲ್ಲಿ ಜಿಲ್ಲೆ ಹೈನೋದ್ಯಮದಲ್ಲಿ ದೇಶದ ಪ್ರಮುಖ ಮೂರು ಜಿಲ್ಲೆಗಳಲ್ಲಿ ಒಂದಾಗಲಿಗೆ ಎಂದು ಅವರು ಹೇಳಿದರು.

ಕೃಷಿಕಲ್ಪ ಫೌಂಡೇಷನ್ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಸಿ.ಎಂ.ಪಾಟೀಲ ಮಾತನಾಡಿ, ಯೋಜನೆ ಜಾರಿಗೆ ಸೂಕ್ತವಾದ ಐದು ಗ್ರಾಮಗಳನ್ನು ಆಯ್ಕೆ ಮಾಡಿ ತಿಪಟೂರಿನ ಮಾದರಿಯಲ್ಲಿ ರೈತರ ಆದಾಯ ಹೆಚ್ಚಿಸಲು ಕ್ರಮ ಕೈಗೊಂಡಿದ್ದೇವೆ. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯ ಯುವ ರೈತರಿಗೆ ತರಬೇತಿ ನೀಡಲಾಗಿದೆ. ಹಾಲು ಉತ್ಪಾದನೆಯಿಂದ ಆಗುವ ಲಾಭಗಳು ಕುರಿತು ಚಿಂತನೆ ನಡೆಸಲಾಗಿದೆ. ಬಿ.ಎಲ್.ಡಿ.ಇ ಸಂಸ್ಥೆ ಈ ಯೋಜನೆಗೆ ಅಗತ್ಯವಾಗಿರುವ ಎಲ್ಲ ನೆರವನ್ನು ನೀಡಿದೆ ಎಂದರು.

ಅಕ್ಷಯಕಲ್ಪ ಫೌಂಡೇಷನ್ ಸಂಸ್ಥಾಪಕ ಶಶಿಕುಮಾರ ಮಾತನಾಡಿ, ರೈತರ ಮಕ್ಕಳು ರೈತರಾಗಲು ಇಷ್ಟಪಡುವುದಿಲ್ಲ. ಹಳ್ಳಿ ಬೇಡ, ಪೇಟೆಗೆ ಹೋಗು, ಬೇರೆ ಕೆಲಸ ಮಾಡು ಎಂದು ರೈತರೇ ತಮ್ಮ ಮಕ್ಕಳಿಗೆ ಹೇಳುತ್ತಾರೆ. ‌ಆದರೆ, ಕೃಷಿಯಲ್ಲಿ ಲಾಭ ಇದೆ. ಅದನ್ನು ವೈಜ್ಞಾನಿಕವಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಯುವಕರನ್ನು ವ್ಯವಸಾಯಕ್ಕೆ ತರಲು ಅಕ್ಷಯ ಕಲ್ಪ 15 ವರ್ಷಗಳಿಂದ ಶ್ರಮಿಸುತ್ತಿದೆ ಎಂದರು.‌ 

ಜಿಲ್ಲಾಧಿಕಾರಿ ಡಾ. ಆನಂದ ಕೆ. ಮಾತನಾಡಿ, ಕೃಷಿ ಪ್ರಧಾನವಾಗಿರುವ ಈ ಯೋಜನೆಯಿಂದ ಗ್ರಾಮೀಣಾಭಿವೃದ್ಧಿಯಾಗಲಿದೆ. ಸಮಗ್ರ ಕೃಷಿಯಲ್ಲಿ ಕ್ಷೀರಕ್ರಾಂತಿ ಪಾತ್ರ ಮುಖ್ಯವಾಗಿದೆ. ಈ ಯೋಜನೆಗೆ ಕೃಷಿ, ತೋಟಗಾರಿ, ಪಶುಸಂಗೋಪನೆ, ಕೆಎಂಎಫ್ ಸೇರಿದಂತೆ ಎಲ್ಲ ಇಲಾಖೆಗಳು ಕೈಜೊಡಿಸಿ ಯಶಸ್ವಿಯಾಗಿ ಮಾಡಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾಂತೇಶ ಬಿರಾದಾರ, ಬಿ.ಎಲ್.ಡಿ.ಇ ಸಂಸ್ಥೆ ಅರ್ಜುಣಗಿ, ನಾಗರಾಳ, ನಿಡೋಣಿ, ಕುಮಠೆ, ಯಕ್ಕುಂಡಿ ಗ್ರಾಮಗಳಲ್ಲಿ ಈ ಪೈಲೆಟ್ ಯೋಜನೆ ಜಾರಿಗೆ ನೆರವಾಗಲು ತಲಾ ₹50 ಲಕ್ಷ ಆರ್ಥಿಕ ಸಹಾಯ ನೀಡಿದೆ. ಈ ಮೂಲಕ ಅನ್ನದಾತರ ಬಾಳು ಹಸನಾಗಲು ಶ್ರಮಿಸುತ್ತಿದೆ ಎಂದು ತಿಳಿಸಿದರು.

ವಿಜಯಪುರ ಮತ್ತು ಬಾಗಲಕೋಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಈರನಗೌಡ ಕರಿಗೌಡ್ರ, ಡೀಮ್ಡ್ ವಿ.ವಿ. ಕುಲಾಧಿಪತಿ ಬಸನಗೌಡ ಪಾಟೀಲ ಇದ್ದರು.

‘ಕ್ಷೀರ’ ಯೋಜನೆ ರೈತಪರ ಮಹಿಳೆಯರ ಪರ ಯುವಕರ ಪರ ಪಕ್ಷಾತೀತ ಯೋಜನೆಯಾಗಿದೆ. ಇದು ಕೇವಲ ಹಾಲು ಸಂಗ್ರಹ ಯೋಜನೆಯಲ್ಲ ರೈತರನ್ನು ಉದ್ಯಮಿಗಳನ್ನಾಗಿ ರೂಪಿಸುವ ಯೋಜನೆಯಾಗಿದೆ  
ಎಂ.ಬಿ.ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.