ವಿಜಯಪುರ: ರಾಜ್ಯ ಸರ್ಕಾರ ಧರ್ಮವಿರೋಧಿ, ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ನೇತೃತ್ವದಲ್ಲಿ ಆಯೋಜಿಸಿರುವ ಧರ್ಮಸ್ಥಳ ಚಲೋ ಅಭಿಯಾನದ ಅಂಗವಾಗಿ ನಗರದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಯಿತು.
ನಗರದ ಗಾಂಧಿ ವೃತ್ತದಿಂದ ಆರಂಭಗೊಂಡ ರ‍್ಯಾಲಿ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಘೋಷಣೆ ಕೂಗಿದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಧರ್ಮಸ್ಥಳ ಪವಿತ್ರ ಕ್ಷೇತ್ರ, ಹಿಂದೂಗಳು ಭಕ್ತಿಭಾವದಿಂದ ನಡೆದುಕೊಳ್ಳುವ ಧರ್ಮಸ್ಥಳದ ಮೇಲೆ ಕಳಂಕ ತರುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಸರ್ವನಾಶವಾಗುತ್ತದೆ, ಶಿವ ಎಲ್ಲವನ್ನೂ ನೋಡುತ್ತಿದ್ದಾನೆ, ಆತ ಮೂರನೇಯ ಕಣ್ಣು ತೆರೆದರೆ ಕಾಂಗ್ರೆಸ್ ಸರ್ವನಾಶವಾಗುತ್ತದೆ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ‘ಧರ್ಮಸ್ಥಳದ ವಿಷಯದಲ್ಲಿ ರಾಜ್ಯ ಸರ್ಕಾರ ಅಧರ್ಮದಿಂದ ನಡೆದುಕೊಳ್ಳುತ್ತಿದೆ. ಯಾರದ್ದೋ ಮಾತು ಕೇಳಿ ಈ ರೀತಿ ತನಿಖೆ ನಡೆಸುವುದು ಸರಿಯಲ್ಲ, ಈಗ ತನಿಖೆ ನಡೆದಿದೆ ಎಲ್ಲಿಯೂ ಒಂದು ಮೂಳೆಯೂ ಪತ್ತೆಯಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ‘ಧರ್ಮಸ್ಥಳ ಒಂದು ಪವಿತ್ರ ಅಧ್ಯಾತ್ಮಿಕ ಕ್ಷೇತ್ರ, ಅನೇಕ ಬಡವರನ್ನು ಉದ್ಧರಿಸಿರುವ ಪುಣ್ಯಕ್ಷೇತ್ರ, ಅನೇಕ ಮಹಿಳೆಯರು ಇಂದು ಆರ್ಥಿಕವಾಗಿ ಸಬಲರಾಗಿದ್ದಾರೆ. ಶ್ರೇಷ್ಠತೆಗೆ ಇನ್ನೊಂದು ಹೆಸರಾಗಿರುವ ಧರ್ಮಸ್ಥಳದ ಬಗ್ಗೆ ಅಪಪ್ರಚಾರಕ್ಕೆ ಪ್ರೋತ್ಸಾಹ ನೀಡಿರುವ ಸರ್ಕಾರದ ಕ್ರಮ ಖಂಡನೀಯ’ ಎಂದರು.
ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಮುಳುಗೋಡ ಪಾಟೀಲ, ಉಮೇಶ ಕಾರಜೋಳ, ಸಂದೀಪ ಪಾಟೀಲ, ವಿವೇಕಾನಂದ ಡಬ್ಬಿ, ಸಂಜೀವ ಐಹೊಳಿ, ಸಿದ್ದನಗೌಡ ಪಾಟೀಲ, ಗೋಪಾಲ ಘಟಕಂಬಳಿ, ಸುರೇಶ ಬಿರಾದಾರ, ಭೀಮಾಶಂಕರ ಹದ್ನೂರ, ಮಂಜುನಾಥ ಮೀಸೆ, ಸ್ವಪ್ನಾ ಕಣಮುಚನಾಳ, ಮಲ್ಲಿಕಾರ್ಜುನ ದೇವರಮನಿ, ಭರತ ಕೋಳಿ, ಶ್ರೀಕಾಂತ ಸಿಂಧೆ, ಸಿದ್ದು ಮಖಣಾಪೂರ, ಬಸವರಾಜ ಬೈಚಬಾಳ, ರಾಜೇಶ ತಾವಸೆ, ವಿನೋದ ಕೋಳೂರಗಿ, ವಿಜಯ ಜೋಶಿ, ಶಾಂತಾ ಉತ್ಲಾಸರ, ಮಲ್ಲಮ್ಮ ಜೋಗೂರ, ಸುಷ್ಮಿತಾ, ಕಾಸುಗೌಡ ಬಿರಾದಾರ, ಮಹೇಂದ್ರ ನಾಯಕ, ಶಿಲ್ಪಾ ತಾರೇಕರ, ಶಿವಾನಂದ ಭೂಯ್ಯಾರ. ಶರಣು ಸಬರದ, ರಾಹುಲ ಜಾಧವ, ರವಿಕಾಂತ ಬಗಲಿ, ಈರಣ್ಣ ಪಟ್ಟಣಶೆಟ್ಟಿ, ಚನ್ನು ಚನಗೊಂಡ ಇದ್ದರು.
ಯಾರೋ ಒಬ್ಬ ಅವಿವೇಕಿ ಹೇಳಿದ ಮಾತ್ರಕ್ಕೆ ಅಲ್ಲಿ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸುವುದೆಂದರೆ ಇನ್ನೇನು? ಇದು ಧರ್ಮವಿರೋಧಿ ಕಾರ್ಯ.– ರಮೇಶ ಜಿಗಜಿಣಗಿ, ಸಂಸದ
ಧರ್ಮಸ್ಥಳಕ್ಕೆ ಜೆಡಿಎಸ್ ಯಾತ್ರೆ
ವಿಜಯಪುರ: ಹಾಸನದಿಂದ ಜೆಡಿಎಸ್ ಆಯೋಜಿಸಿರುವ ಧರ್ಮಸ್ಥಳ ಚಲೋ ಯಾತ್ರೆಯಲ್ಲಿ ಜಿಲ್ಲೆ ನೂರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಜೆ.ಡಿ.ಎಸ್. ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಮಾಡಗಿ ಹೇಳಿದರು. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಧರ್ಮಸ್ಥಳ ವಿಷಯದಲ್ಲಿ ಕೈ ಹಾಕಿರುವ ಕಾಂಗ್ರೆಸ್ ಅಳಿಗಾಲ ಆರಂಭವಾಗಿದೆ ಎಂದರು.
ಧರ್ಮಸ್ಥಳದಲ್ಲಿ ಸಾಮೂಹಿಕ ಹತ್ಯೆ ಆರ್ಥಿಕ ಅವ್ಯವಹಾರ ನಡೆದಿದೆ ಎಂಬ ಇಲ್ಲ ಸಲ್ಲದ ಆರೋಪ ನಿರಾಧಾರ ಯಾವ ಆರೋಪವೂ ಸಾಬೀತಾಗಿಲ್ಲ ಎಸ್.ಐ.ಟಿ. ತನಿಖೆ ಕಾರ್ಯಾಚರಣೆ ನಡೆದಾಗ ಒಂದೇ ಒಂದು ಮೂಳೆ ಪತ್ತೆಯಾಗಿಲ್ಲ ಎಂದರು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಪ್ಪುಗೌಡ ಪಾಟೀಲ ಮನಗೂಳಿ ಮುಖಂಡರಾದ ರಾಜು ಹಿಪ್ಪರಗಿ ಪೀರಪಾಷಾ ಗಚ್ಚಿನಮಹಲ ಸುಭಾಷ ರಾಠೋಡ ನಿಂಗನಗೌಡ ಸೊಲ್ಲಾಪೂರ ಸಂಜೀವ ಹಿರೇಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.