ADVERTISEMENT

ವಿಜಯಪುರ: ಡ್ರ್ಯಾಗನ್ ಬೆಳೆದು ಮೊದಲ ವರ್ಷವೇ ಲಕ್ಷ ಆದಾಯ

ಸಾವಯವ ಕೃಷಿಗೆ ಒತ್ತು

ಪರಮೇಶ್ವರ ಎಸ್.ಜಿ.
Published 11 ಜುಲೈ 2025, 6:23 IST
Last Updated 11 ಜುಲೈ 2025, 6:23 IST
ತಿಕೋಟಾ ತಾಲ್ಲೂಕಿನ ರತ್ನಾಪುರ ಗ್ರಾಮದ ಬಾಬಾಸಾಹೇಬ ಸಿದ್ದಪ್ಪ ಗಗನಮಾಲಿ ಅವರು ತಂದೆಯೊಂದಿಗೆ ತೋಟದಲ್ಲಿ ಬೆಳೆದ ಡ್ರ್ಯಾಗನ್ ಕಾಯಿ ತೆಗೆಯುತ್ತಿರುವುದು
ತಿಕೋಟಾ ತಾಲ್ಲೂಕಿನ ರತ್ನಾಪುರ ಗ್ರಾಮದ ಬಾಬಾಸಾಹೇಬ ಸಿದ್ದಪ್ಪ ಗಗನಮಾಲಿ ಅವರು ತಂದೆಯೊಂದಿಗೆ ತೋಟದಲ್ಲಿ ಬೆಳೆದ ಡ್ರ್ಯಾಗನ್ ಕಾಯಿ ತೆಗೆಯುತ್ತಿರುವುದು   

ತಿಕೋಟಾ: ದ್ರಾಕ್ಷಿ, ದಾಳಿಂಬೆ ಬೆಳೆಯುವ ಪ್ರದೇಶದಲ್ಲಿ ಸಾವಯವ ಕೃಷಿ ಮೂಲಕ ಡ್ರ್ಯಾಗನ್ ಬೆಳೆದು ಮೊದಲ ವರ್ಷವೇ ₹ 1 ಲಕ್ಷ ಆದಾಯ ಪಡೆದಿದ್ದಾರೆ ತಾಲ್ಲೂಕಿನ ರತ್ನಾಪುರ ಗ್ರಾಮದ ಬಾಬಾಸಾಹೇಬ ಸಿದ್ದಪ್ಪ ಗಗನಮಾಲಿ.

ಇವರು ರೈಲ್ವೆ ಇಲಾಖೆಯಲ್ಲಿ ಟೆಕ್ನಿಕಲ್‌ ವಿಭಾಗದಲ್ಲಿ ಮೆಕ್ಯಾನಿಕ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಕೃಷಿಯಲ್ಲೂ ಆಸಕ್ತಿ ಹೊಂದಿದ್ದು, ವಿಶೇಷ ಹೈದರಾಬಾದ್ ಡೆಕನ್ ಪಿಂಕ್ (ಸಿ ತಳಿಯ) ಡ್ರ್ಯಾಗನ್ ಸಸಿಗಳನ್ನು ಮಹಾರಾಷ್ಟ್ರದ ಅಕ್ಲುಜ್ ಹತ್ತಿರ ತಾಂದುಳವಾಡಿಯಿಂದ ತಂದು ನಾಟಿ ಮಾಡಿದ್ದಾರೆ.

ಪ್ರತಿ ಸಸಿ ಒಂದಕ್ಕೆ ₹ 40 ರಂತೆ 4,500 ಸಸಿ ತಂದು ಸಾಲಿನಿಂದ ಸಾಲಿಗೆ ಹತ್ತು ಅಡಿ, ಸಸಿಯಿಂದ ಸಸಿಗೆ ಎರಡು ಅಡಿ ಅಂತರದಲ್ಲಿ ನಾಟಿ ಮಾಡಿದ್ದಾರೆ. ಹನ್ನೆರಡು ಅಡಿ ಅಂತರದಲ್ಲಿ ಏಳು ಅಡಿಯ ಕಲ್ಲಿನ ಕಂಬಗಳನ್ನು ನೆಡಲಾಗಿದ್ದು ಅದಕ್ಕೆ ನಾಲ್ಕು ಎಳೆಯ ತಂತಿ ಹಾಕಲಾಗಿದೆ. ಒಂದು ಎಳೆ ತಂತಿಯಿಂದ ಡ್ರಿಪ್ ಕಟ್ಟಲಾಗಿದೆ. ಆರಂಭದಲ್ಲಿ ಡ್ರೀಪ್, ತಂತಿ, ಕಲ್ಲು ಎಲ್ಲ ಸೇರಿ ₹ 6.5 ಲಕ್ಷ ಖರ್ಚು ಮಾಡಿದ್ದಾರೆ.
ಹದಿನೆಂಟು ತಿಂಗಳಲ್ಲಿ ಸಸಿ ಬೆಳೆದು ಈಗ ಕಾಯಿಯಾಗಿ ಆದಾಯ ಕೈ ಸೇರುತ್ತಿದೆ.

ADVERTISEMENT

‘ಮೊದಲ ವರ್ಷದ ಬೆಳೆಯ ಆದಾಯ ₹ 1 ಲಕ್ಷ ಕೈ ಸೇರಿದೆ. ತೋಟದ ಹತ್ತಿರ ಅಥಣಿ-ಬೆಳಗಾವಿ- ಜತ್ತ ಹೆದ್ದಾರಿ ಮೂಲಕ ಹಾಯ್ದು ಹೋಗುವ ಪ್ರಯಾಣಿಕರು ವಾಹನಗಳನ್ನು ನಿಲ್ಲಿಸಿ ಖರೀದಿ ಮಾಡಿಕೊಂಡು ಹೋಗುತ್ತಾರೆ. ಆರಂಭದಲ್ಲಿ ಕೆ.ಜಿಗೆ ₹ 200 ಇತ್ತು, ನಂತರ ₹ 150 ಆಯಿತು. ಸದ್ಯ ₹ 100 ರಿಂದ ₹120 ರಂತೆ ಮಾರಾಟ ನಡೆದಿದೆ. ಇನ್ನೂ ಪಡದಲ್ಲಿ ಡ್ರ್ಯಾಗನ್ ಕಾಯಿ ಇದ್ದು, ನಾಲ್ಕರಿಂದ ಐದು ಲಕ್ಷ ರೂಪಾಯಿ ಆದಾಯ ಬರಬಹುದು. ಆರಂಭದಲ್ಲಿ ಮಾಡಿದ ₹ 6.5 ಲಕ್ಷ ಖರ್ಚು ಮೊದಲ ವರ್ಷವೇ ಬರಬಹುದು ಎಂಬ ವಿಶ್ವಾಸ ಇದೆ’ ಎಂದು ರೈತ ಬಾಬಾಸಾಹೇಬ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾವಯವಕ್ಕೆ ಒತ್ತು: ಯಾವುದೇ ರಾಸಾಯನಿಕ ಗೊಬ್ಬರ ಕೀಟನಾಶಕ ಬಳಸದೇ ಸಾವಯವ ಕೃಷಿಗೆ ಒತ್ತು ನೀಡಿದ್ದಾರೆ. ತೋಟದಲ್ಲಿ 500 ಲೀಟರ್ ನೀರಿನ ಸಿಂಟೆಕ್ಸ್‌ ಅಳವಡಿಸಿ ಅದರಲ್ಲಿ, 50 ಲೀಟರ್ ಗೋಮೂತ್ರ, ಆಕಳ ಸಗಣಿ, 5 ಕೆ.ಜಿ ಕಡಲೆ ಹಿಟ್ಟು, ಬೆಲ್ಲ, ಐದಾರು ಲೀಟರ್ ಮಜ್ಜಿಗೆ, ಜಮೀನಿನ ಮಣ್ಣು ಎಲ್ಲವು ಸೇರಿಸಿ ಒಂಬತ್ತು ದಿನ ನೆನೆಸಿದ ನಂತರ ಜೀವಾಮೃತ ತಯಾರಾಗುತ್ತದೆ. ನಂತರ ಆ ಜೀವಾಮೃತವನ್ನು ಡ್ರಿಪ್ ಮೂಲಕ ಸಸಿಗಳಿಗೆ ಬಿಡಲಾಗುತ್ತದೆ. ದಸ್ ಪರ್ನಿಯಾರ್ಕ (ಹತ್ತು ಎಲೆಗಳಿಂದ ತಯಾರಿಸಿದ ರಸ) ಬೇವಿನ ಎಲೆ, ಎಕ್ಕಿ ಎಲೆ, ಇಂಗ್, ಮೆಣಸ, ಬಳ್ಳೊಳ್ಳಿ ಇತರ ತಪ್ಪಲ ಸೇರಿಸಿ 40 ದಿನ ಕೊಳೆಯಲು ಇಟ್ಟು ಅದರಿಂದ ತಯಾರಿಸಿದ ರಸವನ್ನು ನೀರಿನಲ್ಲಿ ಹಾಕಿ ಸಿಂಪಡನೆ ಮಾಡಿ ಕೀಟಗಳನ್ನು ದೂರ ಮಾಡಲಾಗುತ್ತದೆ. ಬೇರುಗಳಿಗೆ ತಿಪ್ಪೆಗೊಬ್ಬರ ಹಾಗೂ ಜೀವಾಮೃತ ಬಿಡಲಾಗುತ್ತದೆ.

ತಿಕೋಟಾ ತಾಲ್ಲೂಕಿನ ರತ್ನಾಪುರ ಗ್ರಾಮದ ಬಾಬಾಸಾಹೇಬ ಸಿದ್ದಪ್ಪ ಗಗನಮಾಲಿ ಅವರ ತಂದೆಯೊಂದಿಗೆ ತೋಟದಲ್ಲಿ ಬೆಳೆದ ಡ್ರ್ಯಾಗನ್ ಕಾಯಿ ತೆಗೆಯುತ್ತಿರುವುದು
ತಿಕೋಟಾ ತಾಲ್ಲೂಕಿನ ರತ್ನಾಪುರ ಗ್ರಾಮದ ಬಾಬಾಸಾಹೇಬ ಸಿದ್ದಪ್ಪ ಗಗನಮಾಲಿ ಅವರ ತೋಟದಲ್ಲಿ ಸಾವಯವ ಕೃಷಿ ಮಾಡಲಿಕ್ಕೆ ಜೀವಾಮೃತ ತಯಾರಿಸುವ ಘಟಕ.
ಎರಡು ಎಕರೆ ತೋಟದಲ್ಲಿ ಒಂದು ಎಕರೆ ಡ್ರ್ಯಾಗನ್ ಬೆಳೆ ಇದ್ದು ಉಳಿದ ಒಂದು ಎಕರೆಯಲ್ಲಿ ಮೆಕ್ಕೆಜೋಳ ಗೋಧಿ ಹಾಗೂ ದನಗಳಿಗೆ ಮೇವು ಬೆಳೆಯುತ್ತಿದ್ದೇವೆ. ಒಂದು ಬೋರವೆಲ್ ಇದೆ
ಸಿದ್ದಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.