ADVERTISEMENT

ವಿಜಯಪುರ ಜಿಲ್ಲೆಯಾದ್ಯಂತ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2025, 7:13 IST
Last Updated 31 ಮಾರ್ಚ್ 2025, 7:13 IST
   

ವಿಜಯಪುರ: ವಿಜಯಪುರ ಜಿಲ್ಲೆಯಾದ್ಯಂತ ಈದ್ - ಉಲ್- ಫಿತ್ರ್ ಹಬ್ಬವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.

ಒಂದು ತಿಂಗಳಿಂದ ರೋಜಾ, ರಾತ್ರಿ ಹೊತ್ತು ವಿಶೇಷ ತರಾವೀಹ್ ನಮಾಜ್ ಸಲ್ಲಿಸಿದ ಮುಸ್ಲಿಂ ಬಾಂಧವರು ಸೋಮವಾರ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು. ಹೊಸ ಬಟ್ಟೆ ಧರಿಸಿ, ಸುಗಂಧದ್ರವ್ಯ ಹಚ್ಚಿಕೊಂಡು ಮಸೀದಿಗಳಿಗರ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ವಿಜಯಪುರದ ದಖನಿ ಈದ್ಗಾ, ಆಲಂಗೀರ ಈದ್ಗಾ, ಜಾಮೀಯಾ ಮಸೀದಿ, ಧಾತ್ರಿ ಮಸೀದಿ, ಯಾಸೀನ್ ಮಸೀದಿ, ಆಸಾರದ ಮಹಲ್ ಸೇರಿದಂತೆ ಅನೇಕ ಮಸೀದಿಗಳಲ್ಲಿ ಈದ್ ಉಲ್ ಫಿತ್ರ್ ಹಬ್ಬದ ಅಂಗವಾಗಿ ವಾಜಿಬ್ ನಮಾಜ್ ಸಲ್ಲಿಸಿದರು.

ADVERTISEMENT

ನಮಾಜ್ ಸಲ್ಲಿಕೆಗೆ ಹೋಗುವ ಸಂದರ್ಭದಲ್ಲಿ ತಮ್ಮ ಕುಟುಂಬ, ಸ್ನೇಹಿತರೊಡನೆ ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ಲಾ ಇಲಾಹ ಇಲ್ಲಲ್ಲಾಹ...ಎಂದು ತಕಬೀರ್ ಹೇಳುತ್ತಾ ಹೋಗುತ್ತಿರುವ ದೃಶ್ಯ ಕಂಡು ಬಂದಿತು.

ನಮಾಜ್ ಪೂರ್ಣಗೊಂಡ ಬಳಿಕ ಪರಸ್ಪರ ಈದ್ ಮುಬಾರಕ್, ಈದ್ ಮುಬಾರಕ್ ಎಂದು ಶುಭಾಷಯ ವಿನಿಮಯ ಮಾಡಿಕೊಂಡರು.

ನಮಾಜ್ ಸಲ್ಲಿಸಿದ ನಂತರ ಮನೆಯಲ್ಲಿ ಈದ್ ಪ್ರಯುಕ್ತ ಸಿದ್ದಪಡಿಸಲಾಗುವ ಹಾಲು, ಒಣ ಹಣ್ಣುಗಳಿಂದ ತಯಾರಿಸಿದ ಸೀರ್ ಕುರಮಾ ಸವಿದರು.

ಸ್ನೇಹಿತರಿಗಾಗಿ ಔತಣಕೂಟ ಏರ್ಪಡಿಸಿದ್ದರು.

ಹಿಂದೂ ಬಾಂದವರು ಪ್ರೀತಿಯ ಔತಣಕೂಟದಲ್ಲಿ ಭಾಗಿಯಾಗಿ ಶುಭ ಕೋರಿದರು.

‘ದೇಶಭಕ್ತಿ ನಮ್ಮ ಜೀವನದ ಅಂಗವಾಗಬೇಕು’

‘ಅದ್ಭುತವಾದ ಭಾರತ ದೇಶ ನಮ್ಮದು, ಈ ಮಹಾನ್ ದೇಶದ ಬಗ್ಗೆ ನಮ್ಮ ಅಭಿಮಾನ ನಮ್ಮ ಜೀವನದ ಅಂಗವಾಗಬೇಕಿದೆ’ ಎಂದು ಕರ್ನಾಟಕ ಅಹಲೆ ಸುನ್ನತ್ ಜಮಾತ್ ರಾಜ್ಯ ಘಟಕದ ಅಧ್ಯಕ್ಷ ಹಜರತ್ ಸಯ್ಯದ್ ತನ್ವೀರ ಪೀರಾ ಹಾಶ್ಮಿ ಕರೆ ನೀಡಿದರು.

ನಗರದ ದಖನಿ ಈದ್ಗಾದಲ್ಲಿ ನಮಾಜ್ ಬಳಿಕ ಧರ್ಮ ಸಂದೇಶ ನೀಡಿದ ಅವರು, ‘ನಾವು ವಾಸಿಸುವ ದೇಶದ ಸಂಸ್ಕೃತಿಯನ್ನು ಗೌರವಿಸಬೇಕು ಎಂದು ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ್ ಸಾರಿದ್ದಾರೆ, ಭಾವೈಕ್ಯತೆ ನೆಲೆಯಾಗಿರುವ ನಮ್ಮ ಭಾರತದ ಬಗ್ಗೆ ಹೆಮ್ಮೆ, ಅಭಿಮಾನ ಬೆಳೆಸಿಕೊಳ್ಳಬೇಕು’ ಎಂದರು.

‘ನಮ್ಮ ದೇಶದ ಶ್ರೇಷ್ಠ ಸಂವಿಧಾನವು, ತ್ರಿವರ್ಣ ಧ್ವಜದ‌ ಬಗ್ಗೆ ಅದಮ್ಯವಾದ ಭಕ್ತಿ ಹೊಂದಬೇಕು’ ಎಂದು ಕರೆ ನೀಡಿದರು.

‘ಇಂದು ಯುವಕರು ಮಾದಕ ವ್ಯಸನದ ಜಾಲಕ್ಕೆ ಸಿಲುಕಿಕೊಂಡಿದೆ, ಈ ಮಾದಕ ದ್ರವ್ಯ ವ್ಯಸನಗಳ‌ ಜಾಲದಿಂದ ಯುವ ಸಮೂಹವನ್ನು ಹೊರ ತರಲು ಸಮಾಜ ಹಿರಿಯರು ಮುಂದಾಗಬೇಕು’ ಎಂದರು.

‘ಯುವಜನತೆಯಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಸಕ್ರೀಯವಾಗುವಂತೆ ಪ್ರೇರಣೆ ನೀಡುವ ಕೆಲಸ ಮಾಡಬೇಕಿದೆ’ ಎಂದರು.

‘ಹಿಂದೂ ಬಾಂಧವರು ನಮ್ಮ ಸಹೋದರರು, ಅವರನ್ನೂ ಹಬ್ಬದ ಸಂಭ್ರಮದಲ್ಲಿ ಭಾಗಿ ಮಾಡಿಕೊಳ್ಳಿ, ಆತ್ಮೀಯತೆಯಿಂದ ಅವರನ್ನು ಔತಣಕೂಟಕ್ಕೆ ಕರೆಯಿರಿ, ಕೆಲವರು ವಿನಾಕಾರಣ ಸೃಷ್ಟಿ ಮಾಡುತ್ತಿರುವ ಹಿಂದೂ ಮುಸ್ಲಿಂ ಬೇಧಭಾವವನ್ನು ಅಳಿಸಿ ಹಾಕಿ’ ಎಂದರು.

‘ಬಟ್ಟೆ - ರೊಟ್ಟಿಗಿಂತ ಶಿಕ್ಷಣ ಮುಖ್ಯ’

‘ಹಳೆಯ ಬಟ್ಟೆ ಉಟ್ಟರೂ ಚಿಂತೆಯಿಲ್ಲ, ಬಟ್ಟೆ ಹಾಗೂ ರೊಟ್ಟಿಗಿಂತ ಶಿಕ್ಷಣಕ್ಕೆ ಆದ್ಯತೆ ನೀಡಿ, ಯಾರೊಬ್ಬರು ಶಿಕ್ಷಣದಿಂದ ವಂಚಿತರಾಗಬಾರದು, ಪ್ರತಿ ಮನೆಯಲ್ಲೂ ಶಿಕ್ಷಣವಂತರಿರಬೇಕು‘ ಎಂದರು.

‘ನಮ್ಮ ಬದುಕು ಸರಳತೆ ಇರಬೇಕು, ವಿನಾಕಾರಣ ಐಷಾರಾಮಿ, ತೋರಿಕೆಗಾಗಿ ಅನೇಕರು ಬಡ್ಡಿ ಜಾಲದಲ್ಲಿ ಸಿಲುಕುತ್ತಿದ್ದಾರೆ, ಬಡ್ಡಿ ವ್ಯವಹಾರ ಒಂದು ಅಪರಾಧ, ಬಡ್ಡಿ ವ್ಯವಹಾರದಿಂದ ಯಾರೂ ಪ್ರಗತಿಯಾಗಲು ಸಾಧ್ಯವಿಲ್ಲ, ಬಡ್ಡಿ ವ್ಯವಹಾರದಲ್ಲಿ ತೊಡಗಬೇಡಿ, ಬಡ್ಡಿ ಜಾಲದಲ್ಲಿ ಸಿಲುಕಬೇಡಿ, ಅನೇಕರು ಮದುವೆಗಾಗಿ ಬಡ್ಡಿಯಿಂದ ಸಾಲ ಎತ್ತುತ್ತಾರೆ, ಆದರೆ ಇಸ್ಲಾಂ ಸರಳತೆಯ ಮದುವೆಗೆ ಆದೇಶಿಸಿದೆ, ಹೀಗಾಗಿ ಬಡ್ಡಿ ಜಾಲದಲ್ಲಿ ಸಿಲುಕಬೇಡಿ‘ ಎಂದು ಕರೆ ನೀಡಿದರು.

‘ಈ ನೆಲದ ಅಣ್ಣ ಬಸವಣ್ಣನವರು ಅನೇಕ ವಚನಗಳನ್ನು ಬೋಧಿಸಿದ್ದಾರೆ, ವಚನಗಳಲ್ಲಿ ಮೌಲ್ಯವಿದೆ, ಶ್ರೇಷ್ಠ ತತ್ವಗಳಿವೆ, ಅವುಗಳನ್ನು ಓದುವ ಮನೋಭಾವ ಬೆಳೆಸಿಕೊಳ್ಳಿ‘ ಎಂದರು.

ನಂತರ ದೇಶದ ಒಳಿತಿಗಾಗಿ, ರೈತರ ಶ್ರೇಯೋಭಿವೃದ್ದಿ, ದೇಶದ ಸೈನಿಕರ ಆಯುರಾರೋಗ್ಯವೃದ್ದಿ ಹಾಗೂ ಸಮಸ್ತ ಮನುಕುಲದ ಒಳಿತಿಗಾಗಿ ಪ್ರಾರ್ಥನೆ ಮಾಡಲಾಯಿತು.

ಸಚಿವ ಎಂ.ಬಿ. ಪಾಟೀಲ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭ ಕೋರಿದರು.

ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಮಾಜಿ ಉಪಮೇಯರ್ ದಿನೇಶ ಹಳ್ಳಿ, ಮುಖಂಡರಾದ ಎಂ.ಸಿ. ಮುಲ್ಲಾ, ರವೂಫ್ ಶೇಖ, ಪ್ರೊ.ವಾಜೀದ ಪೀರಾ, ಚಾಂದಸಾಬ ಗಡಗಲಾವ, ಶಕೀಲ್ ಬಾಗಮಾರೆ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.