ADVERTISEMENT

ವಿಜಯಪುರ | ನಕಲಿ ವೈದ್ಯರ ಕಡಿವಾಣಕ್ಕೆ ಅಗತ್ಯ ಕ್ರಮ: ಡಾ.ಆನಂದ ಕೆ.

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 2:16 IST
Last Updated 5 ಫೆಬ್ರುವರಿ 2026, 2:16 IST
ಡಾ.ಆನಂದ ಕೆ.
ಡಾ.ಆನಂದ ಕೆ.   

ವಿಜಯಪುರ: ಜಿಲ್ಲೆಯಲ್ಲಿ ನಕಲಿ ವೈದ್ಯರ ಕುರಿತು ದೂರುಗಳಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಕಲಿ ವೈದ್ಯರ ಕಡಿವಾಣಕ್ಕೆ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಕೆ.ಪಿ.ಎಂ.ಇ ಹಾಗೂ ಪಿ.ಸಿ. ಅಂಡ್‌ ಪಿ.ಎನ್.ಡಿ.ಟಿಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸಮಿತಿ ರಚನೆ:

ADVERTISEMENT

ನಕಲಿ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳ ತಂಡವನ್ನು ರಚಿಸಲು ನಿರ್ಣಯಿಸಿ, ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರು, ತಾಲ್ಲೂಕಿನ ಪೊಲೀಸ್ ಇಲಾಖೆಯ ಪಿ.ಎಸ್.ಐ, ಸಿ.ಪಿ.ಐ, ತಾಲ್ಲೂಕಿನ ಅಯುಷ್ ಅಧಿಕಾರಿ, ತಾಲ್ಲೂಕು ಆರೋಗ್ಯಾಧಿಕಾರಿ, ತಾಲ್ಲೂಕಿನ ಸಿ.ಡಿ.ಪಿ.ಒ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ನಕಲಿ ವೈದ್ಯರ ಕಡಿವಾಣಕ್ಕೆ ಸಮಿತಿಯನ್ನು ರಚಿಸಲಾಯಿತು. 

707 ಖಾಸಗಿ ಆಸ್ಪತ್ರೆ ನೋಂದಣಿ:

ವಿಜಯಪುರ ತಾಲ್ಲೂಕಿನಲ್ಲಿ 707 ಖಾಸಗಿ ಆರೋಗ್ಯ ಸಂಸ್ಥೆಗಳು ಜಿಲ್ಲಾ ಕೆ.ಪಿ.ಎಂ.ಇ ಅಡಿಯಲ್ಲಿ ನೋಂದಣಿ ಆಗಿರುತ್ತವೆ, ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ 102, ಮುದ್ದೇಬಿಹಾಳ ತಾಲ್ಲೂಕಿನಲ್ಲಿ 111, ಇಂಡಿ ತಾಲ್ಲೂಕಿನಲ್ಲಿ 148, ಸಿಂದಗಿ ತಾಲ್ಲೂಕಿನಲ್ಲಿ 145, ಒಟ್ಟು 1213 ಖಾಸಗಿ ಆಸ್ಪತ್ರೆಗಳು ಜಿಲ್ಲಾ ಕೆ.ಪಿ.ಎಂ.ಇ ಅಡಿಯಲ್ಲಿ ನೋಂದಣಿ ಆಗಿರುತ್ತವೆ. ಅದರಲ್ಲಿ 976 ಖಾಸಗಿ ಆರೋಗ್ಯ ಸಂಸ್ಥೆಗಳು ನಿಯಮಾನುಸಾರ ಬಣ್ಣದ ಫಲಕಗಳನ್ನು ಅಳವಡಿಸಿಕೊಂಡಿವೆ.

ಜಿಲ್ಲೆಯ ಶೇ 80.46 ರಷ್ಟು ನೋಂದಾಯಿತ ಎಲ್ಲ ಖಾಸಗಿ ಆರೋಗ್ಯ ಸಂಸ್ಥೆಗಳು ವೈದ್ಯಕೀಯ ಚಿಕಿತ್ಸಾ ಪದ್ಧತಿ, ಸಂಸ್ಥೆಯ ಹೆಸರು, ಮಾಲೀಕರು, ವ್ಯವಸ್ಥಾಪಕರ ಹೆಸರು ಹಾಗೂ ಸಂಸ್ಥೆಯಲ್ಲಿ ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳನ್ನೊಳಗೊಂಡ ಫಲಕವನ್ನು ಪ್ರದರ್ಶಿಸಿದಂತಾಗಿದೆ ಎಂದು ಸಭೆಯ ಗಮನಕ್ಕೆ ತರಲಾಯಿತು. 

ಸಿಂದಗಿ ಹಾಗೂ ಇಂಡಿ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಣ್ಣ ಬಣ್ಣದ ಫಲಕಗಳನ್ನು ಅಳವಡಿಸಲು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಯಿತು.

ಸೇವಾ ಶುಲ್ಕ ಬಾಕಿ:

ಕೆ.ಪಿ.ಎಂ.ಪಿ.ಟಿಯ ಸಿ.ಬಿ.ಎಂ.ಡಬ್ಯೂ.ಟಿ.ಎಫ್‍ನಲ್ಲಿ ಸುಮಾರು 15 ಖಾಸಗಿ ವೈದ್ಯಕೀಯ ಆರೋಗ್ಯ ಸಂಸ್ಥೆಗಳು ಒಟ್ಟು ₹25,59,677 ಸೇವಾ ಶುಲ್ಕ ಪಾವತಿಸದೇ ಇರುವುದನ್ನು ಅಧಿಕಾರಿಗಳು ಗಮನಕ್ಕೆ ತಂದಾಗ, ಜಿಲ್ಲಾಧಿಕಾರಿಗಳು ಈ ಆರೋಗ್ಯ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲಾ ತಪಸಣಾ ಮತ್ತು ಮೇಲ್ವಿಚಾರಣಾ ಸಮಿತಿ ತಂಡದವರು ಪ್ರತಿ ತ್ರೈಮಾಸಿಕದಲ್ಲಿ ಜಿಲ್ಲೆಯಲ್ಲಿನ ಎಲ್ಲಾ ನೋಂದಾಯಿತ ಸ್ಕ್ಯಾನಿಂಗ್ ಸೆಂಟರ್‌ಗಳ ಆಸ್ಪತ್ರೆಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು ಮತ್ತು ಪಿಸಿ ಅಂಡ್‌ ಪಿಎನ್‍ಡಿಟಿ ಕಾಯ್ದೆಯ ಅನುಷ್ಠಾನದ ಬಗ್ಗೆ ಪರಿಶೀಲನೆ ಕೈಗೊಂಡು ನೂನ್ಯತೆಗಳು ಕಂಡು ಬರುವ ಸ್ಕ್ಯಾನಿಂಗ್ ಸೆಂಟರ್/ಆಸ್ಪತ್ರೆಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಸೂಚಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ ಗುಣಾರಿ  ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಪರಶುರಾಮ ಹಿಟ್ನಳ್ಳಿ, ಜಿಲ್ಲಾ ಜಾರಿ ಅಧಿಕಾರಿ ಡಾ.ರಾಜೇಶ್ವರಿ ಗೊಲಗೇರಿ, ಜಿಲ್ಲಾ ಯೋಜನಾ ಅಭಿವೃದ್ಧಿ ಅಧಿಕಾರಿ ಡಾ. ಜಾನ್ ಕಟವಟೆ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಕೆ. ಡಿ.ಗುಂಡಬಾವಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ. ಎಂ. ಕೋಲೂರ  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.