
ಬಬಲೇಶ್ವರ: ದೇಶಕ್ಕೆ ಪ್ರಸ್ತುತ ಸಂದರ್ಭದಲ್ಲಿ ಬಾಯಿ ಮಾತಿನ ಘೋಷಣೆಗೆ ಸೀಮಿತಕ್ಕಿಂತ ರೈತರ ಸಂಕಷ್ಟಗಳಿಗೆ ಸ್ಪಂದಿಸಿ, ನೊಂದ ರೈತರ ಕಣ್ಣೀರು ಒರೆಸುವ ಪ್ರಧಾನಿ ಬೇಕಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಬಬಲೇಶ್ವರ ತಾಲ್ಲೂಕಿನ ಜೈನಾಪುರದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದರು.
ದೇಶದ ರೈತರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ 370 ದಿನಕ್ಕೂ ಹೆಚ್ಚು ದಿನ ಹೋರಾಟ ಮಾಡಿದರೂ ಕೇಂದ್ರ ಸರ್ಕಾರ ಸ್ಪಂದಿಸಲಿಲ್ಲ. ಆದ, ಸಿದ್ಧರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಗುರ್ಲಾಪುರ ಕ್ರಾಸ್ ನಲ್ಲಿ ಕಬ್ಬು ಬೆಳೆಗಾರರು ಹೋರಾಟಕ್ಕಿಳಿದ ವಾರದಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಡಲಾಯಿತು. ಇದರಿಂದ ದೇಶದ ಇತಿಹಾಸದಲ್ಲೇ ನಮ್ಮ ಸರ್ಕಾರ ರಾಜ್ಯದ ಕಬ್ಬು ಬೆಳೆಗಾರರಿಗೆ ₹200 ರಿಂದ ₹350 ಹೆಚ್ಚಿನ ದರ ಕೊಡಿಸಿದೆ ಎಂದರು.
ಕೇಂದ್ರ ಸರ್ಕಾರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುತ್ತದೆಯೇ ಹೊರತು, ಖರೀದಿಗೆ ಮುಂದಾಗುವುದಿಲ್ಲ. ಮೆಕ್ಕೆಜೋಳಕ್ಕೆ ₹2400 ಘೋಷಿಸಿದರೂ ಖರೀದಿಗೆ ವ್ಯವಸ್ಥೆ ಮಾಡಲಿಲ್ಲ. ಹೀಗಾಗಿ ಭಾಷಣಕ್ಕಿಂತ ರೈತರ ಭಾವನೆ ಅರಿತು ಅನುಷ್ಠಾನಕ್ಕೆ ತರುವ ಯೋಗ್ಯ ಪ್ರಧಾನಿ ಬೇಕಿದೆ ಎಂದರು.
ತೊಗರಿ, ಈರುಳ್ಳಿ, ಜೋಳ, ದ್ರಾಕ್ಷಿ ಹೀಗೆ ಏನೆ ಬೆಳೆ ಬೆಳೆದರೂ ರೈತರ ಬೆಳೆಗೆ ವೈಜ್ಞಾನಿಕ ದರ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೃಷಿ ಪ್ರಧಾನ ಭಾರತದಲ್ಲಿ ಶೇ 70 ಜನರಿಗೆ ಕೃಷಿ ಕ್ಷೇತ್ರವೇ ಉದ್ಯೋಗ ನೀಡಿದೆ. ಶೇ 3 ರಷ್ಟು ಮಾತ್ರ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ದೇಶದ ರೈತರ ಹಿತ ರಕ್ಷಣೆಗೆ ಮುಂದಾಗಬೇಕು. ಇಲ್ಲವಾದಲ್ಲಿ ಬಾಂಗ್ಲಾದೇಶ, ಪಾಕಿಸ್ತಾನಕ್ಕೆ ಬಂದ ದುರ್ಗತಿ ಬರಲಿದೆ ಎಂದು ಎಚ್ಚರಿಸಿದರು.
ದೇಶದಲ್ಲಿ 5 ಕೋಟಿ ರೈತರು ಕಬ್ಬು ಬೆಳೆಯುತ್ತಿದ್ದಾರೆ.ಆದರೂ,ಕೇಂದ್ರ ಸರ್ಕಾರ ಸಕ್ಕರೆ ರಫ್ತಿಗೆ ಅವಕಾಶ ನೀಡುತ್ತಿಲ್ಲ, ಈ ಬಗ್ಗೆ ತ್ವರಿತ ಕ್ರಮವಾಗಬೇಕು. ಎಥೆನಾಲ್ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಆಗ್ರಹಿಸಿದರು.
ರೈತರು ಕೂಡ ಕಬ್ಬು ಬೆಳೆಗೆ ನೂರಿನ್ನೂರು ರೂಪಾಯಿ ಬೇಡಿಕೆ ಇರಿಸಿ ಹೋರಾಟ ಮಾಡುವ ಬದಲು ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಪ್ರಗತಿಪರ ರೈತರಂತೆ 100-120 ಟನ್ ಕಬ್ಬು ಉತ್ಪಾದಿಸುವಲ್ಲಿ ಮುಂದಾಗಬೇಕು ಎಂದು ಸಲಹೆ ನೀಡಿದರು.
ಆಲಮೇಲದ ಶ್ರೀಗಳು, ಪ್ರಭುಸ್ವಾಮೀ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಸಿದ್ದಣ್ಣ ದೇಸಾಯಿ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕುಮಾರ ದೇಸಾಯಿ, ಜಿ.ಪಂ. ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಗಿರೀಶ ಕೋರಡ್ಡಿ, ಕಿರಣ ಹುದ್ದಾರ, ಗುರು ಬೆಳ್ಳುಬ್ಬಿ ಉಪಸ್ಥಿತರಿದ್ದರು.
ರಾಜ್ಯ ಸರ್ಕಾರ ರೈತರಿಗೆ ನೀರು ವಿದ್ಯುತ್ ಉಚಿತ ನೀಡುವ ಜೊತೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ. ರಿಯಾಯಿತಿ ದರದಲ್ಲಿ ಬೀಜ ಗೊಬ್ಬರ ಪೂರೈಸುತ್ತಿದ್ದು ಸದ್ಬಳಕೆಗೆ ಮುಂದಾಗಬೇಕುಶಿವಾನಂದ ಪಾಟೀಲ ಸಚಿವ
ಅನ್ನದಾತರಿಗೆ ತುಲಭಾರ ಸಮರ್ಪಣೆ
ಕಬ್ಬು ಬೆಳೆಗಾರರು ಸಚಿವ ಶಿವಾನಂದ ಪಾಟೀಲ ಅವರಿಗೆ ತುಲಾಭಾರ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ತಾವು ತುಲಾಭಾರ ಮಾಡಿಸಿಕೊಳ್ಳಲು ನಿರಾಕರಿಸಿದ ಸಚಿವರು ಪ್ರಥಮ ಬಾರಿಗೆ ಕಬ್ಬು ಬೆಳೆಗಾರರ ಸಂಘಟನೆ ಮಾಡಿರುವ ಸಮೀರವಾಡಿಯ ರಾಮನಗೌಡ ಪಾಟೀಲ ಅವರಿಗೆ ತುಲಾಭಾರ ನೆರವೇರಿಸಿದರು. ಆ ಮೂಲಕ ತಮಗೆ ಸಲ್ಲಬೇಕಿದ್ದ ಗೌರವವನ್ನು ಅನ್ನದಾತರಿಗೆ ಸಮರ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.