ADVERTISEMENT

ವಿಜಯಪುರ: ಭೀಮಾ ತೀರದಲ್ಲಿ ಪ್ರವಾಹ ಭೀತಿ

ಮುಳಸಾವಳಗಿ ಹಳ್ಳದಲ್ಲಿ ಕೊಚ್ಚಿ ಹೋದ ರೈತ; ಪ್ರವಾಹಕ್ಕೆ ಸಿಲುಕಿದ್ದ ಏಳು ಜನರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 13:56 IST
Last Updated 15 ಅಕ್ಟೋಬರ್ 2020, 13:56 IST
ವಿಜಯಪುರದ ಐತಿಹಾಸಿಕ ಇಬ್ರಾಹಿಂ ರೋಜಾದ ಆವರಣ ಗೋಡೆ ಗುರುವಾರ‌ ಮಳೆಯಿಂದ ಉರುಳಿ ಬಿದ್ದಿದೆ– ಪ್ರಜಾವಾಣಿ ಚಿತ್ರ
ವಿಜಯಪುರದ ಐತಿಹಾಸಿಕ ಇಬ್ರಾಹಿಂ ರೋಜಾದ ಆವರಣ ಗೋಡೆ ಗುರುವಾರ‌ ಮಳೆಯಿಂದ ಉರುಳಿ ಬಿದ್ದಿದೆ– ಪ್ರಜಾವಾಣಿ ಚಿತ್ರ   

ವಿಜಯಪುರ: ಜಿಲ್ಲೆಯಲ್ಲಿ ಗುರುವಾರ ಮಳೆ ಪ್ರಮಾಣ ತಗ್ಗಿತ್ತು. ಆದರೆ, ಮಹಾರಾಷ್ಟ್ರದ ಜಲಾಶಯಗಳಿಂದ 3 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರನ್ನು ಹೊರಬಿಟ್ಟಿರುವುದರಿಂದ ಭೀಮಾ ನದಿ ಅಬ್ಬರ ಜೋರಾಗಿದೆ.

ಭೀಮಾ ನದಿಪಾತ್ರದ ಜನರಿಗೆ ಪ್ರವಾಹದ ಕುರಿತು ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ.ಜೊತೆಗೆಡೋಣಿ ನದಿಯೂ ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿದೆ.

ದೇವರಹಿಪ್ಪರಗಿ ತಾಲ್ಲೂಕಿನ ಮುಳಸಾವಳಗಿಯಲ್ಲಿ ಹಳ್ಳ ದಾಟಿ ಹೊಲಕ್ಕೆ ಹೊರಟಿದ್ದ ರೈತ ಶಿವಪುತ್ರ ಹಣಮಂತ ನಾಟೀಕಾರ(38) ನೀರಿನ ಸೆಳವಿಗೆ ಸಿಲುಕು ಬೆಳಿಗ್ಗೆ ಕೊಚ್ಚಿ ಹೋಗಿದ್ದು, ಸುಮಾರು ಅರ್ಧ ಕಿ.ಮೀ.ದೂರದಲ್ಲಿ ಮಧ್ಯಾಹ್ನ ದೇಹ ಪತ್ತೆಯಾಗಿದೆ.

ADVERTISEMENT

ಮುದ್ದೇಬಿಹಾಳ ತಾಲ್ಲೂಕಿನ ಕೋಳೂರು ಗ್ರಾಮದಲ್ಲಿ ಮನೆಯ ಗೋಡೆ ಬಿದ್ದು ಒಬ್ಬರು ಗಾಯಗೊಂಡಿರುತ್ತಾರೆ.

ಜಿಲ್ಲೆಯಲ್ಲಿ ಮಳೆಗೆ 811 ಮನೆಗಳು ಭಾಗಶಃ ಕುಸಿದಿವೆ, ಐದು ಜಾನುವಾರುಗಳು ಸಾವಿಗೀಡಾಗಿವೆ.

ದೂಳಖೇಡ, ಶಿರನಾಳ ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿರುವ 15 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ತಾಳಿಕೋಟೆ ಬಳಿ ದೋಣಿ ನದಿಯಲ್ಲಿ 7 ಜನ ಕಟ್ಟಿಗೆ ಕಡಿಯಲು ಹೋದವರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸಲಾಗಿದೆ.

ಸಿಂದಗಿ ತಾಲ್ಲೂಕಿನ ತಾರಾಪುರ ಗ್ರಾಮಕ್ಕೆ ನೀರು ಸುತ್ತುವರೆದಿರುತ್ತದೆ. ಇಂಡಿ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ50 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ದೇವರ ಹಿಪ್ಪರಗಿ ತಾಲ್ಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ಹಳ್ಳದ ನೀರು ಗ್ರಾಮದ 10 ಮನೆಗಳಿಗೆ ನುಗ್ಗಿರುವುದರಿಂದ, ಜನರನ್ನು ಶಾಲೆಗೆ ಸ್ಥಳಾಂತರಿಸಲಾಗಿದೆ.

ಸಿಂದಗಿ ತಾಲ್ಲೂಕಿನ ಮೋರಟಗಿಯಲ್ಲಿ ಒಂದು ಕಾಳಜಿ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ಅಲ್ಲಿ ಒಟ್ಟು 28 ಜನರಿಗೆ ಆಶ್ರಯವನ್ನು ಕಲ್ಪಿಸಲಾಗಿದೆ.

ವಿಜಯಪುರ–ಸೊಲ್ಲಾಪುರ ನಡುವಿನ ತಡವಲಗಾ ರೈಲು ಸೇತುವೆ ಭೀಮಾ ನದಿ ಪ್ರವಾಹಕ್ಕೆ ಸಿಲುಕಿದೆ. ನದಿ ನೀರು ಸೇತುವೆ ಮೇಲೆ ಹರಿಯುತ್ತಿದೆ. ಇದರಿಂದ ರೈಲು ಸಂಚಾರಕ್ಕೆ ಅಡಚಣೆಯಾಗಿದೆ.

ಬಗಲೂರ ಮತ್ತು ಘತ್ತರಗಾ ಸೇತುವೆ ಮೇಲೆ ನೀರು ಬಂದಿದ್ದು, ಸಿಂದಗಿ ಮತ್ತು ಅಫಜಲಪುರ ರಸ್ತೆ ಸಂಪರ್ಕ ಕಡಿತಗೊಂಡಿರುತ್ತದೆ.

ತಾಳಿಕೋಟೆ–ಹಡಗಿನಾಳ ನೆಲಟಮಟ್ಟದ ಸೇತುವೆ ಡೋಣಿ ಪ್ರವಾಹದಲ್ಲಿ ಮುಳುಗಿದೆ. ಎರಡು ದಿನಗಳಿಂದ ಮುಳುಗಿದ್ದ ದೇವರಹಿಪ್ಪರಗಿ–ಬಸವನ ಬಾಗೇವಾಡಿ ಸಂಪರ್ಕಿಸುವ ಸಾತಿಹಾಳ ಸೇತುವೆ ಗುರುವಾರ ಸಂಚಾರಕ್ಕೆ ಮುಕ್ತವಾಗಿದೆ.

ಸಣ್ಣನೀರಾವರಿ ಇಲಾಖೆಗೆ ಸೇರಿದ ಗುಂದವಾನ(ಸೈಟ್‌-2) ಕೆರೆಯ ಕೆನಾಲ್ ಗೇಟ್‌ ಹಾಗೂ ಕೆನಾಲ್ ಹಾನಿಗೆ ಒಳಗಾಗಿದ್ದು, ಅದನ್ನು ದುರಸ್ತಿ ಪಡಿಸಲಾಗಿದೆ. ಇದರಿಂದ ಬೆಳೆ ಹಾನಿಯಾಗಿದ್ದು, ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 3.6 ಸೆಂ.ಮೀ ಮಳೆಯಾಗಿದೆ. ಅಂದರೆ, ಶೇ1155 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ.ದೇವರ ಹಿಪ್ಪರಗಿಯಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಂದರೆ, 9.4ಸೆಂ.ಮೀ ಮಳೆಯಾಗಿದೆ.

ಹಾನಿ:

ಲೋಕೋಪಯೋಗಿ ಇಲಾಖೆಯ ಒಟ್ಟು 63.03 ಕಿ.ಮೀ. ರಸ್ತೆ ಮತ್ತು 2 ಸೇತುವೆಗಳು ಹಾನಿಗೊಳಗಾಗಿವೆ. ಮೂಲ ಸೌಕರ್ಯಗಳ ಹಾನಿ ಹಾಗೂಬೆಳೆ ಹಾನಿಯ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.