ADVERTISEMENT

ಕಬ್ಬು ಹಾನಿಗೆ ಪರಿಹಾರ ನೀಡಲು ನಿಧಿ ಸ್ಥಾಪನೆ: ಶಿವಾನಂದ ಪಾಟೀಲ ಘೋಷಣೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2025, 13:32 IST
Last Updated 20 ಜನವರಿ 2025, 13:32 IST
ಶಿವಾನಂದ ಪಾಟೀಲ
ಶಿವಾನಂದ ಪಾಟೀಲ   

ವಿಜಯಪುರ: ಅಗ್ನಿ ದುರಂತದಲ್ಲಿ ಸಂಭವಿಸುವ ಕಬ್ಬಿನ ಹಾನಿಗೆ ಪರಿಹಾರ ನೀಡಲು ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿಂದ ನಿಧಿ ಸ್ಥಾಪಿಸಲಿದ್ದು, ಈ ವರ್ಷದಿಂದಲೇ ₹50 ಲಕ್ಷ ತೆಗೆದಿರಿಸಲಾಗುವುದು ಎಂದು ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಘೋಷಣೆ ಮಾಡಿದರು.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ನೀಡುವ ಪರಿಹಾರ ಅತ್ಯಲ್ಪ ಎಂಬ ಕಾರಣಕ್ಕೆ ನಿಜಲಿಂಗಪ್ಪ ಸಂಸ್ಥೆಯಿಂದಲೂ ಪರಿಹಾರ ನೀಡುವ ನಿರ್ಧಾರ ಕೈ ಗೊಳ್ಳಲಾಗಿದೆ ಎಂದು ಹೇಳಿದರು.

ಆರಂಭದಲ್ಲಿ ಗರಿಷ್ಠ ಐದು ಎಕರೆ ಮಿತಿಯಲ್ಲಿ ಪರಿಹಾರ ನೀಡಲಿದ್ದು, ನಂತರ ಈ ಪರಿಹಾರ ಯೋಜನೆಯನ್ನು ವಿಸ್ತರಣೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ಮತ್ತಿತರ ಕಾರಣಗಳಿಂದ ಕಬ್ಬು ಹಾನಿಗೀಡಾದರೂ ಸಕ್ಕರೆ ಕಾರ್ಖಾನೆಗಳು ಈ ಕಬ್ಬನ್ನು ನುರಿಸಲಿವೆ. ಆದರೂ ಸರ್ಕಾರ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಪರಿಹಾರ ನೀಡುವ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.

ADVERTISEMENT

ಬಹುಮಾನದ ಮೊತ್ತ ಹೆಚ್ಚಳ: ತೂಕದಲ್ಲಿ ವಂಚನೆ ಮಾಡುವ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ವಿರುದ್ಧ ಸೂಕ್ತ ದಾಖಲೆಗಳೊಂದಿಗೆ ದೂರು ನೀಡುವ ರೈತರಿಗೆ ₹1 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ಬೆಳಗಾವಿ ಅಧಿವೇಶನದ ವೇಳೆ ಘೋಷಣೆ ಮಾಡಲಾಗಿತ್ತು. ಈ ಬಹುಮಾನದ ಮೊತ್ತವನ್ನು ₹2.5 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ದೂರು ನೀಡುವ ಕಬ್ಬು ಬೆಳೆಗಾರರಿಗೆ ಯಾವುದೇ ಸಮಸ್ಯೆಯಾಗದಂತೆ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳಲಿದೆ. ಅವರ ಕಬ್ಬನ್ನು ನುರಿಸುವ ಹೊಣೆಯನ್ನೂ ಸರ್ಕಾರ ಹೊರಲಿದೆ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.