ADVERTISEMENT

ಗೃಹ ಸಚಿವನಾಗಿದ್ದರೆ ಗುಂಡಿಕ್ಕಲು ಹೇಳುತ್ತಿದ್ದೆ: ಬಸನಗೌಡ ಪಾಟೀಲ ಯತ್ನಾಳ

ಬುದ್ದಿಜೀವಿಗಳು, ಜಾತ್ಯತೀತರ ವಿರುದ್ಧ ಹರಿಹಾಯ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ

​ಪ್ರಜಾವಾಣಿ ವಾರ್ತೆ
Published 26 ಜುಲೈ 2018, 12:27 IST
Last Updated 26 ಜುಲೈ 2018, 12:27 IST
   

ವಿಜಯಪುರ:‘ಬುದ್ದಿಜೀವಿಗಳು, ಜಾತ್ಯತೀತರ ಸೋಗಿನಲ್ಲಿ ದೇಶದೊಳಗಿರುವ ದೇಶದ್ರೋಹಿಗಳಿಂದಲೇ ದೇಶ ದುರ್ಬಲವಾಗುತ್ತಿದೆ. ನಾನು ಗೃಹ ಸಚಿವನಾಗಿದ್ದರೆ, ಈ ಎಲ್ಲರನ್ನೂ ಒಟ್ಟಿಗೆ ನಿಲ್ಲಿಸಿ ಗುಂಡು ಹಾರಿಸುವಂತೆ ಹೇಳುತ್ತಿದ್ದೆ’ ಎಂದು ವಿಜಯಪುರ ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಗುರುವಾರ ನಡೆದ 19ನೇ ಕಾರ್ಗಿಲ್‌ ವಿಜಯೋತ್ಸವದಲ್ಲಿ ಮಾತನಾಡಿದ ಯತ್ನಾಳ ‘ಈ ನೆಲದ ಅನ್ನ, ನೀರು, ಗಾಳಿ ಸೇವಿಸಿ ದೇಶದ ವಿರುದ್ಧವೇ ಪಿತೂರಿ ನಡೆಸುವವರ ಸಂಖ್ಯೆ ಹೆಚ್ಚಿದೆ. ಕಾಶ್ಮೀರದಲ್ಲಿ ಭಾರತ ವಿರೋಧಿ ಘೋಷಣೆ ಕೂಗುವುದು ಹೆಚ್ಚುವ ಜತೆಯಲ್ಲೇ ಸೈನಿಕರ ಮೇಲೆ ಕಲ್ಲು ತೂರುವುದು ನಡೆಯುತ್ತಿದೆ. ಇದನ್ನು ಎಲ್ಲರೂ ಖಂಡಿಸಬೇಕು’ ಎಂದರು.

‘ನಮ್ಮ ದೇಶದ ವಿರೋಧ ಪಕ್ಷದ ನಾಯಕ ಸೈನಿಕರಿಂದ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದರೇ; ದೇಶದ್ರೋಹಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ, ಕಾಶ್ಮೀರದಲ್ಲಿ ಸೈನಿಕರು–ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದಂತೆ ಬುದ್ದಿಜೀವಿಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ ಎಂಬ ಕೂಗು ಹೆಚ್ಚುತ್ತದೆ.

ADVERTISEMENT

ಆದರೆ –60 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ದೇಶಕ್ಕೆ ಭದ್ರತೆ ಒದಗಿಸಿ; ನಮ್ಮ ಸ್ವಾತಂತ್ರ್ಯ ಕಾಪಾಡುವ ಸೈನಿಕ ಸಮೂಹಕ್ಕೆ ಎಷ್ಟೇ ತೊಂದರೆಯಾದರೂ ಯಾರೊಬ್ಬರೂ ಮಾನವ ಹಕ್ಕುಗಳ ಪ್ರಸ್ತಾಪ ಮಾಡಲ್ಲ. ರಕ್ಷಣೆಯ ಕರ್ತವ್ಯದಲ್ಲಿದ್ದಾಗ ಕಲ್ಲು ತೂರಿದರೂ ಖಂಡಿಸಲ್ಲ’ ಎಂದು ಯತ್ನಾಳ ಬುದ್ದಿಜೀವಿಗಳ ನಡೆಯನ್ನು ಟೀಕಿಸಿದರು.

‘ಇಸ್ರೇಲ್‌ನಲ್ಲಿ ಪ್ರತಿಯೊಬ್ಬರು ಕೆಲ ವರ್ಷಗಳ ಕಾಲ ಕಡ್ಡಾಯವಾಗಿ ಸೈನ್ಯದಲ್ಲಿ ಸೇವೆ ಸಲ್ಲಿಸಬೇಕು ಎಂಬ ನಿಯಮವಿದೆ. ನಮ್ಮಲ್ಲೂ ಇದು ಅನುಷ್ಠಾನಗೊಳ್ಳಬೇಕಿದೆ. ಆಗಲಾದರೂ ಸರ್ಕಾರಿ ಕಚೇರಿಗಳಲ್ಲಿ, ರಾಜಕಾರಣಿಗಳು ಲೂಟಿ ಹೊಡೆಯುವುದು ತಪ್ಪಲಿದೆ’ ಎಂದರು.

‘ನಿತ್ಯವೂ ದೇಶದ ಎಲ್ಲೆಡೆ ಸೈನಿಕರ ತ್ಯಾಗ, ಬಲಿದಾನದ ಸ್ಮರಣೆ ನಡೆಯುತ್ತಿದ್ದರೇ; ಹಿಂದಿನ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರನಾಗಿದ್ದ ದಿನೇಶ್‌ ಅಮಿನ್‌ ಮಟ್ಟು ಬೇಜವಾಬ್ದಾರಿಯ ಹೇಳಿಕೆ ನೀಡಿದ್ದರು’ ಎಂದು ಬಸನಗೌಡ ಹರಿಹಾಯ್ದರು.

‘ಚೀನಾ, ಪಾಕಿಸ್ತಾನ ಭಾರತದ ಪ್ರಮುಖ ಶತ್ರು ರಾಷ್ಟ್ರಗಳು. ಪಾಕಿಸ್ತಾನ ಇಂದಿಗೂ ತನ್ನ ಕುತಂತ್ರ ಬುದ್ಧಿ ಬಿಟ್ಟಿಲ್ಲ. ಸ್ನೇಹದ ಹಸ್ತ ಚಾಚಿದ ಹಿಂದಿನ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅಂತಹ ಮುತ್ಸದ್ಧಿಗೆ ಬೆನ್ನಿಗೆ ಚೂರಿ ಇರಿಯುವ ಕೆಲಸ ಮಾಡಿತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.