
ವಿಜಯಪುರ: ಭಾರತ ಸರ್ಕಾರದಿಂದ ‘ಭೌಗೋಳಿಕ ಮಾನ್ಯತೆ’ (ಜಿಯೋಗ್ರಫಿಕಲ್ ಟ್ಯಾಗ್) ಲಭಿಸಿದ ಬಳಿಕ ಜಿಲ್ಲೆಯ ಸುಪ್ರಸಿದ್ಧ ಇಂಡಿ ‘ಕಾಗ್ಝಿ’ (KAGZI) ಲಿಂಬೆ ವಿದೇಶಗಳಿಗೆ ರಫ್ತಾಗುತ್ತಿದ್ದು, ಈ ಕುರಿತು ಭಾನುವಾರದ ತಮ್ಮ ‘ಮನದ ಮಾತು’ ಆಕಾಶವಾಣಿ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ರಾಜ್ಯದಿಂದ ನೆರೆಯ ಬಾಂಗ್ಲಾದೇಶ, ನೇಪಾಳ, ದುಬೈ, ಅಬುದಾಬಿ, ಕುವೈತ್, ಶ್ರೀಲಂಕಾ, ಪಾಕಿಸ್ತಾನ ಸೇರಿದಂತೆ ಸುಮಾರು 25 ದೇಶಗಳಿಗೆ ಉತ್ಕೃಷ್ಟ ಗುಣಮಟ್ಟದ ಲಿಂಬೆಯನ್ನು ರಫ್ತು ಮಾಡಲಾಗುತ್ತಿದೆ.
ಇಂಡಿ ತಾಲ್ಲೂಕಿನ ಕೊಳೂರಗಿ ಗ್ರಾಮದ ಯುವ ರೈತ ಚಂದ್ರಕಾಂತ ಮೇಡೆಗಾರ ಅವರು ಅಫೇಡಾ ಸಂಸ್ಥೆಯ ಮಾರ್ಗದರ್ಶನದಲ್ಲಿ ಇಂಡಿ ಲಿಂಬೆಯನ್ನು ಕಳೆದ ವರ್ಷ ಯುಎಇ ಸೇರಿದಂತೆ ಐರೋಪ್ಯ ರಾಷ್ಟ್ರಗಳಿಗೆ ರಫ್ತು ಮಾಡಿದ್ದಾರೆ.
ಬೆಂಗಳೂರು, ಮುಂಬೈ, ಹೈದರಾಬಾದ್, ನವದೆಹಲಿ ಸೇರಿದಂತೆ ಮತ್ತಿತರ ಪ್ರಮುಖ ನಗರಗಳಿಗೆ ಇಂಡಿ ನಿಂಬೆ ಹಣ್ಣು ಹೋಗುತ್ತಿತ್ತು. ಇದೀಗ ಐರೋಪ್ಯ ರಾಷ್ಟ್ರಗಳಿಗೂ ರಫ್ತಾಗುತ್ತಿರುವುದರಿಂದ ಲಿಂಬೆ ಬೆಳೆಗೆ ಮಹತ್ವ ಬಂದಿದೆ.
ಐರೋಪ್ಯ ರಾಷ್ಟ್ರಗಳಿಗೆ ರಫ್ತಾಗುತ್ತಿರುವುದರಿಂದ ಬೆಳೆಗಾರರಿಗೆ ಉತ್ತಮ ಬೆಲೆಯೂ ದೊರೆತಿದೆ. ಈ ಹಿಂದೆ ಪ್ರತಿವರ್ಷ ₹350 ರಿಂದ ₹500 ಕೋಟಿ ವರೆಗೆ ವಹಿವಾಟು ನಡೆಯುತ್ತಿದ್ದ ಇಂಡಿ ನಿಂಬೆ ಇಂದು ₹ 600 ರಿಂದ ₹ 800 ಕೋಟಿ ವಹಿವಾಟು ನಡೆಯುತ್ತಿದೆ ಎಂದು ನಿಂಬೆ ಅಭಿವೃದ್ಧಿ ಮಂಡಳಿ ತಿಳಿಸಿದೆ.
ನಿಂಬೆ ಹಣ್ಣಿನ ಜೊತೆಗೆ ಇದೀಗ ಇಂಡಿ ತಾಲ್ಲೂಕಿನಲ್ಲಿ ರೈತರು ಬೆಳೆಯುತ್ತಿರುವ ನಿಂಬೆ ಸಸಿಗಳಿಗೂ ಕೂಡಾ ಎಲ್ಲಿಲ್ಲದ ಬೇಡಿಕೆ ಬಂದಿದೆ. ಹೊರ ರಾಜ್ಯಗಳ ರೈತರು ಕೂಡ ಇಂಡಿ ನಿಂಬೆ ಸಸಿಗಳನ್ನು ಕೊಳ್ಳತೊಡಗಿದ್ದಾರೆ.
ವಿಜಯಪುರ ಜಿಲ್ಲೆ ರಾಜ್ಯದ ‘ಲಿಂಬೆ ತೋಟ’ ಎಂದೇ ಪ್ರಸಿದ್ಧವಾಗಿದೆ. ಜಿಲ್ಲೆಯು ರಾಜ್ಯದ ವಿಸ್ತೀರ್ಣದಲ್ಲಿ ಶೇ 58ರಷ್ಟು (12,220 ಹೆಕ್ಟೆರ್) ಲಿಂಬೆ ಬೆಳೆ ಪ್ರದೇಶ ಹೊಂದಿದೆ.
‘ಇಂಡಿ ಲಿಂಬೆಗೆ ಜಿಐ ಟ್ಯಾಗ್ ಲಭಿಸಿರುವುದು ಮತ್ತು ವಿದೇಶಕ್ಕೆ ರಫ್ತಾಗುತ್ತಿರುವ ಕುರಿತು ಪ್ರಧಾನಿ ಮೋದಿ ಅವರು ತಮ್ಮ ಮನದ ಮಾತು ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿರುವುದು ಜಿಲ್ಲೆಯ ಲಿಂಬೆ ಬೆಳೆಗಾರರಿಗೆ ಸ್ಪೂರ್ತಿ ನೀಡಿದಂತಾಗಿದೆ’ ಎಂದು ಬಿಜೆಪಿ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹಾಗೂ ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.