
ವಿಜಯಪುರ: ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯ ಅವಧಿಯಲ್ಲಿ ನಗದು ಇರಿಸಿಕೊಂಡರೆ ಕಡ್ಡಾಯವಾಗಿ ಅದನ್ನು ರಿಜಿಸ್ಟರ್‌ನಲ್ಲಿ ಬರೆಯಬೇಕು, ಈ ಪರಿಪಾಠ ಬೆಳೆಸಿಕೊಳ್ಳಬೇಕು, ಇಲ್ಲವಾದರೆ ಇದನ್ನು ಅಕ್ರಮ ನಗದು ಎಂಬಂತೆ ಪರಿಗಣಿಸಿ ಪ್ರಕರಣ ದಾಖಲಿಸಲು ಹಿಂದೇಟು ಹಾಕುವುದಿಲ್ಲ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ಬಾರಿ ಅನಿರೀಕ್ಷಿತ ದಾಳಿ ನಡೆಸಿದ ಸಂದರ್ಭದಲ್ಲಿ ಅದರಲ್ಲೂ ವಿಜಯಪುರ ಜಿಲ್ಲೆಯಲ್ಲಿ ಅಧಿಕಾರಿಗಳ ಕಡೆಯಿಂದ ದೊಡ್ಡ ಪ್ರಮಾಣದ ನಗದು ದೊರಕಿದೆ. ಇದನ್ನು ನಾವು ಆಸ್ಪತ್ರೆಗೆ ಕಟ್ಟಲು, ಮಕ್ಕಳ ಶಾಲಾ ಶುಲ್ಕ ಕಟ್ಟಲು ತಂದಿದ್ದೇವೆ ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡಿದ್ದಾರೆ. ಆದರೆ, ರಿಜಿಸ್ಟರ್ ಪರಿಶೀಲನೆ ನಡೆಸಿದರೆ ಅದರ ದಾಖಲೆಯೇ ಇರುವುದಿಲ್ಲ, ರಿಜಿಸ್ಟರ್‌ನಲ್ಲಿ ದಾಖಲಾಗದೇ ಹೋದರೆ ಅದು ಅಕ್ರಮ ಹಣ ಎಂದೇ ಪರಿಗಣಿಸಲಾಗುವುದು ಎಂದರು.
ವಿಜಯಪುರ ಜಿಲ್ಲೆಯ ಶಿಕ್ಷಣ ಇಲಾಖೆ, ಮಹಾನಗರ ಪಾಲಿಕೆ, ಪ್ರಾದೇಶಿಕ ಸಾರಿಗೆ ಇಲಾಖೆ ಮೇಲೆ ಇತ್ತೀಚೆಗೆ ಅನಿರೀಕ್ಷಿತ ದಾಳಿ ನಡೆಸಿದ್ದು, ವಿವಿಧ ಇಲಾಖೆಗಳಲ್ಲಿ 25ಕ್ಕೂ ಹೆಚ್ಚು ನ್ಯೂನತೆ, ಲೋಪದೋಷಗಳನ್ನು ಗುರುತಿಸಲಾಗಿದೆ. ಈ ಕುರಿತಂತೆ ಅಧಿಕಾರಿಗಳಿಗೆ ಸ್ಪಷ್ಟೀಕರಣ ಸಹ ಕೇಳಲಾಗಿದ್ದು, ಪೂರಕವಾದ ಉತ್ತರ ಬಾರದೇ ಹೋದರೆ ತನಿಖೆ ಮುಂದುವರೆಯಲಿದೆ, ಒಂದು ಹಂತಕ್ಕೆ ಮುಟ್ಟುವರೆಗೆ ನಿಲ್ಲಿಸುವುದಿಲ್ಲ ಎಂದರು.
ಕಳೆದ ಕೆಲವು ದಿನಗಳ ಹಿಂದೆ ವಿಜಯಪುರ ಮಹಾನಗರ ಪಾಲಿಕೆ ಜಲ ಶುದ್ಧೀಕರಣ ಘಟಕದಲ್ಲಿ ಮಕ್ಕಳು ಬಿದ್ದು ಅಸುನೀಗಿದ್ದರೂ ಅದಕ್ಕೆ ಸೂಕ್ತ ತಂತಿಬೇಲಿ, ಪೂರಕವಾದ ಸುರಕ್ಷಿತ ಉಪಕರಣಗಳನ್ನು ಅಳವಡಿಸುವಂತೆ ನಿರ್ದೇಶನವನ್ನು ಕಳೆದ ಬಾರಿ ನೀಡಲಾಗಿತ್ತು. ಒಂದು ಹಂತದ ಕಾಮಗಾರಿ ಪೂರ್ಣಗೊಂಡಿದೆ, ಇನ್ನೊಂದು ಹಂತದ ಕಾಮಗಾರಿ ಪೆಂಡಿಂಗ್ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಜೀವಕ್ಕಿಂತ ಹಣ ದೊಡ್ಡದೇ ಎಂದು ಕೇಳಿರುವೆ. ಹೀಗಾಗಿ ಪೂರಕ ₹1 ಕೋಟಿ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಬರೆದಿರುವುದಾಗಿ ಹೇಳಿದ್ದು, ಈ ಅನುದಾನ ಬಿಡುಗಡೆಯಾದರೆ ಒಳ್ಳೆಯದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.