ADVERTISEMENT

ಮುದ್ದೇಬಿಹಾಳ ಕ್ಷೇತ್ರ| ನಡಹಳ್ಳಿ ಚುನಾವಣಾ ಕಡೆ: ಕಾಂಗ್ರೆಸ್‌ನಲ್ಲಿ ಭಿನ್ನ ನಡೆ

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾವೇರಿದ ರಾಜಕೀಯ

ಬಸವರಾಜ ಸಂಪಳ್ಳಿ
Published 2 ಮಾರ್ಚ್ 2023, 15:08 IST
Last Updated 2 ಮಾರ್ಚ್ 2023, 15:08 IST
ಎ.ಎಸ್.ಪಾಟೀಲ ನಡಹಳ್ಳಿ
ಎ.ಎಸ್.ಪಾಟೀಲ ನಡಹಳ್ಳಿ   

ವಿಜಯಪುರ: ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿ, ಕಾಂಗ್ರೆಸ್‌ ಪೈಪೋಟಿಗೆ ವೇದಿಕೆ ಸಜ್ಜಾಗಿದೆ.

‘ಚುನಾವಣೆ ಎಂಬುದು ಪ್ರಜಾತಂತ್ರದ ಹಬ್ಬ’ ಎಂಬ ಮಾತನ್ನು ಅಕ್ಷರಶಃ ಸಾಬೀತು ಪಡಿಸುವಂತೆ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಚುನಾವಣೆಯನ್ನು ಹಬ್ಬವನ್ನಾಗಿ ಪರಿಗಣಿಸಿ ಮತ್ತೊಮ್ಮೆ ಬಿಜೆಪಿಯಿಂದ ಕಣಕ್ಕಿಳಿಯಲು ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ. ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಪ್ರಚಾರ ನಡೆಸಿದ್ದಾರೆ. ಅಖಾಡದಲ್ಲಿರುವ ಸ್ಪರ್ಧಿಗಳಿಗೆ ಹೋಲಿಸಿದರೆ ಎಲ್ಲರಿಗಿಂತಲೂ ನಡಹಳ್ಳಿ ಒಂದಲ್ಲ, ನೂರು ಹೆಜ್ಜೆ ಮುಂದೆ ಸಾಗಿದ್ದಾರೆ.

ಕಾಂಗ್ರೆಸ್‌ನಿಂದ ಮಾಜಿ ಸಚಿವ ಸಿ.ಎಸ್‌.ನಾಡಗೌಡ ಹಾಗೂ ಗುತ್ತಿಗೆದಾರ, ಸಮಾಜಸೇವಕ ಎಂ.ಎನ್‌.ಮದರಿ ಟಿಕೆಟ್‌ಗಾಗಿ ಪ್ರಯತ್ನಿಸಿದ್ದಾರೆ. ಇಬ್ಬರಲ್ಲಿ ಯಾರಾಗುತ್ತಾರೆ ಎಂಬ ಕುತೂಹಲ ಇರುವಾಗಲೇ, ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ‘ಪ್ರಜಾಧ್ವನಿ’ ಸಮಾವೇಶದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ‘ನಾಡಗೌಡರಿಗೆ ಆಶೀರ್ವದಿಸಿ’ ಎಂದು ಹೇಳಿರುವುದು ಪಕ್ಷದಲ್ಲಿ ಅಸಮಾದಾನಕ್ಕೆ ಕಾರಣವಾಗಿದೆ.

ADVERTISEMENT

ಸಮಾವೇಶದಲ್ಲಿ ಅಪ್ಪಾಜಿ ನಾಡಗೌಡ ಅವರು ‘ಇದು ನನ್ನ ಕೊನೆಯ ಚುನಾವಣೆ’ ಎಂದು ಹೇಳುವ ಮೂಲಕ ನಾನೇ ಸ್ಪರ್ಧಿ ಎಂದು ಅನುಕಂಪದ ದಾಳ ಕೂಡ ಉರುಳಿಸಿರುವುದು ಎಂ.ಎನ್.ಮದರಿ ಅವರನ್ನು ಕೆರಳಿಸಿದೆ.

‘ಪ್ರಜಾಧ್ವನಿ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ನಾಡಗೌಡರ ಹೆಸರನ್ನು ಘೋಷಿಸಿರುವುದು ಸರಿಯಲ್ಲ, ಅವರನ್ನೇ ಅಭ್ಯರ್ಥಿಯಾಗಿ ಮಾಡುವುದಾಗಿದ್ದರೇ ಟಿಕೆಟ್‌ಗೆ ಅರ್ಜಿ ಕರೆಯುವ ಅಗತ್ಯವೇನಿತ್ತು’ ಎಂದು ಎಂ.ಎನ್‌.ಮದರಿ ‘ಪ್ರಜಾವಾಣಿ’ ಬಳಿ ಅಸಮಾದಾನ ವ್ಯಕ್ತಪಡಿಸಿದ್ದಾರೆ.

‘ಕ್ಷೇತ್ರದಲ್ಲಿ ಕುರುಬ ಸಮಾಜ ಪ್ರಬಲವಾಗಿದೆ. 60 ಸಾವಿರಕ್ಕೂ ಅಧಿಕ ಮತದಾರರು ಇದ್ದಾರೆ. ಸಿದ್ದರಾಮಯ್ಯ ಮತ್ತು ನಾಡಗೌಡರು ಸಮಾಜವನ್ನು ಕಡೆಗಣಿಸಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

‘ನನಗೆ ಟಿಕೆಟ್‌ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೇನೆ. ಒಂದು ವೇಳೆ ಪರಿಗಣಿಸದೇ ಇದ್ದರೇ ಸಮಾಜದ ಮುಖಂಡರು, ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ಎಚ್ಚರಿಕೆ ರವಾನಿಸಿದ್ದಾರೆ.

ಕಾಣದ ಜೆಡಿಎಸ್‌

ಕ್ಷೇತ್ರಕ್ಕೆ ಪರಿಚಯವಿಲ್ಲದ ಮುಖ ಡಾ.ಸೋಲಾಪುರಕರ್‌ ಅವರನ್ನು ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ‘ಪಂಚರತ್ನ’ ರಥಯಾತ್ರೆ ಮುದ್ದೇಬಿಹಾಳಕ್ಕೆ ಬಂದು ಹೋಗಿರುವುದನ್ನು ಬಿಟ್ಟರೇ ಎಲ್ಲೂ ರಾಜಕೀಯ ಚಟುವಟಿಕೆಗಳು ಕಾಣಿಸುತ್ತಿಲ್ಲ.

ಬಿಜೆಪಿ, ಕಾಂಗ್ರೆಸ್‌ ಪೈಪೋಟಿ

ವಿಜಯಪುರ: ಬಿಜೆಪಿಯ ಹಾಲಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಮತ್ತು ಕಾಂಗ್ರೆಸ್‌ನ ಮಾಜಿ ಶಾಸಕ ಸಿ.ಎಸ್‌.ನಾಡಗೌಡ ಅವರ ನಡುವೆ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಡುವ ಲಕ್ಷಣ ದಟ್ಟವಾಗಿದೆ.

ಹಾಲಿ ಶಾಸಕ ನಡಹಳ್ಳಿ ಅವರು ಸರ್ಕಾರದಿಂದ ಅತೀ ಹೆಚ್ಚು ಅನುದಾನ ತಂದು ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ವ್ಯಾಪ್ತಿಯಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯ ಕಣ್ಣಿಗೆ ಕಟ್ಟುವಂತೆ ಮಾಡಿ ತೋರಿಸಿದ್ದಾರೆ.

ಶ್ರೀಶೈಲ ಶ್ರೀಗಳ ಪಾದಯಾತ್ರೆ, ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಬೃಹತ್‌ ಪಾದಯಾತ್ರೆ ಸಂಘಟಿಸಿ ಯುವ ಸಮೂಹವನ್ನು ಸೆಳೆದುಕೊಂಡಿದ್ದಾರೆ. ವಿಧಾನಸೌಧದಲ್ಲೂ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಗಟ್ಟಿ ಧ್ವನಿ ಎತ್ತುವ ಮೂಲಕ ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ. ಆದರೆ, ಅವರ ಜೊತೆ ಬಿಜೆಪಿಯ ಹಿರಿಯ ಮುಖಂಡರು ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ, ಕಾರ್ಯಕರ್ತರೊಂದಿಗೆ ಅವರು ಬೆರೆಯುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.

ನಾಡಗೌಡ ಅವರು ಇದೀಗ ಮೈದಾನಕ್ಕೆ ಇಳಿದು ಸದ್ದು–ಗದ್ದಲವಿಲ್ಲದೇ ಚುನಾವಣಾ ಪ್ರಚಾರ ನಡೆಸಿದ್ದಾರೆ. ಈ ಹಿಂದೆ ತಾವು ಐದು ಬಾರಿ ಶಾಸಕರಾಗಿ ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಲು ಯತ್ನಿಸಿದ್ದಾರೆ. ಆದರೆ, ನಡಹಳ್ಳಿ ಅವರ ಎದುರು ನಾಡಗೌಡರ ಮಾತುಗಳು ಮಂಕಾಗಿವೆ.

‘ಸಂಭಾವಿತ ರಾಜಕಾರಣಿ’ ಎಂಬ ಟ್ರಂಪ್‌ ಕಾರ್ಡ್‌ ಹಿಡಿದು, ಕ್ಷೇತ್ರದ ಹಿರಿಯ ಕಾಂಗ್ರೆಸಿಗರನ್ನು ಒಗ್ಗೂಡಿಸುವ ಕಾರ್ಯದಲ್ಲಿ ನಾಡಗೌಡ ತೊಡಗಿದ್ದಾರೆ.

ಕಾಂಗ್ರೆಸ್‌ ಮತಬ್ಯಾಂಕ್‌ ಆಗಿದ್ದ ಕ್ಷೇತ್ರದ ಕುರುಬ ಮತ್ತು ಮುಸ್ಲಿಂ ಸಮಾಜದ ಮುಖಂಡರಲ್ಲಿ ಭಿನ್ನಮತ ಕಾಣಿಸಿಕೊಂಡಿದ್ದು, ನಡಹಳ್ಳಿ ಅವರಿಗೆ ವರವಾಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲೇ ನಡಹಳ್ಳಿ ಅವರು ‘ಒಂದು ಲಕ್ಷ ಮತಗಳ ಅಂತರದಿಂದ ಜಯ ಗಳಿಸುತ್ತೇನೆ’ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.