ADVERTISEMENT

ಭಾವ ಭಗವಂತನ ಒಲುಮೆಗೆ ಕಾರಣವಾಗಲಿ: ಬಾಲಗಾಂವದ ಅಮೃತಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 16:10 IST
Last Updated 16 ಆಗಸ್ಟ್ 2022, 16:10 IST
ವಿಜಯಪುರ ನಗರದ ಜ್ಞಾನಯೋಗಾಶ್ರಮದಲ್ಲಿ ಸಿದ್ಧೇಶ್ವರ ಸ್ವಾಮೀಜಿಯವರ ತಿಂಗಳ ಪ್ರವಚನ ಪ್ರಾರಂಭೋತ್ಸವದಲ್ಲಿ ಮಂಗಳವಾರ ಆಶ್ರಮದ ಅಧ್ಯಕ್ಷರಾದ ಬಸವಲಿಂಗ ಸ್ವಾಮೀಜಿ ಮಾತನಾಡಿದರು 
ವಿಜಯಪುರ ನಗರದ ಜ್ಞಾನಯೋಗಾಶ್ರಮದಲ್ಲಿ ಸಿದ್ಧೇಶ್ವರ ಸ್ವಾಮೀಜಿಯವರ ತಿಂಗಳ ಪ್ರವಚನ ಪ್ರಾರಂಭೋತ್ಸವದಲ್ಲಿ ಮಂಗಳವಾರ ಆಶ್ರಮದ ಅಧ್ಯಕ್ಷರಾದ ಬಸವಲಿಂಗ ಸ್ವಾಮೀಜಿ ಮಾತನಾಡಿದರು    

ವಿಜಯಪುರ: ಒಬ್ಬ ಪಾತ್ರಧಾರಿ ಕಾವಿ ಹಾಕಿಕೊಂಡಾಗ ನಾಟಕ ಮುಗಿಯೋವರೆಗಷ್ಟೇ ಅವನು ಸನ್ಯಾಸಿ. ಆದರೆ, ನಿಜವಾದ ಸನ್ಯಾಸಿ ಬದುಕು ಹಾಗಲ್ಲ. ಕರಿಮಣಿ ಸರವನ್ನು ಒಂದು ಗಂಡು ಹೆಣ್ಣಿಗೆ ಕಟ್ಟಿದಾಗ ಅವನಿಗೆ ತಾನು ಪತಿ, ಆಕೆಯು ತನ್ನ ಸತಿ ಎಂಬ ಭಾವ ಮೂಡುವುದು. ಕಾವಿ ಹಾಕಿಕೊಂಡವನ ಮನಸ್ಸಿನಲ್ಲಿ ಸಹ ನಾನು ವಿರಾಗಿ, ನಿರ್ಮೋಹಿ, ಸರ್ವಸಂಗ ಪರಿತ್ಯಾಗಿ ಎಂಬ ಭಾವಗಳು ಮೂಡಬೇಕು. ನಮ್ಮ ಭಾವಗಳು ಭಗವಂತನ ಒಲುಮೆಗೆ ಕಾರಣವಾಗಬೇಕು ಎಂದು ಬಾಲಗಾಂವದ ಅಮೃತಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಜ್ಞಾನಯೋಗಾಶ್ರಮದಲ್ಲಿ ಸಿದ್ಧೇಶ್ವರ ಸ್ವಾಮೀಜಿಯವರ ತಿಂಗಳ ಪ್ರವಚನ ಪ್ರಾರಂಭೋತ್ಸವದಲ್ಲಿ ಮಂಗಳವಾರ ಅವರು ಮಾತನಾಡಿದರು.

ಶರಣರು ಹೇಳಿದಂತೆ ಭಗವಂತನ ನಾಮವನ್ನು, ಮೂರ್ತಿಯನ್ನು ಇತ್ಯಾದಿ ನಮ್ಮ ಮನದ ಭಾವದೊಳಗೆ ತುಂಬಿಕೊಳ್ಳಬೇಕು. ಕಾಣದ ದೇವರನ್ನು ಕಾಣಬೇಕು ಎಂಬ ಹಂಬಲಪಡದೇ, ಎದುರಿಗಿರುವ ವ್ಯಕ್ತಿಗಳಲ್ಲಿ ದೇವರನ್ನು ಕಾಣಬಹುದು. ಅಂದು ಋಷಿ-ಮುನಿಗಳು ಕೂಡ ತಪಸ್ಸಿನ ಮುಖೇನ ದೇವರನ್ನು ಸ್ತುತಿಸುವುದು, ಅಂತರ್ಮುಖಿಯಾಗಿ ದೇವನನ್ನು ಕಾಣುವುದು ಮಾಡುತ್ತಿದ್ದರು ಎಂದರು.

ADVERTISEMENT

ಇಂದ್ರಿಯಗಳನ್ನು ಪಡೆದಿರುವುದು ಕೇವಲ ವಿಷಯಗಳನ್ನು ತುಂಬಿಸಿಕೊಂಡು ಆಸ್ವಾದಿಸಲಿಕ್ಕಲ್ಲ. ಮೇಲಿನವನ ಕರುಣೆಯಿಂದ ಬದುಕನ್ನು ದಿವ್ಯ ಬದುಕಾಗಿಸಿಕೊಳ್ಳುವುದರ ಕಡೆಗೆ ನಮ್ಮ ಜೀವನ ಶೈಲಿ ಬದಲಾಗಬೇಕಿದೆ ಎಂದು ಹೇಳಿದರು.

ಆಶ್ರಮದ ಅಧ್ಯಕ್ಷರಾದ ಬಸವಲಿಂಗ ಸ್ವಾಮೀಜಿ ಮಾತಾಡಿ,ಬಲ್ಲವರ ಮಾತುಗಳು ನಮ್ಮ ಬದುಕಿನ ದಿಕ್ಕನ್ನು ಬದಲಿಸುತ್ತವೆ ಎಂದು ನುಡಿದರು.

ಹರ್ಷಾನಂದ ಸ್ವಾಮೀಜಿ ಮಾತನಾಡಿದರು. ಸಿದ್ಧೇಶ್ವರ ಶ್ರೀಗಳು ಸೇರಿದಂತೆ ಬೆಳಗಿನ ಈ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಹಿರಿಯರು, ಮಹಿಳೆಯರು, ಯುವಕ-ಯುವತಿಯರು, ಮಕ್ಕಳು, ಆಶ್ರಮದ ಭಕ್ತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.