ಬಸವಜಯ ಮೃತ್ಯುಂಜಯ ಸ್ವಾಮೀಜಿ
ವಿಜಯಪುರ: ‘ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಲಿಂಗಾಯತ ಪಂಚಮಸಾಲಿಗಳಿಗೆ 2 ‘ಎ’ ಮೀಸಲಾತಿ ಕೊಡಲಾಗದಿದ್ದರೆ ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ 2 ‘ಡಿ’ ಮೀಸಲಾತಿ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದ್ದು, ಹಿಂಬರಹ ನೀಡಿ ವಾಪಸ್ ಪಡೆದುಕೊಂಡು ಅದನ್ನಾದರೂ ನೀಡಲಿ’ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಿಂಗಾಯತ ಪಂಚಮಸಾಲಿ 2 ‘ಎ’ ಮೀಸಲಾತಿ ಹೋರಾಟ ಹತ್ತಿಕ್ಕಲು ಸರ್ಕಾರ ಏನೇ ಪ್ರಯತ್ನ ಮಾಡಿದರು ಮೀಸಲಾತಿ ವಿಚಾರದಲ್ಲಿ ಸ್ಪಷ್ಟ ಆದೇಶ ಸಿಗುವವರೆಗೂ ಹೋರಾಟ ನಿರಂತರವಾಗಿರಲಿದೆ’ ಎಂದು ತಿಳಿಸಿದರು.
‘ಸರ್ಕಾರಕ್ಕೆ ಅದರ ತಪ್ಪಿನ ಅರಿವಾಗಿ, ಅವರ ಮನಸ್ಸು ಪರಿವರ್ತನೆಯಾಗುವವರೆಗೂ ಪ್ರತಿ ತಾಲ್ಲೂಕಿನಲ್ಲಿ ಜಾಗೃತಿ ಸಮಾವೇಶ, ಪ್ರತಿಜ್ಞಾ ಕ್ರಾಂತಿ ಜಾಥ ಆಯೋಜಿಸುವ ಮೂಲಕ ಹೋರಾಟ ಮುಂದುವರೆಯಲಿದೆ’ ಎಂದರು.
‘ಪಂಚಮಸಾಲಿ ಸಮುದಾಯಕ್ಕೆ 2 ‘ಎ’ ಮೀಸಲಾತಿ ಕೇಳುವುದಷ್ಟೆ ಅಲ್ಲದೇ, ಎಲ್ಲ ಲಿಂಗಾಯತ ಒಳಪಂಗಡಗಳಿಗೂ ಕೇಂದ್ರದ ಒಬಿಸಿ ಮಾನ್ಯತೆಯ ಹಕ್ಕೊತ್ತಾಯ ಮಂಡಿಸಲಾಗುವುದು’ ಎಂದು ಹೇಳಿದರು.
‘ಲಿಂಗಾಯತ ಪಂಚಮಸಾಲಿಗಳ ಮೂಲ ಉದ್ದೇಶ 2 ‘ಎ’ ಮೀಸಲಾತಿ. ಆದರೆ, 2 ‘ಎ’ನಲ್ಲಿ ಈಗಾಗಲೇ ಇರುವ ಸಮುದಾಯಗಳಿಗೆ ಮನಸ್ಥಾಪವಾಗಬಾರದೆಂದು 2 ‘ಎ’ನಲ್ಲಿ ಸಿಗುವ ಎಲ್ಲ ಸೌಲಭ್ಯಗಳೊಂದಿಗೆ 2 ‘ಡಿ’ ಎಂಬ ಹೊಸ ಪಟ್ಟಿ ಸೃಷ್ಟಿಸಿ ಅದನ್ನು ಹಿಂದಿನ ಸರ್ಕಾರ ನೀಡಿತ್ತು’ ಎಂದರು.
‘ತಮ್ಮದೇ ಸರ್ಕಾರದ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುವಂತಹ ಶಾಸಕರ ಸಂಖ್ಯೆ ಇಂದಿನ ಆಡಳಿತ ಪಕ್ಷದಲ್ಲಿ ಇಲ್ಲ. ಅವರು ಮಾತನಾಡುತ್ತಿಲ್ಲವೆಂದು ಅವರೇನು ನಮ್ಮ ಹೋರಾಟದ ವಿರೋಧಿಗಳಲ್ಲ, ಅವರು ಮಾನಸಿಕವಾಗಿ ನಮ್ಮ ಹೋರಾಟದ ಪರವಾಗಿದ್ದಾರೆ. ಆದರೆ, ಬಹಿರಂಗಾವಾಗಿ ಅಧಿವೇಶನದಲ್ಲಿ ಮಾತನಾಡುವ ಪ್ರಯತ್ನ ಯಾರು ಮಾಡುತ್ತಿಲ್ಲ. ಬಹಿರಂಗವಾಗಿ ಅವರ ಮಾಡನಾಡದಿದ್ದರೂ ಮಾನಸಿಕವಾಗಿ ನಮ್ಮೊಂದಿಗೆ ಅವರಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.