ADVERTISEMENT

ವಿಜಯಪುರ: ಲಾಕ್‌ಡೌನ್‌ಗೆ ವಿನಾಯ್ತಿ, ನಾಳೆಯಿಂದ ನಿರಾಳ

​ಪ್ರಜಾವಾಣಿ ವಾರ್ತೆ
Published 2 ಮೇ 2020, 13:31 IST
Last Updated 2 ಮೇ 2020, 13:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಜಯಪುರ: ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಕಂಡುಬಂದಿರುವ ವಿಜಯಪುರ ನಗರ ಮತ್ತು ತಿಕೋಟಾ ತಾಲ್ಲೂಕಿನ ರತ್ನಾಪುರ ಹೊರತು ಪಡಿಸಿ ಜಿಲ್ಲೆಯಾದ್ಯಂತ ಮೇ 4ರಿಂದ ಲಾಕ್‌ಡೌನ್‌ನಿಂದ ವಿನಾಯ್ತಿ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಮುಖ್ಯಮಂತ್ರಿಗಳ ಜೊತೆಗಿನ ವಿಡಿಯೊ ಸಂವಾದದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ನಗರವು ಆರೆಂಜ್‌ ಜೋನ್‌ನಲ್ಲಿ ಇರುವುದರಿಂದ ಮೇ 17ರ ವರೆಗೆ ಲಾಕ್‌ಡೌನ್‌ ನಿಯಮಗಳು ಮುಂದುವರಿಯಲಿವೆ ಎಂದರು.

ಕಂಟೈನ್ಮೆಂಟ್‌ ಝೋನ್‌ ಹೊರತು ಪಡಿಸಿ ಜಿಲ್ಲೆಯಾದ್ಯಂತ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು. ಜಿಲ್ಲೆಯೊಳಗೆ ವಾಹನ ಸಂಚಾರಕ್ಕೆ ಮುಕ್ತ ಅವಕಾಶವಿದೆ. ಯಾವುದೇ ನಿರ್ಬಂಧವಿಲ್ಲ. ಆದರೆ, ಅನಗತ್ಯವಾಗಿ ತಿರುಗಾಡುವಂತಿಲ್ಲ ಎಂದು ಹೇಳಿದರು.

ADVERTISEMENT

ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳುವವರಿಗೆ ಮತ್ತು ಹೊರ ಜಿಲ್ಲೆಗಳಿಂದ ಬರುವವರಿಗೆ ಒಂದು ಬಾರಿಗೆ ಪ್ರಯಾಣಿಸಲು ಮಾತ್ರ ಅವಕಾಶ ಕಲ್ಪಿಸಲಾಗುವುದು. ಅವರ ಆರೋಗ್ಯ ತಪಾಸಣೆ ಕಡ್ಡಾಯ. ಅಲ್ಲದೇ, ಅವರು ಮನೆಯಲ್ಲೇ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ ಎಂದು ಹೇಳಿದರು.

ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದಲ್ಲಿ ಕೋವಿಡ್‌ ಸೋಂಕು ವ್ಯಾಪಕವಾಗಿರುವುದರಿಂದ ಆ ರಾಜ್ಯದಿಂದ ಜಿಲ್ಲೆಗೆ ಬರಲು ಮೇ17ರ ವರೆಗೆ ಯಾರಿಗೂ ಅವಕಾಶವಿಲ್ಲ. ವಿನಾಯ್ತಿ ನೀಡಲಾಗಿರುವ ಪ್ರದೇಶಗಳಲ್ಲೂ ಜನರು ಪರಸ್ಪರ ಅಂತರ ಕಾಯ್ದುಕೊಳ್ಳಬೇಕು, ಮುಖಕ್ಕೆ ಮಾಸ್ಕ್‌ ಧರಿಸಬೇಕು ಮತ್ತು ಸ್ಯಾನಿಟೈಸರ್‌ ಲೇಪನ ಮಾಡಿಕೊಳ್ಳುವ ಮೂಲಕ ಸೋಂಕು ಹರಡದಂತೆ ಎಚ್ಚರ ವಹಿಸಬೇಕು ಎಂದರು.

ಉದ್ಯಮ, ಕಂಪನಿಗಳಲ್ಲಿ ಕಾರ್ಮಿಕರನ್ನು ಶೇ 33ರಿಂದ ಶೇ50ರಷ್ಟು ಜನರನ್ನು ಮಾತ್ರ ಕೆಲಸಕ್ಕೆ ನಿಯೋಜಿಸಿಕೊಳ್ಳಬೇಕು.

ಪ್ರಯೋಗಾಲಯ ಆರಂಭ: ಜಿಲ್ಲೆಯಲ್ಲಿ ಕೋವಿಡ್‌19 ವ್ಯಾಪಕವಾಗಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಗಂಟಲು ದ್ರವ ಪರೀಕ್ಷೆಗೆ ಅನುಕೂಲವಾಗಿಸುವ ಉದ್ದೇಶದಿಂದ ಕೋವಿಡ್‌ ಪ್ರಯೋಗಾಲಯ ಶನಿವಾರದಿಂದ ಆರಂಭವಾಗಿದೆ ಎಂದು ಸಚಿವೆ ತಿಳಿಸಿದರು.

ಈ ಪ್ರಯೋಗಾಲಯದಲ್ಲಿ ಒಮ್ಮೆಗೆ 25ರಿಂದ 39 ಪರೀಕ್ಷೆ ಮಾಡಬಹುದಾಗಿದೆ. ಇದರಿಂದ ಗರ್ಭಿಣಿಯರು, ಉಸಿರಾಟ ತೊಂದರೆ ಇರುವವರಿಗೆ ಕೋವಿಡ್‌ ಸೋಂಕು ಪರೀಕ್ಷೆಯನ್ನು ತಕ್ಷಣಕ್ಕೆ ಮಾಡಲು ಅನುಕೂಲವಾಗಲಿದೆ. ಜಿಲ್ಲೆಗೆ ಅಗತ್ಯವಿರುವ ಪಿಪಿಇ ಕಿಟ್‌, ಎನ್‌95 ಮತ್ತು ತ್ರಿಬಲ್‌ ಲೇಯರ್‌ ಮಾಸ್ಕ್‌ ಹಾಗೂ ಸ್ಯಾನಿಟೈಸರ್ ಸಾಕಷ್ಟು ಪ್ರಮಾಣದಲ್ಲಿ ಇದೆ ಎಂದು ಹೇಳಿದರು.

ಕೋವಿಡ್‌ ಸೋಂಕು ದೃಢಪಟ್ಟಿರುವ ಚಪ್ಪರಬಂದ್‌ ಪ್ರದೇಶ, ಹಕೀಂ ಗಲ್ಲಿ ಮತ್ತು ಬಾರಾಕಮಾನ್‌ ಪ್ರದೇಶ ಹಾಗೂ ತಿಕೋಟಾದ ರನ್ನಾಪುರ ಗ್ರಾಮದ ಕಂಟೈನ್ಮೆಂಟ್‌ ಜೋನ್‌ನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಇನ್ನಷ್ಟು ಅನುಕೂಲ ಒದಗಿಸಲಾಗುವುದು ಎಂದು ತಿಳಿಸಿದರು.

ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರಡ್ಡಿ ಇದ್ದರು.

ವಿಡಿಯೊ ಸಂವಾದ: ಮುಖ್ಯಮಂತ್ರಿಗಳೊಂದಿಗೆ ನಡೆದ ವಿಡಿಯೊ ಸಂವಾದದಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ ಪಾಲ್ಗೊಂಡಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.