
ಸೋಲಾಪುರ: ಮಹಾನಗರಪಾಲಿಕೆ ಚುನಾವಣೆಗೆ ಭಯಮುಕ್ತ ವಾತಾವರಣದಲ್ಲಿ ಮತದಾನ ನಡೆಯಬೇಕು ಎಂದು ಕೋರಿ ಮಹಾವಿಕಾಸ ಆಘಾಡಿ (ಮವಿಆ)ಯಿಂದ ಪೊಲೀಸ್ ಆಯುಕ್ತ ಎಂ. ರಾಜಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಸದೆ ಪ್ರಣೀತಿ ಶಿಂಧೆ ಹಾಗೂ ಮಹಾವಿಕಾಸ ಆಘಾಡಿಯ ನಾಯಕರು ಇತ್ತೀಚೆಗೆ ನಡೆದ ಹತ್ಯಾ ದಾಳಿಯಲ್ಲಿ ಮೃತಪಟ್ಟ ಬಾಳಾಸಾಹೇಬ ಸರ್ವದೆ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಪ್ರಸ್ತುತ ಮಹಾನಗರಪಾಲಿಕೆ ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಭಾಗವಹಿಸಿವೆ. ಶುಕ್ರವಾರ ನಡೆದ ಹತ್ಯಾ ಘಟನೆಯಿಂದ ಬಿಜೆಪಿಯ ಕಾರ್ಯಕರ್ತರ ಗೂಂಡಾ ಪ್ರವೃತ್ತಿ ಬಯಲಾಗಿದೆ. ಚುನಾವಣಾ ಅವಧಿಯಲ್ಲಿ ಪ್ರತಿ ಪ್ರಭಾಗದಲ್ಲಿ ಬೆದರಿಕೆ ಹಾಕುವುದು, ಅಭ್ಯರ್ಥಿಗಳ ಮೇಲೆ ನಾಮಪತ್ರ ಹಿಂಪಡೆಯುವಂತೆ ಒತ್ತಡ ತರುವುದು, ಹಲ್ಲೆ ನಡೆಸುವುದು ಹಾಗೂ ವಿವಿಧ ರೀತಿಯಲ್ಲಿ ಭೀತಿ ಸೃಷ್ಟಿಸುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದರಿಂದ ಸೋಲಾಪುರ ನಗರದಲ್ಲಿ ವಿರೋಧ ಪಕ್ಷಗಳ ಕಾರ್ಯಕರ್ತರಿಗೆ ಭಯಮುಕ್ತ ವಾತಾವರಣದಲ್ಲಿ ಸಂಚರಿಸಿ ಪ್ರಚಾರ ನಡೆಸುವುದು ಕಷ್ಟಕರವಾಗಿದೆ. ಬಿಜೆಪಿ ಕಾರ್ಯಕರ್ತರಿಂದ ಮನಸೆ ಪಕ್ಷದ ಪದಾಧಿಕಾರಿಯ ಹತ್ಯೆಯ ಪ್ರಕರಣದಲ್ಲಿ, ಹತ್ಯೆಯ ಸೂತ್ರಧಾರರು ಹಾಗೂ ಹಂತಕರ ನಡುವಿನ ಮೊಬೈಲ್ ಸಂಭಾಷಣೆಯ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಕೇಳಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ನರಸಯ್ಯ ಆಡಂ ಮಾಸ್ತರ್, ರಾಷ್ಟ್ರವಾದಿ ಕಾಂಗ್ರೆಸ್ ನಗರದ ಅಧ್ಯಕ್ಷ ಮಹೇಶ್ ಗಾಡೇಕರ, ಶಿವಸೇನೆ (ಉದ್ಧವ್ ಠಾಕ್ರೆ) ಪಕ್ಷದ ಜಿಲ್ಲಾ ಅಧ್ಯಕ್ಷ ಅಜಯ ದಾಸರಿ, ಶಿವಸೇನೆ ಉಪನಾಯಕಿ ಅಸ್ಮಿತಾ ಗಾಯಕವಾಡ, ಅಶೋಕ್ ನಿಂಬರ್ಗಿ, ಭಾರತ ಜಾಧವ, ಯೂಸುಫ್ ಮೇಜರ್, ಪ್ರತಾಪ ಚವ್ಹಾಣ, ತಿರುಪತಿ ಪರಕಿಪಂಡಲಾ, ವಕೀಲ ಕೆಶವ ಇಂಗಳೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.