
ವಿಜಯಪುರ: ಬೆಂಗಳೂರು, ಮೈಸೂರಿನಲ್ಲಿ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿ ನೂರಾರು ಕೋಟಿ ಮೊತ್ತದ ಡ್ರಗ್ಸ್ ವಶಪಡಿಸಿಕೊಂಡಿರುವ ದಂದೆಯಲ್ಲಿ ಸಚಿವರು, ಶಾಸಕರ ಕೈವಾಡ ಇದೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡ್ರಗ್ಸ್ ಫ್ಯಾಕ್ಟರಿ ಪತ್ತೆ ಹಚ್ಚುವಲ್ಲಿ ರಾಜ್ಯದ ಪೊಲೀಸರ ಮತ್ತು ಗೃಹ ಸಚಿವರ ವೈಫಲ್ಯ ಎದ್ದುಕಾಣುತ್ತಿದೆ. ಸ್ವತಃ ಮುಖ್ಯಮಂತ್ರಿ ಕೈಯಲ್ಲಿ ಗುಪ್ತಚರ ಇಲಾಖೆ ಇದ್ದರೂ ಅವರ ತವರು ಜಿಲ್ಲೆಯಲ್ಲೇ ಡ್ರಗ್ಸ್ ಫ್ಯಾಕ್ಟರಿ ಕಾರ್ಯಾಚರಣೆಯಾಗುತ್ತಿದೆ. ಇಷ್ಟಾದರೂ ಕ್ರಮಕೈಗೊಳ್ಳುವಲ್ಲಿ ಪೊಲೀಸರು ವಿಫಲವಾಗಿದ್ದಾರೆ ಎಂದು ಆರೋಪಿಸಿದರು.
ಕ್ಯಾಸಿನೋ, ವೇಶ್ಯಾವಾಟಿಕೆ, ಜೂಜಾಟ, ಡ್ರಗ್ಸ್ ದಂದೆ ನಡೆಸುವವರು ಸಂಗ್ರಹಿಸಿದ ಸಾವಿರಾರು ಕೋಟಿ ಹಣವನ್ನು ರಾಜಕೀಯದಲ್ಲಿ ಹೂಡಿಕೆ ಮಾಡಿ, ಅಧಿಕಾರ ಹಿಡಿದು, ಆಡಳಿತ ನಡೆಸುತ್ತಿದ್ದಾರೆ. ಯುವಜನರ ದಾರಿ ತಪ್ಪಿಸುವ ಕೆಲಸ ರಾಜ್ಯ ಸರ್ಕಾರದ ಅವಧಿಯಲ್ಲಿ ನಡೆದಿದೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ರಾಜ್ಯ ಅರಾಜಕತೆಯತ್ತ ಸಾಗಿದೆ. ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಜನರಿಗೆ ಗ್ಯಾರಂಟಿ ತೋರಿಸಿ, ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂದರು.
ಎಸ್.ಐ.ಆರ್ ಪರಿಣಾಮ ಅಕ್ರಮ ಬಾಂಗ್ಲಾ ವಲಸಿಗರು ದಕ್ಷಿಣ ಭಾರತದ ರಾಜ್ಯಗಳ ಕಡೆ ವಲಸೆ ಬರುತ್ತಿದ್ದಾರೆ. ಬೆಂಗಳೂರಿನ ಕೋಗಿಲು ಬಡಾವಣೆ ಮೇಲ್ನೋಟಕ್ಕೆ ಕಂಡಷ್ಟು ಸರಳವಾಗಿಲ್ಲ. ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿರುವುದಕ್ಕೆ ಪಾಕಿಸ್ತಾನ ಸರ್ಕಾರ ಪ್ರತಿಕ್ರಿಯೆ ನೀಡುತ್ತಿದೆ, ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕು ಎಂದರು.
ಕಾಂಗ್ರೆಸ್‌ನ ಕೆ.ಸಿ.ವೇಣುಗೋಪಾಲ್ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಕೋಗಿಲು ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಮುಂದಾಗಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕೆ ಸರ್ಕಾರ ಮುಂದಾಗಿದೆ. ಕೋಗಿಲು ಘಟನೆಯನ್ನು ಸರ್ಕಾರ ರಾಷ್ಟ್ರೀಯ ಭದ್ರತೆ ಹಿನ್ನೆಲೆಯಲ್ಲಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ, ವಿಜು ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.