ADVERTISEMENT

ಆಧುನಿಕ ಭಗೀರಥ ಎಂ.ಬಿ.ಪಾಟೀಲ; ಹೆಮ್ಮೆಯ ವಿಷಯ- ಸಿದ್ದರಾಮಯ್ಯ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 14:51 IST
Last Updated 23 ಫೆಬ್ರುವರಿ 2023, 14:51 IST
ಬಬಲೇಶ್ವರದಲ್ಲಿ ಗುರುವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ‘ಪ್ರಜಾಧ್ವನಿ’ ಸಮಾವೇಶದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ,  ಡಾ.ಎಚ್.ಸಿ.ಮಹಾದೇವಪ್ಪ, ಪ್ರಕಾಶ ರಾಠೋಡ, ಜಮೀರ್ ಅಹ್ಮದ್ ಅವರಿಗೆ ಒಣದ್ರಾಕ್ಷಿ ಹಾರ ಹಾಕಿ, ಕಂಬಳಿ ಹೊದಿಸಿ ಸನ್ಮಾನಿಸಲಾಯಿತು–ಪ್ರಜಾವಾಣಿ ಚಿತ್ರ
ಬಬಲೇಶ್ವರದಲ್ಲಿ ಗುರುವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ‘ಪ್ರಜಾಧ್ವನಿ’ ಸಮಾವೇಶದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ,  ಡಾ.ಎಚ್.ಸಿ.ಮಹಾದೇವಪ್ಪ, ಪ್ರಕಾಶ ರಾಠೋಡ, ಜಮೀರ್ ಅಹ್ಮದ್ ಅವರಿಗೆ ಒಣದ್ರಾಕ್ಷಿ ಹಾರ ಹಾಕಿ, ಕಂಬಳಿ ಹೊದಿಸಿ ಸನ್ಮಾನಿಸಲಾಯಿತು–ಪ್ರಜಾವಾಣಿ ಚಿತ್ರ   

ವಿಜಯಪುರ: ಬಬಲೇಶ್ವರ ಕ್ಷೇತ್ರದ ಜನರು ಎಂ.ಬಿ.ಪಾಟೀಲ ಅವರನ್ನು ‘ಆಧುನಿಕ ಭಗೀರಥ’ ಎಂದು ಕರೆಯುತ್ತಿರುವುದು ನನಗೆ ಹೆಮ್ಮೆ ಎನಿಸುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಬಬಲೇಶ್ವರದಲ್ಲಿ ಗುರುವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಎಂ.ಬಿ.ಪಾಟೀಲರನ್ನು ಜಲಸಂಪನ್ಮೂಲ ಇಲಾಖೆ ಸಚಿವರನ್ನಾಗಿ ಮಾಡುವಾಗ ನನಗೆ ಸಂಶಯ, ಅಳಕು ಇತ್ತು. ಆದರೆ, ಅವರು ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸಿದರು. ಈ ಬಗ್ಗೆ ನನಗೆ ತೃಪ್ತಿ ಇದೆ. ನೀರಾವರಿ ಯೋಜನೆಗಳ ಅನುಷ್ಠಾನ ಸಂಬಂಧ ‌ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೆ, ಎಂದೂ ಮಧ್ಯ ಪ್ರವೇಶಿಸಲಿಲ್ಲ. ವಹಿಸಿದ ಕೆಲಸವನ್ನು ಪ್ರಾಮಾಣಿಕವಾಗಿ, ಪರಿಣಾಮಕಾರಿಯಾಗಿ ಮಾಡಿದ್ದಾರೆ. ನೀರು ಕೊಡುವ ಪ್ರಾಮಾಣಿಕ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ADVERTISEMENT

ಜನರಿಗೆ ನೀರು ಕೊಟ್ಟಿರುವುದು ದೊಡ್ಡ ಉಪಕಾರ ಅಲ್ಲ. ಜಲಾಶಯದಲ್ಲಿ ನೀರಿತ್ತು, ರೈತರಿಗೆ ನೀರಿನ ಅಗತ್ಯವೂ ಇತ್ತು. ನೀರು ಕೊಡಬೇಕಾಗಿರುವುದು ಯಾವುದೇ ಸರ್ಕಾರದ ಆದ್ಯ ಕರ್ತವ್ಯ. ನಾವು ಆ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿದ್ದೇವೆ. ಇದು ದೊಡ್ಡಸ್ತಿಕೆಯೂ ಅಲ್ಲ, ಉಪಕಾರವಲ್ಲವೂ ಎಲ್ಲ ಎಂದರು.

ಬಡವರು, ಜನಪರ ಕಾಳಜಿ ಇರುವ ವ್ಯಕ್ತಿ, ಯಾವುದೇ ಇಲಾಖೆ ಕೊಟ್ಟರೂ ನಿಬಾಯಿಸುವ ವ್ಯಕ್ತಿ ಎಂ.ಬಿ.ಪಾಟೀಲ ಅವರು ಮುಂಬರುವ ಸರ್ಕಾರದಲ್ಲಿ ಇರಬೇಕು. ಹೀಗಾಗಿ ಅವರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು. ಅವರಿಗೆ ಹಾಕುವ ಪ್ರತಿ ಮತವೂ ಸಿದ್ದರಾಮಯ್ಯಗೆ ಹಾಕಿದ ಮತವೆಂದು ತಿಳಿಯಬೇಕು ಎಂದು ಮನವಿ ಮಾಡಿದರು.

ರಾಜ್ಯ ಬಿಜೆಪಿ ಸರ್ಕಾರ ‘ಅಲಿಬಾಬಾ ಔರ್ ಚಾಲೀಸ್ ಚೋರ್’ ಎಂದು ವ್ಯಂಗ್ಯವಾಡಿದ ಅವರು, ಇಂಥ ಭ್ರಷ್ಟ ಸರ್ಕಾರವನ್ನು ನಾನು ಜೀವನದಲ್ಲಿ ನೋಡಿಲ್ಲ ಎಂದರು.

‘ನಾನು ಚೌಕಿದಾರ, ನಾ ಖಾವೂಂಗ, ನಾ ಖಾನೇದೂಂಗ’ ಎಂದು ಪ್ರಧಾನಿ ಮೋದಿ ಹೇಳುತ್ತಾರೆ.‌ ಆದರೆ, ಚೌಕಿದಾರನ ಕೆಲಸವನ್ನು ಮೋದಿ ಮಾಡಿಲ್ಲ, ಮಾಡುತ್ತಿಲ್ಲ ಎಂದು ಆರೋಪಿಸಿದರು.

ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರೈತರ ಆದಾಯ ದುಪ್ಪಟ್ಟಾಗಲಿಲ್ಲ, ಸಾಲ ದುಪ್ಪಟ್ಟಾಗಿದೆ.‌ ಯಾವುದೇ ಬೆಳೆಗೆ ಬೆಂಬಲ ಬೆಲ ನೀಡಲಿಲ್ಲ. ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ದರ ದುಪ್ಪಟ್ಟಾಗಿದೆ.‌ ಇದೇನಾ ಮೋದಿಜಿ ‘ಅಚ್ಛೆ ದಿನ’ ಎಂದು ಪ್ರಶ್ನಿಸಿದರು.

ಶಾಸಕ ಯಶವಂತ ರಾಯಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯ ಸುನೀಲ್ ಗೌಡ ಪಾಟೀಲ, ಯುವ ಮುಖಂಡ ಬಸನಗೌಡ ಎಂ.ಪಾಟೀಲ, ಕಾಂಗ್ರೆಸ್ ಬೆಳಗಾವಿ ವಿಭಾಗದ ಉಸ್ತುವಾರಿ ವಿಶ್ವನಾಥನ್, ಮುಖಂಡರಾ ಅಬ್ದುಲ್ ಹಮೀದ್ ಮುಶ್ರಫ್, ಕಾಂತಾ ನಾಯಕ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ರಾಜು ಆಲಗೂರ, ಮಹಾಂತೇಶ ಬಿರಾದಾರ, ಸಂಗಮೇಶ ಬಿರಾದಾರ, ಸೋಮನಾಥ ಕಳ್ಳಿಮನಿ, ವಿದ್ಯಾರಾಣಿ ತುಂಗಳ, ವಿಠಲ ಕಟಕದೊಂಡ, ರಮೇಶ ಬದ್ರಿ ಇದ್ದರು.

***

ಹೈನುಗಾರಿಕೆಗೆ ಆದ್ಯತೆ: ಎಂ.ಬಿ. ಪಾಟೀಲ

ವಿಜಯಪುರ: ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಬಬಲೇಶ್ವರ ಕ್ಷೇತ್ರದಲ್ಲಿ ಹೈನುಗಾರಿಕೆ, ಆಹಾರ ಸಂಸ್ಕರಣ ಘಟಕ ಆರಂಭಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಬಬಲೇಶ್ವರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರ ಮಾಡುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಭರವಸೆ ನೀಡಿದರು.

ಬರದ ಜಿಲ್ಲೆ, ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡ ಜಿಲ್ಲೆಗೆ ಬೊಗಸೆ ನೀರು ಕೊಡಿ, ಅಮೇರಿಕಾದ ಕ್ಯಾಲಿಫೋರ್ನಿಯಾ ಆಗಲಿದೆ ಎಂದು ಸಿದ್ದೇಶ್ವರ ಸ್ವಾಮೀಜಿ ಹೇಳಿದ್ದರು. ಅವರ ಆಶಯದಂತೆ ಅವಧಿಯಲ್ಲಿ ನೀರು ಹರಿಸಿದ್ದೇವೆ ಎಂದರು.

***


ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾದ ಎಂ.ಬಿ.ಪಾಟೀಲರಿಗೆ ಪ್ರತಿಸ್ಪರ್ಧಿಗಳೇ ಇಲ್ಲ. 50 ಸಾವಿರ ಮತಗಳ ಅಂತರಿಂದ ಗೆಲ್ಲಲಿದ್ದಾರೆ

–ಜಮೀರ್ ಅಹ್ಮದ್, ಶಾಸಕ

***
ಹೊಸ ವಿಧದಲ್ಲಿ ಬಬಲೇಶ್ವರ ರಾಜಕಾರಣ ಸಾಗಬೇಕಿದೆ. ಜಿಲ್ಲೆಯ ಕಾಂಗ್ರೆಸ್ ನಾಯಕರು ಪಕ್ಷದ ಸಿದ್ದಾಂತದ ಮೇಲೆ ನಡೆಯಬೇಕಿದೆ

–ಯಶವಂತ ರಾಯಗೌಡ ಪಾಟೀಲ, ಶಾಸಕ, ಇಂಡಿ

ಎಂ.ಬಿ.ಪಾಟೀಲರು ಬಸವಣ್ಣನ ಆಶಯದಂತೆ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ಚುನಾವಣೆಯಲ್ಲಿ ಎಲ್ಲರೂ ಅವರನ್ನು ಬೆಂಬಲಿಸಬೇಕು

–ಡಾ.ಎಚ್.ಸಿ.ಮಹಾದೇವಪ್ಪ, ಶಾಸಕ

***

ಒಂದು ಲಕ್ಷಕ್ಕಿಂತ ಹೆಚ್ಚು ಮತ ನೀಡಿ ಎಂ.ಬಿ.ಪಾಟೀಲ ಅವರನ್ನು ಗೆಲ್ಲಿಸಬೇಕು.‌ ತಾಂಡೆಯ ಪ್ರತಿ ಮತವೂ ಅವರಿಗೆ ಹೋಗಬೇಕು

–ಪ್ರಕಾಶ ರಾಠೋಡ, ವಿಧಾನ ಪರಿಷತ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.