ರಮೇಶ ಜಿಗಜಿಣಗಿ
ವಿಜಯಪುರ: ಇಡೀ ವಿಶ್ವದ ನಾಯಕರೇ ಶ್ಲಾಘಿಸುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಏಕವಚನ ಪದ ಪ್ರಯೋಗಿಸಿ ಟೀಕಿಸುತ್ತಿರುವುದು ಶೋಭೆ ತರುವುದಿಲ್ಲ. ಅವರು ಕೂಡಲೇ ಮೋದಿ ಅವರ ಕ್ಷಮೆ ಕೋರಬೇಕು’ ಎಂದು ಸಂಸದ ರಮೇಶ ಜಿಗಜಿಣಗಿ ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಅಭಿವೃದ್ಧಿ ಕಾರ್ಯಗಳೇ ಕುಂಠಿತವಾಗಿವೆ, ಇನ್ನೊಂದೆಡೆ ಮುಖ್ಯಮಂತ್ರಿಯಾಗುವ ತಂಡ, ಅಸಮಾಧಾನ, ವೈಮನಸ್ಸು ಹೀಗೆ ತಮ್ಮ ಪಕ್ಷದಲ್ಲಿಯೇ ಅನೇಕ ಸಮಸ್ಯೆಗಳಿವೆ, ಅವುಗಳ ಬಗ್ಗೆ ಎಐಸಿಸಿ ಅಧ್ಯಕ್ಷರು ಮಾತನಾಡಲಿ, ಜನರ ಹಿತ ಮರೆತಿರುವ ರಾಜ್ಯ ಸರ್ಕಾರದ ಕಿವಿ ಹಿಂಡಲಿ, ಅದನ್ನು ಬಿಟ್ಟು ಕೇವಲ ಪ್ರಧಾನಿ ಅವರನ್ನು ಟೀಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಟೀಕೆ ಸಹಜ, ಆದರೆ ಟೀಕೆ ಸಾತ್ವಿಕವಾಗಿರಬೇಕು, ಅಸಂಸದೀಯ ಪದ, ಏಕವಚನ ಪದ ಪ್ರಯೋಗಿಸಿ ಒಬ್ಬ ಪ್ರಧಾನಿಯನ್ನು ಟೀಕಿಸುವುದು ಖರ್ಗೆ ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಕೂಡಲೇ ಅವರು ಕ್ಷಮೆಯಾಚಿಸಬೇಕು, ಈ ರೀತಿ ಇನ್ಮುಂದೆ ಪ್ರಧಾನಿ ಅವರ ಬಗ್ಗೆ ಅಗೌರವ ತೋರುವ ರೀತಿಯಲ್ಲಿ ಟೀಕೆ ಮಾಡಬಾರದು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.