
ಮುದ್ದೇಬಿಹಾಳ: ಪಟ್ಟಣದ ಇಂದಿರಾ ನಗರದಲ್ಲಿರುವ ಬಡವರಿಗೆ ಉತಾರೆ ಕೊಡಲು ಪುರಸಭೆಯಿಂದ ಆಗುತ್ತಿಲ್ಲ. ಇದರಿಂದ ಸಾಕಷ್ಟು ತೊಂದರೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ನಿವಾಸಿಗಳು ಪಟ್ಟಣದ ತಹಶೀಲ್ದಾರ್ ಕಚೇರಿ ಎದುರಿಗೆ ಬುಧವಾರದಿಂದ ಅನಿರ್ದಿಷ್ಟಾವಧಿಯವರೆಗೆ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಪಟ್ಟಣದ ಅಂಬೇಡ್ಕರ್ ಸರ್ಕಲ್‌ದಿಂದ ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಸಮಾವೇಶಗೊಂಡರು.
ನಾಗೇಶ ಜಾಧವ ಮಾತನಾಡಿ, ತಡೆಯಾಜ್ಞೆ ಇದೆ ಎಂದು ಹೇಳುತ್ತಿದ್ದಾರೆ. ಆದರೆ ಯಾವ ಜಾಗದ ಮೇಲೆ ತಡೆಯಾಜ್ಞೆ ಇದೆ ಎಂಬುದನ್ನು ಹೇಳುತ್ತಿಲ್ಲ. 35 ವರ್ಷಗಳ ಹಿಂದೆ ಕೈ ಬರಹದ ಉತಾರೆಗಳು, ಹಕ್ಕುಪತ್ರಗಳಿದ್ದು ಅವುಗಳಿಗೆ ಉತಾರೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ನಿವಾಸಿ ರಿಯಾಜಹ್ಮದ ಉಣ್ಣಿಬಾವಿ ಮಾತನಾಡಿ, ‘ಉತಾರೆಗಾಗಿ ಮುಖ್ಯಾಧಿಕಾರಿಗೆ ನಾಲ್ಕು ಸಲ ಅರ್ಜಿ ಕೊಟ್ಟಿದ್ದೇನೆ. ಅಲ್ಲದೆ ಎಂ.ಎಲ್.ಎ ಮನೆಗೆ ಹೋಗಿ ಅರ್ಜಿ ಕೊಟ್ಟಿದ್ದೇನೆ. ಉತಾರೆ ತಗೊಂಡು ಏನು ಗಾಡಿ ತಗೊಳ್ಳುವನು ಇದ್ದೀಯಾ ಎಂದು ಎಂಎಲ್‌ಎ ಕೇಳುತ್ತಾರೆ. ಅವರು ಚಿನ್ನು ಧಣಿಗೆ ಹೇಳುತ್ತೇನೆ ಹೋಗು ಎಂದ್ರು, ಚಿನ್ನು ಧಣಿ ಚೀಫ್ ಆಫೀಸರ ಬಳಿ ಹೋಗಲು ಹೇಳಿದರು. ಚೀಫ್ ಆಫೀಸರ್ ಕೇಳಿದರೆ ಇವತ್ತು ಬಾ ನಾಳೆ ಬಾ ಎಂದು ಉಡಾಫೆ ಉತ್ತರ ಕೊಡುತ್ತಿದ್ದಾರೆ. ನಾನು ಸೌದಿಗೆ ಹೋಗುವವನು ಇದ್ದೇನೆ ಎಂದರೂ ನೀನು ಸೌದಿಗೆ ಹೋಗು ನಾನೇ ಗರಪಟ್ಟಿ ತುಂಬಿಕೊಂಡು ಉತಾರೆ ನಿನ್ನ ಮನಿಗೆ ಕಳಿಸಿಕೊಡುತ್ತೇನೆ ಎಂದು ಬೇಜವಾಬ್ದಾರಿಯಿಂದ ಮುಖ್ಯಾಧಿಕಾರಿ ಮಾತನಾಡುತ್ತಿದ್ದಾರೆ. ಎಂ.ಎಲ್.ಎ ಮನಿಗೆ ಎರಡು ಬಾರಿ ಹೋಗಿದ್ದೇನೆ. ಅವರು ಚಿನ್ನು ಧಣಿ ಬಳಿ ಹೋಗು ಎನ್ನುವುದು, ಚಿನ್ನು ಧಣಿ ಚೀಫ್ ಆಫೀಸರ್ ಬಳಿ ಹೋಗು’ ಎಂದು ತಿರುಗಾಡಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಓಣಿಯ ನಿವಾಸಿ ಮಹೆಬೂಬ ಮುಲ್ಲಾ ಮಾತನಾಡಿ, ‘ಇಂದಿರಾ ನಗರದಲ್ಲಿ ವಾಸಿಸುತ್ತಿರುವವರು ಬಡವರು,ದಲಿತರು,ಹಿಂದುಳಿದವರು,ಎಲ್ಲ ವರ್ಗದವರು ಇದ್ದಾರೆ. 1972ರಲ್ಲಿ ಕಾನೂನು ಬದ್ಧವಾಗಿ ಉತಾರೆ ಇತ್ತು. ಈಗ ಕಂಪ್ಯೂಟರ್ ಉತಾರೆ ಬಂದ ಮೇಲೆ ಯಾರೊಬ್ಬರಿಗೂ ಉತಾರೆ ಕೊಡುತ್ತಿಲ್ಲ.ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಕ್ಕು ಪತ್ರಗಳನ್ನು ಬದಲಾಯಿಸಿದರು. ಹಕ್ಕುಪತ್ರ ಇದ್ದರೂ ಉತಾರೆ ಕೊಡುತ್ತಿಲ್ಲ’ ಎಂದರು.
ಬಡಾವಣೆಯ ನಿವಾಸಿಗಳಾದ ಬಸವರಾಜ ಕೋಳೂರ, ಪರಶುರಾಮ ನಾಲತವಾಡ,ಬಾಬು ಬಳಗಾನೂರ, ಬುಡ್ಡಾ ಮುಲ್ಲಾ,ವಿಷ್ಣು ದಳವಾಯಿ, ಚಂದ್ರಶೇಖರ ಮಹಾಲಿಂಗಪೂರ,ಶಿವಪ್ಪ ಬೆನಕಟ್ಟಿ, ಬಸವರಾಜ ಕಲಾದಗಿ,ರಾಜು ಪಾತ್ರೋಟ,ನಾರಾಯಣ ಮಿರಜಕರ್, ಮಂಜು ಚಲವಾದಿ ನೂರಾರು ಜನ ಇದ್ದರು.
ತಹಶೀಲ್ದಾರ್ ಭೇಟಿ: ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಪ್ರತಿಭಟನಾಕಾರರ ಮನವಿ ಆಲಿಸಿದರು. ಅಲ್ಲಿನ ಜಾಗೆಯ ಮೇಲೆ ತಡೆಯಾಜ್ಞೆ ಇದ್ದು ಅದರ ಬಗ್ಗೆ ಪರಿಶೀಲನೆ ನಡೆಸಿ ಉತಾರೆ ನೀಡುವ ಬಗ್ಗೆ ಮುಖ್ಯಾಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ದರಣಿ ಹಿಂದಕ್ಕೆ ಪಡೆದುಕೊಳ್ಳುವಂತೆ ವಿನಂತಿಸಿದರೂ ಅದಕ್ಕೆ ಧರಣಿ ನಿರತರು ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂದು ಧರಣಿ ಮುಂದುವರೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.