ಮುದ್ದೇಬಿಹಾಳ: ರಸ್ತೆ ನಿರ್ಮಾಣಕ್ಕಾಗಿ ಜಾಗ, ಕಟ್ಟಡ ಕಳೆದುಕೊಂಡಿರುವ ಮಾಲೀಕರಿಗೆ ನಿಯಮಾನುಸಾರ ನಿವೇಶನ ನೀಡಲು ಕ್ರಮಕೈಗೊಂಡ ಬಳಿಕ ರಸ್ತೆ ಕಾಮಗಾರಿ ಆರಂಭಿಸುವುದಾಗಿ ಕೆ.ಆರ್.ಡಿ.ಸಿ.ಎಲ್ ಅಧಿಕಾರಿಗಳು ಲಿಖಿತವಾಗಿ ಭರವಸೆ ನೀಡಿದರು. ಅವರ ಭರವಸೆ ಮೇರೆಗೆ ಹೋರಾಟವನ್ನು ಅಂತ್ಯಗೊಳಿಸಿದ್ದೇವೆ ಎಂದು ಹೋರಾಟಗಾರರಾದ ಶಿವಾನಂದ ವಾಲಿ, ಸಂಗಯ್ಯ ಸಾರಂಗಮಠ ತಿಳಿಸಿದರು.
ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಬಾಕಿ ಉಳಿದಿರುವ ರಸ್ತೆ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಆಗ್ರಹಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಹಾಗೂ ಯುವಜನ ಸೇನೆ ನೇತೃತ್ವದಲ್ಲಿ ಧರಣಿ ನಡೆದಿತ್ತು. ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ಹುಬ್ಬಳ್ಳಿ ಕೆ.ಆರ್.ಡಿ.ಸಿ.ಎಲ್ ಇಲಾಖೆ ಇಇ ಪ್ರವೀಣ ಲಿಖಿತ ಉತ್ತರ ನೀಡಿದ್ದಕ್ಕೆ ಹೋರಾಟಗಾರರು ತಮ್ಮ ಧರಣಿ ವಾಪಸ್ ಪಡೆದುಕೊಂಡರು.
ಹುನಗುಂದ- ಮುದ್ದೇಬಿಹಾಳ– ತಾಳಿಕೋಟಿ ರಸ್ತೆಯನ್ನು ವಿಶ್ವಬ್ಯಾಂಕ್ ಆರ್ಥಿಕ ನೆರವಿನ ಅಡಿಯಲ್ಲಿ ಅಭಿವೃದ್ಧಿಪಡಿಸಿ ಪೂರ್ಣಗೊಳಿಸಲಾಗಿದೆ. ತಂಗಡಗಿ ಗ್ರಾಮದ ಪರಿಮಿತಿಯಲ್ಲಿ ಸುಮಾರು 100 ಮೀಟರ್ ರಸ್ತೆ ಅಭಿವೃದ್ಧಿ ಬಾಕಿ ಇದೆ. ಇದಕ್ಕಾಗಿ 31 ಮನೆಗಳು ಬಾಧಿತವಾಗಲಿವೆ. ಸದರಿ ಬಾಧಿತ ಕಟ್ಟಡಗಳಿಗೆ 2017-18ರ ಕೆಆರ್‌ಡಿಸಿಎಲ್ ಎಂ.ಡಿ ಆದೇಶದಂತೆ ಒಟ್ಟು ₹2,39,38,641 ಪರಿಹಾರ ಪಾವತಿಸಲಾಗಿದೆ. ಸದರಿ ಬಾಧಿತ ಕಟ್ಟಡಗಳಿಗೆ ಪರ್ಯಾಯವಾಗಿ ಬಡಾವಣೆ ನಿರ್ಮಿಸಲು ತಂಗಡಗಿ ಗ್ರಾಪಂ ವ್ಯಾಪ್ತಿಯ ಸರ್ವೆ ನಂ.124/1ರ 2 ಎಕರೆ ಜಮೀನನ್ನು ಜಿಲ್ಲಾಧಿಕಾರಿಗಳು ಮಂಜೂರಾತಿ ನೀಡಿದ್ದಾರೆ. ಬಾಧಿತ ಕಟ್ಟಡಗಳ ಮಾಲೀಕರಿಗೆ ನಿಯಮಾನುಸಾರ ನಿವೇಶನ ವಿತರಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು. ತದನಂತರ ಬಾಕಿ ಉಳಿದಿರುವ 90-100 ಮೀಟರ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ನೀಡಿದ ಪತ್ರದಲ್ಲಿ ವಿವರಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮುಂದಿನ ವಾರ ತಂಗಡಗಿ ಗ್ರಾಮ ಪಂಚಾಯಿತಿ ವತಿಯಿಂದ ಕೆ.ಆರ್.ಡಿ.ಸಿ.ಎಲ್., ಕಂದಾಯ, ಪೊಲೀಸ್ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಅಂತಿಮವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೋರಾಟಗಾರ ಸಂಗಯ್ಯ ಸಾರಂಗಮಠ ಮಾಹಿತಿ ನೀಡಿದರು.
ಧರಣಿ ಸ್ಥಳಕ್ಕೆ ಪಿಎಸ್‌ಐ ಸಂಜಯ ತಿಪರೆಡ್ಡಿ, ಕಂದಾಯ ನಿರೀಕ್ಷಕ ಪವನ ತಳವಾರ, ಕೆಆರ್‌ಡಿಸಿಎಲ್ ಸೆಕ್ಷನ್ ಅಧಿಕಾರಿ ಸುಧೀರ, ಹೋರಾಟಗಾರರಾದ ಗಂಗು ಗಡ್ಡಿ, ಮಹಾಂತೇಶ ಪಡಶೆಟ್ಟಿ, ಮಹ್ಮದರಫೀಕ ತೆಗ್ಗಿನಮನಿ, ಸಂಗಣ್ಣ ಪ್ಯಾಟಿ, ಚರಲಿಂಗಪ್ಪ ಕಮಲಾಪೂರ, ನಾಗರಾಜ ಅಗಸಿಮುಂದಿನ, ಗುರುರಾಜ ಕುಲಕರ್ಣಿ, ಪ್ರಕಾಶ ಹಂದ್ರಾಳ, ಚಂದ್ರು ಹಡಪದ, ಸಂಗಪ್ಪ ಹೊಳಿ, ಮಂಜುನಾಥ ದೇವರಮನಿ, ವೀರೇಶ ಆಲಕೊಪ್ಪರ,ಹುಲ್ಲಪ್ಪ ವಡ್ಡರ, ಶಿವಾನಂದ ದೇವರಮನಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.