ADVERTISEMENT

ಜನಾಭಿಪ್ರಾಯವಿದ್ದರೆ ಹೊಸ ರಾಜಕೀಯ ಪಕ್ಷ: ಶಾಸಕ ಯತ್ನಾಳ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2025, 22:31 IST
Last Updated 31 ಮಾರ್ಚ್ 2025, 22:31 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ:‌ ‘ಹಿಂದೂಗಳ ರಕ್ಷಣೆಗೆ ಹೊಸ ರಾಜಕೀಯ ಪಕ್ಷ ಕಟ್ಟುವಂತೆ ಜನರ ಬೇಡಿಕೆಯಿದೆ. ಎಲ್ಲವೂ ಸೇರಿ ಒಮ್ಮತದ  ಅಭಿಪ್ರಾಯ ವ್ಯಕ್ತವಾದರೆ, ಮುಂದಿನ ವಿಜಯದಶಮಿ ದಿನ ಹೊಸ ರಾಜಕೀಯ ಪಕ್ಷ ಘೋಷಿಸುವೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

‘ಹಿಂದೂ ನಾಯಕರನ್ನು ಮೂಲೆಗುಂಪು ಮಾಡುವ ಕುತಂತ್ರ ಯಡಿಯೂರಪ್ಪ ಕುಟುಂಬದಿಂದ ನಡೆದಿದೆ. ಬಿ.ವೈ.ವಿಜಯೇಂದ್ರ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಬಿಂಬಿಸಿದರೆ, ರಾಜ್ಯದ ಜನ, ಅಭಿವೃದ್ಧಿ ಮತ್ತು ಸನಾತನ ಧರ್ಮ ರಕ್ಷಣೆಗೆ ನಿರ್ಧರಿಸುವೆ. ಜನಜಾಗೃತಿ ಮೂಡಿಸುವೆ’ ಎಂದು ಅವರು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

‘ನನ್ನ ಹೋರಾಟ ಮೋದಿ ಅಥವಾ ಪಕ್ಷದ ವಿರುದ್ಧ ಅಲ್ಲ. ಯಡಿಯೂರಪ್ಪ ಕುಟುಂಬವೇ ಬೇಕು ಎನ್ನುವುದಾದರೆ, ಮುಂದಿನ ನಿರ್ಣಯ ಕೈಗೊಳ್ಳುವೆ. ಕಾಂಗ್ರೆಸ್ ಜೊತೆ ಬಿ.ಎಸ್.ಯಡಿಯೂರಪ್ಪ ಅವರದ್ದು ಹೊಂದಾಣಿಕೆ ಇದೆ. ಡಿ.ಕೆ ಶಿವಕುಮಾರ್ ಜೊತೆ ವ್ಯಾಪಾರ ಇದೆ, ಜಮೀರ್‌ ಅಹ್ಮದ ಖಾನ್ ಜೊತೆ ಸರಸ ಸಲ್ಲಾಪವಿದೆ. ರಾಜ್ಯದಲ್ಲಿ ಬಿಜೆಪಿಯ ಮಹತ್ವ ಕುಸಿಯಲು ಬಿ.ವೈ.ವಿಜಯೇಂದ್ರ ಕಾರಣ’ ಎಂದರು.

ADVERTISEMENT
ಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿರುವ ನಿರ್ಣಯವನ್ನು ಕೇಂದ್ರದ ನಾಯಕರು ಮರುಪರಿಶೀಲಿಸಬೇಕು. ಉಚ್ಚಾಟ‌ನೆ ಕ್ರಮ ಹಿಂಪಡೆದು ಬಿಜೆಪಿಯು ಹಿಂದುತ್ವದ ಪರ ನಿಲ್ಲಬೇಕು.
ಪ್ರಮೋದ ಮುತಾಲಿಕ, ಅಧ್ಯಕ್ಷ, ಶ್ರೀರಾಮಸೇನೆ ಸಂಘಟನೆ

‘ಯತ್ನಾಳ ಉಚ್ಚಾಟನೆಯು ಪಂಚಮಸಾಲಿಗೆ ಸಂಬಂಧವಿಲ್ಲ’

ಬೆಳಗಾವಿ: ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಬ್ಬರಿಗೇ ಇಡೀ ಪಂಚಮಸಾಲಿ ಸಮಾಜ ಬರೆದುಕೊಟ್ಟಿಲ್ಲ. ಅವರ ಉಚ್ಚಾಟನೆ ವಿಷಯದಲ್ಲಿ ಸಮಾಜವನ್ನು ಎಳೆದುತಂದ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಮಾತು ಬೇಸರ ತಂದಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ‘ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿದ ಕ್ರಮ ಖಂಡಿಸಿ ಏಪ್ರಿಲ್ 13ರಂದು ಸ್ವಾಮೀಜಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನೆ ತೀರ ವೈಯಕ್ತಿಕ ವಿಷಯ’ ಎಂದು ಅವರು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು. ‘ರಾಜ್ಯದಲ್ಲಿ ಶೇ 80ರಷ್ಟು ಪಂಚಮಸಾಲಿಗರು ಬಿಜೆಪಿಯಲ್ಲಿದ್ದಾರೆ ಎಂದು ಸ್ವಾಮೀಜಿ ಹೇಳಿದ್ದು ನನ್ನ ಮನಸ್ಸಿಗೆ ಬಹಳ ನೋವು ಮಾಡಿದೆ. ಸ್ವಾಮೀಜಿ ಹೀಗೆ ಹೇಳಬಾರದಿತ್ತು. ಕಾಂಗ್ರೆಸ್‌ನಲ್ಲಿ ಕೂಡ ಬಹಳಷ್ಟು ಶಾಸಕರು ಆ‌ಯ್ಕೆಯಾಗಲು ಲಿಂಗಾಯತ– ಪಂಚಮಸಾಲಿ ಸಮಾಜ ಕಾರಣ. ಪಂಚಮಸಾಲಿ ಹೋರಾಟದಲ್ಲಿ ನಾವೆಲ್ಲರೂ ಪಕ್ಷಾತೀತವಾಗಿ ಪಾಲ್ಗೊಂಡಿದ್ದೆವು. ಸ್ವಾಮೀಜಿಗಳು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು. ಒಂದು ಇತಿ–ಮಿತಿ ಇರಬೇಕು’ ಎಂದರು.  ‘ಹೊಸ ಪಕ್ಷ ಕಟ್ಟುವ ಯತ್ನಾಳ ಅವರ ಯತ್ನ ಸಫಲವಾಗಲಿ. ಅವರಿಗೆ ಒಳ್ಳೆಯದಾಗಲಿ‍ ಎಂದು ಹಾರೈಸುವೆ’ ಎಂದರು.

‘ಕಾಂಗ್ರೆಸ್‌ಗೆ ಯತ್ನಾಳ ಅರ್ಜಿ ಹಾಕಿಲ್ಲ’

ವಿಜಯಪುರ: ಬಸನಗೌಡ ಪಾಟೀಲ ಯತ್ನಾಳ ಅವರು ಕಾಂಗ್ರೆಸ್ ಸೇರಲು ಅರ್ಜಿ ಹಾಕಿಲ್ಲ. ಆ ವಿಷಯದ ಬಗ್ಗೆ ಮಾತನಾಡುವುದು ಈಗ ಅಪ್ರಸ್ತುತ. ಒಂದು ವೇಳೆ ಅವರು ಅರ್ಜಿ ಹಾಕಿದರೂ ನಮ್ಮ ಪಕ್ಷದಲ್ಲಿ ಸೇರಿಸಿಕೊಳ್ಳುವುದು ಕಷ್ಟ’ ಎಂದು ಸಚಿವ ಎಂ.ಬಿ.‍ಪಾಟೀಲ ತಿಳಿಸಿದರು. ‘ಯತ್ನಾಳ ಅವರು ಒಂದು ಸಮುದಾಯ ಒಂದು ಧರ್ಮದ ಜನರ ಬಗ್ಗೆ ಮನಸೋಇಚ್ಛೆ ಮಾತನಾಡಿ ಅಪಮಾನಿಸಿದ್ದಾರೆ. ಕೀಳಾಗಿ ಕಂಡಿದ್ದಾರೆ. ಹೀಗಾಗಿ ಅವರ ಕಾಂಗ್ರೆಸ್ ಸೇರ್ಪಡೆ ಕಷ್ಟ’ ಎಂದರು.

ಯತ್ನಾಳ ಒಂದು ಸಮುದಾಯ, ಧರ್ಮದ ಜನರ ಬಗ್ಗೆ ಮನಸೋಇಚ್ಛೆ ಮಾತನಾಡಿ ಕೀಳಾಗಿ ಅಪಮಾನಿಸಿದ್ದಾರೆ. ಹೀಗಾಗಿ ಅವರ ಕಾಂಗ್ರೆಸ್ ಸೇರ್ಪಡೆ ಕಷ್ಟ
ಎಂ.ಬಿ.ಪಾಟೀಲ, ಸಚಿವ
ದೊಡ್ಡ ದೊಡ್ಡವರೇ ಹೊಸ ಪಕ್ಷ ಹುಟ್ಟು ಹಾಕಿದರೂ ಯಶಸ್ವಿ ಆಗಿಲ್ಲ. ಹೀಗಾಗಿ, ಯತ್ನಾಳ ಹೊಸ ಪಕ್ಷ ಕಟ್ಟಿದರೆ ಯಶಸ್ಸು ಸಿಗುತ್ತದೆ ಎಂದು ನನಗಂತೂ ಅನಿಸುವುದಿಲ್ಲ
ದಿನೇಶ್‌ ಗುಂಡೂರಾವ್‌, ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.