ADVERTISEMENT

ಬಸವತತ್ವ ಕೇವಲ ಪ್ರಚಾರಕ್ಕೆ, ರಾಜಕೀಯಕ್ಕೆ ಬಳಕೆ: ನಿಡುಮಾಮಿಡಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 12:41 IST
Last Updated 8 ಸೆಪ್ಟೆಂಬರ್ 2025, 12:41 IST
<div class="paragraphs"><p>ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ</p></div>

ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ

   

ವಿಜಯಪುರ: ‘ಬಸವಣ್ಣ ಪ್ರತಿಪಾದಿಸಿದ ಬಸವತತ್ವ ಪಾಲನೆ ಅತ್ಯಂತ ಕಠಿಣವಾಗಿದೆ. ನನ್ನನ್ನೂ ಸೇರಿದಂತೆ ನಾಡಿನ ಯಾವೊಬ್ಬ ಸ್ವಾಮೀಜಿ, ವಿದ್ವಾಂಸರು, ನಾಯಕರೂ ಬಸವ ತತ್ವವನ್ನು ಪಾಲನೆ ಮಾಡುತ್ತಿಲ್ಲ’ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು. 

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಸವ ತತ್ವ ಪಾಲನೆ ಮಾಡಿದವರು ಮಹಾ ಪುರುಷರಾಗುತ್ತಾರೆ. ಕೇವಲ ಪ್ರಚಾರಕ್ಕೆ, ರಾಜಕೀಯಕ್ಕೆ ಬಸವತತ್ವ ಬಳಕೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು

ADVERTISEMENT

ಹಿಂದೂಗಳಲ್ಲ:

‘ವೀರಶೈವ, ಲಿಂಗಾಯತ ಹಿಂದೂ ಧರ್ಮದ ಅಂಗವಲ್ಲ. ಇದೊಂದು ಸ್ವತಂತ್ರ ಧರ್ಮ. ವೀರಶೈವ–ಲಿಂಗಾಯತರು ನಮ್ಮ ಅಸ್ಮಿತೆಗಾಗಿ, ನಮ್ಮ ಸಿದ್ಧಾಂತಕ್ಕಾಗಿ, ನಮ್ಮ ಆಚರಣೆಗಾಗಿ ಸ್ವತಂತ್ರ ಧರ್ಮದವರಾಗಬೇಕೇ ಹೊರತು, ಹಿಂದೂ ಧರ್ಮದ ವಿರೋಧಿಗಳಾಗಬೇಕಾಗಿಲ್ಲ, ಹಿಂದೂ ಧರ್ಮ ಬಿಟ್ಟುಕೊಡಲು ಬರುವುದಿಲ್ಲ’ ಎಂದರು.

‘ಪ್ರತ್ಯೇಕ ಧರ್ಮ ಮಾನ್ಯತೆಯನ್ನು ವೀರಶೈವ, ಲಿಂಗಾಯತ ಇಬ್ಬರೂ ಒಟ್ಟುಗೂಡಿಯೇ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಭಿನ್ನಾಭಿಪ್ರಾಯ ಬಗೆಹರಿಸಿ:

ಕೇಂದ್ರ ಸರ್ಕಾರ ಜಾತಿ ಗಣತಿ ಆರಂಭಿಸುವ ಮುನ್ನವೇ ವೀರಶೈವ–ಲಿಂಗಾಯತ ನಡುವಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ವೀರಶೈವ ಲಿಂಗಾಯತ ಮಹಾಸಭೆಯು ನಿಷ್ಪಕ್ಷಪಾತವಾಗಿ ಹಾಗೂ ಪ್ರಾಮಾಣಿಕವಾಗಿ ಶ್ರಮಿಸಬೇಕಿದೆ ಎಂದು ಒತ್ತಾಯಿಸಿದರು.‌

ವೀರಶೈವ–ಲಿಂಗಾಯತ ನಡುವಿನ ಭಿನ್ನಾಭಿಪ್ರಾಯ 12ನೇ ಶತಮಾನದಿಂದ ಆರಂಭಗೊಂಡು ಇಂದಿನ ವರೆಗೂ ಬಗೆಹರಿದಿಲ್ಲ. ಈ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಮಹಾಸಭೆಯು ಪಂಚ ಪೀಠಾಧೀಶರು, ವಿರಕ್ತವರ್ಗದ ಸ್ವಾಮೀಜಿಗಳು, ಸಮಾಜದ ಹಾಲಿ, ಮಾಜಿ ರಾಜಕೀಯ ನಾಯಕರು, ವಿದ್ವಾಂಸರು, ತಜ್ಞರು, ವೈದ್ಯರು, ಎಂಜಿನಿಯರ್‌, ಸಾಧಕರು, ಗಣ್ಯರನ್ನು ಒಂದೆಡೆ ಸೇರಿಸಿ ಅವರಿಂದ ಅಭಿಪ್ರಾಯ ಪಡೆದು ಒಮ್ಮತಕ್ಕೆ ಬರಬೇಕು ಹಾಗೂ ಸಮಾಜ ಅದನ್ನು ಒಪ್ಪಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಹುಪಾಲು ಜನ ವೀರಶೈವ–ಲಿಂಗಾಯತ ಒಟ್ಟಾಗಿ ಹೋಗಬೇಕು ಎಂಬ ಒಲವು ಹೊಂದಿದ್ದಾರೆ. ಸಮಾಜದ ಹಿತ ದೃಷ್ಟಿಯಿಂದ ಆದಷ್ಟು ಶೀಘ್ರ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದರು.

ಅಭ್ಯಂತರ ಬೇಡ:
‘ಮೈಸೂರು ದಸರಾ ಉತ್ಸವ ಇಡೀ ಕನ್ನಡ ನಾಡ ಉತ್ಸವವಾಗಿ ವ್ಯಾಪಿಸಿದೆ. ಕನ್ನಡ ನಾಡು, ನುಡಿಗೆ ಗೌರವ ತಂದವರು ಹಾಗೂ ದಸರಾ ಸಂಪ್ರದಾಯವನ್ನು ಗೌರವದಿಂದ ಒಪ್ಪಿ ಬರುವವರು ಯಾರೇ ಆಗಿರಲಿ ಅವರಿಂದ ಉದ್ಘಾಟಿಸುವುದಕ್ಕೆ ಅಭ್ಯಂತರ ಸರಿಯಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.