ADVERTISEMENT

ಕಾಲುವೆ ನೀರು ಅಕ್ರಮ ಬಳಕೆ ತಡೆಗೆ ಸೂಚನೆ

ಶಾಸಕ ಎಂ.ಬಿ.ಪಾಟೀಲ ದಿಡೀರ್‌ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 21 ಮೇ 2020, 14:23 IST
Last Updated 21 ಮೇ 2020, 14:23 IST
ಶಾಸಕ ಎಂ.ಬಿ.ಪಾಟೀಲ ಕಾಲುವೆ ‍ಪರಿಶೀಲನೆ ನಡೆಸಿದರು
ಶಾಸಕ ಎಂ.ಬಿ.ಪಾಟೀಲ ಕಾಲುವೆ ‍ಪರಿಶೀಲನೆ ನಡೆಸಿದರು   

ವಿಜಯಪುರ: ಮುಳವಾಡ ಏತನೀರಾವರಿ ಯೋಜನೆಯ ಮಲಘಾಣ ಪಶ್ಚಿಮ ಕಾಲುವೆಗೆ ನೀರು ಹರಿಸಿ ಒಂದು ತಿಂಗಳಾದರೂ ಕೊನೆಯ ಹಳ್ಳಿಗಳಾದ ಅರ್ಜುಣಗಿ, ಹೆಬ್ಬಾಳಟ್ಟಿ ಪ್ರದೇಶಗಳಿಗೆ ಇನ್ನೂ ನೀರು ತಲುಪದಿರುವ ಬಗ್ಗೆ ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಶಾಸಕ ಎಂ.ಬಿ.ಪಾಟೀಲ ಗುರುವಾರ ದಿಡೀರನೆ ಭೇಟಿ ಪರಿಶೀಲನೆ ನಡೆಸಿದರು.

ಶೇಗುಣಶಿ, ಕಂಬಾಗಿ ಮತ್ತು ಸಂಗಾಪುರ ಎಸ್.ಎಚ್. ಗ್ರಾಮಗಳಲ್ಲಿ ರೈತರು ಅಕ್ರಮ ಸಂಪರ್ಕದ ಮೂಲಕ ಭಾರಿ ಪ್ರಮಾಣದಲ್ಲಿ ನೀರನ್ನು ತೆಗೆದುಕೊಳ್ಳುತ್ತಿರುವುದನ್ನು ತಕ್ಷಣ ತಡೆಯುವಂತೆ ಹಾಗೂ ಕಾಲುವೆಯ ಕೊನೆಯ ಭಾಗದವರೆಗೂ ನೀರು ಹರಿಯುವಂತೆ ನೋಡಿಕೊಳ್ಳುವಂತೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಎಲ್ಲಾ ಅಕ್ರಮ ಸಂಪರ್ಕಗಳು ಬಂದಾಗಬೇಕು. ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅವರ ವಿರುದ್ಧ ಕ್ರಮ ಜರುಗಿಸದೇ ಬಿಡುವದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

ADVERTISEMENT

‘ಐದು ವರ್ಷಗಳ ಕಾಲ ನೀರಾವರಿ ಸಚಿವನಾಗಿ ಹಗಲು ರಾತ್ರಿ ದುಡಿದು ನೂರಾರು ಕಿ.ಮೀ ಕಾಲುವೆ ನಿರ್ಮಿಸಿ, ಬೃಹತ್ ಜಾಕ್‌ವೆಲ್‍ಗಳನ್ನು ಕಟ್ಟಿ, ಬೃಹದಾಕಾರದ ಮೋಟಾರ್ ಕೂಡಿಸಿ ನಿಮಗೆ ನೀರು ಕೊಟ್ಟಿದ್ದೇವೆ. ರೈತರಾದ ನಿಮ್ಮಲ್ಲಿ ಎಲ್ಲರಿಗೂ ಹಂಚಿ ತಿನ್ನುವ ನ್ಯಾಯ ಬೇಕು. ಆಸೆಗೆ ಮಿತಿ ಬೇಕು, ದುರಾಸೆ ಇರಬಾರದು. ಮುಖ್ಯ ಕಾಲುವೆ, ಉಪಕಾಲುವೆ, ಹಳ್ಳ-ಕೊಳ್ಳ, ನಾಲಾಗಳ ಮೂಲಕ ನೀರು ಹರಿಬಿಟ್ಟಾಗಲೂ ಈ ರೀತಿ ನೀರು ಬಳಸುವುದು ಸರಿಯಲ್ಲ. ಇನ್ನೊಬ್ಬರನ್ನು ಉಪವಾಸವಿಟ್ಟು ನೀವು ಹೊಟ್ಟೆ ತುಂಬ ತಿಂದರೆ ಅದು ಅಜೀರ್ಣವಾಗುತ್ತದೆ’ ಎಂದು ರೈತರಿಗೆ ತಿಳಿ ಹೇಳಿದರು.

ತಕ್ಷಣದಿಂದಲೇ ಪೊಲೀಸ್‌ ಗಸ್ತು ಹಾಕಿ, ಯಾರೇ ಈ ರೀತಿ ಸಂಪರ್ಕ ಪಡೆದಿದ್ದರೆ ನಿರ್ದಾಕ್ಷಣ್ಯವಾಗಿ ಕ್ರಮ ಜರುಗಿಸಿ ಎಂದುಬಬಲೇಶ್ವರ ಪಿಎಸ್‍ಐ ಸಂಜೀವ ಕಲ್ಲೂರ ಅವರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.