ADVERTISEMENT

ಪ್ರಧಾನಿ ಮೋದಿಗೆ ಜಿಲ್ಲೆಗೆ ಆಹ್ವಾನ: ಜಿಗಜಿಣಗಿ

ವಿಜಯಪುರದ ವಜ್ರ ಹನುಮಾನ್‌ ಗೇಟ್‌ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 14:54 IST
Last Updated 2 ಮಾರ್ಚ್ 2021, 14:54 IST
ವಿಜಯಪುರ ನಗರದ ವಜ್ರಹನುಮಾನ್‌ ಮಂದಿರದ ಬಳಿ ನಿರ್ಮಿಸಿರುವ ರೈಲ್ವೆ ಮೇಲ್ಸೇತುವೆಯನ್ನು ರಿಮೋಟ್‌ ಮೂಲಕ ಸಂಸದ ರಮೇಶ ಜಿಗಜಿಣಗಿ ಮಂಗಳವಾರ ಲೋಕಾರ್ಪಣೆಗೊಳಿಸಿದರು –ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ವಜ್ರಹನುಮಾನ್‌ ಮಂದಿರದ ಬಳಿ ನಿರ್ಮಿಸಿರುವ ರೈಲ್ವೆ ಮೇಲ್ಸೇತುವೆಯನ್ನು ರಿಮೋಟ್‌ ಮೂಲಕ ಸಂಸದ ರಮೇಶ ಜಿಗಜಿಣಗಿ ಮಂಗಳವಾರ ಲೋಕಾರ್ಪಣೆಗೊಳಿಸಿದರು –ಪ್ರಜಾವಾಣಿ ಚಿತ್ರ   

ವಿಜಯಪುರ: ಗದಗ–ಹುಟಗಿ ರೈಲ್ವೆ ದ್ವಿಪಥ ಮತ್ತು ರೈಲ್ವೆ ಮಾರ್ಗ ವಿದ್ಯುದ್ದೀಕರಣ, ಕೂಡಗಿ ಎನ್‌ಟಿಪಿಸಿ ಮತ್ತು ವಿಜಯಪುರ–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಿಲ್ಲೆಗೆ ಆಹ್ವಾನಿಸಲಾಗುವುದು ಎಂದುಸಂಸದ ರಮೇಶ ಜಿಗಜಿಣಗಿ ಹೇಳಿದರು.

ನಗರದ ಬಾಗಲಕೋಟೆ ರಸ್ತೆಯ ವಜ್ರಹನುಮಾನ್‌ ಮಂದಿರದ ಬಳಿ ನೈರುತ್ಯ ರೈಲ್ವೆಯು ₹26.25 ಕೋಟಿ ಮೊತ್ತದಲ್ಲಿ ನಿರ್ಮಿಸಿರುವ ರೈಲ್ವೆ ಮೇಲ್ಸೇತುವೆಯನ್ನು ಮಂಗಳವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗೆ ಜಿಲ್ಲೆಗೆ ಬರುವಂತೆ ಈಗಾಗಲೇ ಪ್ರಧಾನಿ ಅವರಿಗೆ ಪತ್ರ ಬರೆದು ವಿನಂತಿಸಿದ್ದೇನೆ. ಶೀಘ್ರದಲ್ಲೇ ಅವರನ್ನು ಭೇಟಿಯಾಗಿ ಆಹ್ವಾನ ನೀಡುತ್ತೇನೆ ಎಂದರು.

ADVERTISEMENT

ಕಳೆದ 10 ವರ್ಷಗಳಲ್ಲಿ ಜಿಲ್ಲೆಗೆ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ₹37 ಸಾವಿರ ಕೋಟಿ ಅನುದಾನವನ್ನು ಕೇಂದ್ರ ಸರ್ಕಾರದಿಂದ ತಂದಿದ್ದೇನೆ. ಆದರೂ ಸಹ ಕೆಲವರು ನಾನು ಏನೂ ಕೆಲಸ ಮಾಡುತ್ತಿಲ್ಲ ಎಂದು ಟೀಕಿಸುತ್ತಾರೆ. ಜನ ಮಾತ್ರ ನನ್ನ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಪ್ರತಿ ಭಾರಿ ನನಗೆ ವೋಟ್‌ ಹಾಕುವ ಮೂಲಕ ಲೋಕಸಭೆಗೆ ಕಳುಹಿಸುತ್ತಲೇ ಇದ್ದಾರೆ ಎಂದು ಟೀಕಾಕಾರರಿಗೆ ಉತ್ತರ ನೀಡಿದರು.

ಇಬ್ರಾಹಿಂಪುರ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಅವರು ರೈಲ್ವೆ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.

ವಿಜಯಪುರ ರೈಲ್ವೆ ಗೂಡ್ಸ್‌ಶೆಡ್‌ ಅನ್ನು ಅಲಿಯಾಬಾದ್‌ಗೆ ಸ್ಥಳಾಂತರಿಸಲಾಗುವುದು. ಈ ಸಂಬಂಧ ಅಲಿಯಾಬಾದ್‌ನಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ನಡೆದಿದೆ ಎಂದು ಹೇಳಿದರು.

ಬಾಗಲಕೋಟೆ ಮಾರ್ಗದ ಸವನಹಳ್ಳಿ ಬಳಿ ₹57 ಕೋಟಿ ಮೊತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ. ಇಲ್ಲಿ ಅಕ್ಕಪಕ್ಕದ ಹೊಲದ ಮಾಲೀಕರು ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ಅವರೊಂದಿಗೆ ಶೀಘ್ರದಲ್ಲೇ ಮಾತುಕತೆ ನಡೆಸಿ, ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಜ್ರ ಹನುಮಾನ್‌ ಗುಡಿ ಬಳಿ ರೈಲ್ವೆ ಅಂಡರ್‌ ಪಾಸ್‌ ನಿರ್ಮಾಣದ ಅಗತ್ಯವಿದ್ದು, ಈ ಬಗ್ಗೆ ಶೀಘ್ರ ಕ್ರಮಕೈಗೊಳ್ಳುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.

ಇಂಡಿ ಪಟ್ಟಣದ ಸಿದ್ದಲಿಂಗೇಶ್ವರ ಗುಡಿ ಬಳಿ ಹಾಗೂ ಮುಳವಾಡದಲ್ಲಿ ರೈಲ್ವೆ ಮೇಲ್ಸೇತುವೆ ಮಂಜೂರಾಗಿದೆ. ಶೀಘ್ರದಲ್ಲೇ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪೂರ, ವಿಜಯಪುರ ಜಿಲ್ಲೆಯ ಮಟ್ಟಿಗೆ ರೈಲ್ವೆ ಎಂಬುದು ಗಗನಕುಸುಮವಾಗಿತ್ತು. ಜಿಲ್ಲೆಯ ಜನತೆ ರೈಲ್ವೆ ಬಳಕೆಗೆ ಅವಕಾಶವೇ ಇರಲಿಲ್ಲ. ರಮೇಶ ಜಿಗಜಿಣಗಿ ಅವರು ಸಂಸದರಾದ ಬಳಿಕ ಹಲವು ಯೋಜನೆಗಳನ್ನು ಜಿಲ್ಲೆಗೆ ತರುವ ಮೂಲಕ ರೈಲ್ವೆಯನ್ನು ಜನತೆಗೆ ಹತ್ತಿರವಾಗಿಸಿದ್ದಾರೆ ಎಂದರು.

ಪ್ರತಿದಿನ ಸಂಜೆ ವಿಜಯಪುರದಿಂದ ಬೆಂಗಳೂರಿಗೆ ರೈಲು ಸಂಚಾರ ಆರಂಭವಾಗಬೇಕಿದೆ. ಜೊತೆಗೆ ಜಿಲ್ಲೆಯಲ್ಲಿ ವಿವಿಧೆಡೆ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳು ವಿಳಂಬಕ್ಕೆ ಅವಕಾಶವಿಲ್ಲದೇ ಶೀಘ್ರ ಪೂರ್ಣಗೊಳ್ಳಬೇಕಿದೆ ಎಂದು ಹೇಳಿದರು.

ಜಗತ್ತಿನ ಅತಿದೊಡ್ಡ ಶೌಚಾಲಯ ಎಂದರೆ ಅದು ಭಾರತೀಯ ರೈಲ್ವೆ ಮಾರ್ಗ ಎಂಬಂತಾಗಿತ್ತು. ಆದರೆ, ಪ್ರಧಾನಿ ಮೋದಿ ಅವರು ಸ್ವಚ್ಛ ಭಾರತ ಯೋಜನೆ ಮೂಲಕ ರೈಲ್ವೆ ಮಾರ್ಗ, ನಿಲ್ದಾಣ ಮತ್ತು ರೈಲುಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ರೈಲ್ವೆಯನ್ನು ಸ್ವಚ್ಛಗೊಳಿಸಲು ಆದ್ಯತೆ ನೀಡಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಬೀಜ ಮತ್ತು ಪ್ರಮಾಣಿತ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಮಾಜಿ ಶಾಸಕ ಅಪ್ಪು ಪಟ್ಟಣಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ,ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಲಖೇಡೆ, ಮುಖ್ಯ ಎಂಜಿನಿಯರ್‌(ನಿರ್ಮಾಣ) ಪ್ರೇಮನಾರಾಯಣ, ಸಾರ್ವಜನಿಕ ಸಂಪರ್ಕ ಅಧಿಕಾರಿ ಇದ್ದರು.

ನಾನು ಯಾರ ತಂಟೆಗೂ ಹೋಗಲ್ಲ; ನನ್ನ ತಂಟೆಗೆ ಬರಬೇಡಿ ಎಂದು ಕೈಮುಗಿದು ವಿನಂತಿಸುತ್ತೇನೆ. ನಾನು ದಲಿತ ಎಂಬ ಕಾರಣಕ್ಕೆನನ್ನ ತಂಟೆಗೆ ಬಂದರೆ ಸುಮ್ಮನಿರಲ್ಲ.
–ರಮೇಶ ಜಿಗಜಿಣಗಿ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.