ADVERTISEMENT

ಪೋಕ್ಸೊ ಪ್ರಕರಣ; ವಿದ್ಯಾರ್ಥಿನಿ ಆತ್ಮಹತ್ಯೆ, ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2024, 13:08 IST
Last Updated 3 ಡಿಸೆಂಬರ್ 2024, 13:08 IST

ನಾಲತವಾಡ(ವಿಜಯಪುರ): ಚುಡಾಯಿಸಿ, ಕಿರುಕುಳ ನೀಡಿ, ಕುಟುಂಬಕ್ಕೆ ಜೀವ ಬೆದರಿಕೆ ಒಡ್ಡಿದ್ದ ಆರೋಪಿಗಳ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದ 10ನೇ ತರಗತಿ ವಿದ್ಯಾರ್ಥಿನಿ ಮಂಗಳವಾರ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನಾಲತವಾಡದ ಖಾಸಗಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮತ್ತು ಅವರ ಕುಟುಂಬದವರು ಅದೇ ಪಟ್ಟಣದ ಸಂಗಮೇಶ ಜುಂಜವಾರ, ಚಿದಾನಂದ ಕಟ್ಟಿಮನಿ, ಮೌನೇಶ ಮಾದರ ವಿರುದ್ಧ ಇತ್ತೀಚೆಗೆ ಪೋಕ್ಸೊ ಪ್ರಕರಣ ದಾಖಲಿಸಿದ್ದರು.

‘ಪ್ರಕರಣ ದಾಖಲಾದ ಬಳಿಕ ವಿಚಾರಣೆ ಸಲುವಾಗಿ ಪೊಲೀಸರು ಆಗಾಗ ಮನೆಗೆ ಬಂದು ಹೋದ ಕಾರಣಕ್ಕೆ ಹಾಗೂ  ವಿಷಯ ಎಲ್ಲೆಡೆ ಪ್ರಚಾರವಾದ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಬಾಲಕಿಯ ಕುಟುಂಬದವರು ಆರೋಪಿಸಿದ್ದಾರೆ.

ADVERTISEMENT

‘ಶಿಕ್ಷಣ ಪಡೆಯುತ್ತಿದ್ದ ಮಗಳು ಭವಿಷ್ಯ ರೂಪಿಸಿಕೊಳ್ಳುವ ಬದಲು ಪುಡಾರಿಗಳ ಕಿರುಕುಳಕ್ಕೆ ಪ್ರಾಣ ಬಿಟ್ಟಿದ್ದಾಳೆ’ ಎಂದು ಬಾಲಕಿಯ ಪಾಲಕರು ದೂರಿದರು.

ಆರೋಪಿಗಳ ಬಂಧನ: ಬಾಲಕಿಗೆ ಕಿರುಕುಳ ನೀಡಿದ ಆರೋಪಿಗಳಾದ ಸಂಗಮೇಶ ಜುಂಜವಾರ, ಚಿದಾನಂದ ಕಟ್ಟಿಮನಿ ಮತ್ತು ಬಾಲಕನೊಬ್ಬನನ್ನು ಬಂಧಿಸಲಾಗಿದೆ ಎಂದು ಸಿಪಿಐ ಮಲ್ಲಿಕಾರ್ಜುನ ತುಳಿಸಿಗೇರಿ ತಿಳಿಸಿದ್ದಾರೆ.

ಗಲ್ಲಿಗೇರಿಸಲು ಆಗ್ರಹ: ಬಾಲಕಿಯ ಆತ್ಮಹತ್ಯೆಗೆ ಕಾರಣವಾಗಿರುವ ಆರೋಪಿಗಳು ಪಟ್ಟಣದಲ್ಲಿ ಇನ್ನಷ್ಟು ಹೆಣ್ಣುಮಕ್ಕಳಿಗೆ ಕಿರುಕುಳ ನೀಡಿರುವ ಆರೋಪ ಇದೆ. ಹೆಣ್ಣು ಮಕ್ಕಳ ಪೋಷಕರು ಆತಂಕ ಪಡುವಂತಾಗಿದೆ. ಬಂಧಿತ ಆರೋಪಿಗೆ ಗಲ್ಲು ಶಿಕ್ಷೆಗೊಳಪಡಿಸಬೇಕು ಎಂದು ಸ್ಥಳೀಯರು ಪೊಲೀಸರನ್ನು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.