ಕಣಕಾಲ (ಬಸವನಬಾಗೇವಾಡಿ): ಎರಡೂವರೆ ಎಕರೆಯಲ್ಲಿ ವರ್ಷದಲ್ಲಿ ಮೂರು ಬೆಳೆ ತೆಗೆದು ₹ 10 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದಾರೆ ಬಸವನಬಾಗೇವಾಡಿ ತಾಲ್ಲೂಕಿನ ಕಣಕಾಲ ಗ್ರಾಮದ ಪ್ರಗತಿಪರ ಯುವ ರೈತ ಶ್ರೀಶೈಲ ದಿನ್ನಿ.
ಗುತ್ತಿಗೆ ಆಧಾರದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡುತ್ತಿದ್ದರೂ, ಕೆಲಸ ಮುಗಿದ ತಕ್ಷಣ ತೋಟವೇ ಇವರ ಸಂಗಾತಿ. ವರ್ಷದಲ್ಲಿ ಬೆಳ್ಳುಳ್ಳಿ, ಈರುಳ್ಳಿ, ಮೆಕ್ಕೆಜೋಳ ಮೂರು ಬೆಳೆಯನ್ನು ಬೆಳೆಯುತ್ತಾರೆ. ಇವರ ಸಾಧನೆಗೆ ತಂದೆ ಅವ್ವಪ್ಪ ದಿನ್ನಿ ಸೇರಿ ಇಡೀ ಕುಟುಂಬವೇ ಸಾಥ್ ನೀಡುತ್ತಿದೆ.
ತಾವೇ ಬೆಳೆದ ಬೆಳ್ಳುಳ್ಳಿಯ ಬೀಜಗಳನ್ನೇ ಬಳಿಸಿ 2.5 ಎಕರೆ ಪ್ರದೇಶ ಪೂರ್ತಿ ಬೆಳ್ಳುಳ್ಳಿಯ ಫಳಕ ತೆಗೆದು ಟ್ರಾಕ್ಟರ್ ಮೂಲಕ ಬಿತ್ತನೆ ಮಾಡಿದ್ದರು. ಕಾಲ ಕಾಲಕ್ಕೆ ರಾಸಾಯನಿಕ ಗೊಬ್ಬರ, ಔಷಧ ಸಿಂಪಡಣೆ, ಕಸ ತೆಗೆದಿದ್ದಾರೆ. ಇದೇ ಮೊದಲ ಬಾರಿಗೆ ಹನಿ ನೀರಾವರಿ ಬಳಿಸಿ ತೋಟದಲ್ಲಿನ ಕೊಳವೆಬಾವಿ ಮೂಲಕ ಬೆಳೆಗೆ ನಿರಂತರ ನೀರು ಹರಿಸಿದ್ದಾರೆ. ಇದರ ಫಲವಾಗಿ ಜನವರಿಯಲ್ಲಿ ಭರ್ಜರಿ 40 ಕ್ವಿಂಟಲ್ ಬೆಳ್ಳುಳ್ಳಿ ಫಸಲು ಬಂದಿದೆ.
ದಾವಣಗೆರೆ, ಹಲಗೇರಿ, ಗದಗ ಮಾರುಕಟ್ಟೆಗೆ ಬೆಳ್ಳುಳ್ಳಿ ಮಾರಾಟಕ್ಕೆ ಕಳುಹಿಸಿದ್ದಾರೆ, ಆಗ ಕ್ವಿಂಟಲ್ ಗೆ ₹ 14 ಸಾವಿರದಿಂದ ₹18 ಸಾವಿರವರೆಗೂ ದರ ಲಭಿಸಿದ್ದು, ₹ 5.5 ಲಕ್ಷ ಆದಾಯ ಬಂದಿದೆ. ಡಿಸೆಂಬರ್‌ನಲ್ಲಿ ಬೆಳ್ಳುಳ್ಳಿ ದರ ಕ್ವಿಂಟಲ್‌ಗೆ ₹ 30 ಸಾವಿರ ಆಸುಪಾಸು ಇತ್ತು. ದಿನೇ ದಿನೇ ಕುಸಿಯುತ್ತಲೇ ಹೋಯಿತು. ಸದ್ಯ ₹ 8 ಸಾವಿರಕ್ಕೆ ಕುಸಿದಿದೆ’ ಎನ್ನುತ್ತಾರೆ ಶ್ರೀಶೈಲ ದಿನ್ನಿ.
‘ಅಕ್ಟೋಬರ್ ನಲ್ಲಿ ಹಿಂಗಾರಿ ಬೆಳೆಯಾಗಿ ಈ ಭಾಗದಲ್ಲಿ ಎಲ್ಲರೂ ಬೆಳ್ಳುಳ್ಳಿ ಬಿತ್ತನೆ ಮಾಡುತ್ತಾರೆ, ಆಗ ಬೆಳ್ಳುಳ್ಳಿ ಬೀಜಕ್ಕಾಗಿ ಕ್ವಿಂಟಲ್ ಗೆ ₹25ಸಾವಿರದಿಂದ ₹30ಸಾವಿರ ದರವಿರುತ್ತದೆ. ಅದಕ್ಕಾಗಿ ಜೂನ್ ನಲ್ಲಿ ನಾನು ಅರ್ಧ ಎಕರೆಯಲ್ಲಿ ಬೆಳ್ಳುಳ್ಳಿ ಬಿತ್ತನೆ ಮಾಡಿದ್ದೆ. ಅದರಿಂದ ದೊರೆತ ಆರು ಕ್ವಿಂಟಲ್ ಬೆಳ್ಳುಳ್ಳಿಯನ್ನು ಇಡೀ 2.5 ಎಕರೆಯಲ್ಲಿ ಬಿತ್ತನೆ ಮಾಡಿದೆ. ಹೀಗಾಗಿ ಬೀಜಕ್ಕೆ ಬೆಳ್ಳುಳ್ಳಿ ಖರೀದಿಸುವುದು ತಪ್ಪಿತು’ ಎನ್ನುತ್ತಾರೆ ಅವರು.
‘ಬಿತ್ತನೆ ಮಾಡುವವರು ತಾವೇ ಬೆಳೆದ ಬೆಳ್ಳುಳ್ಳಿಯನ್ನು ಸಂರಕ್ಷಿಸಿಟ್ಟುಕೊಂಡು ಮುಂದೆ ಬಿತ್ತನೆ ಮಾಡಬೇಕು, ಇಲ್ಲದಿದ್ದರೇ ವೃಥಾ ಬೀಜಕ್ಕಾಗಿ ಲಕ್ಷಾಂತರ ರೂಪಾಯಿ ಹಣ ವ್ಯಯಿಸಬೇಕಾಗುತ್ತದೆ’ ಎನ್ನುತ್ತಾರೆ ಶ್ರೀಶೈಲ.
‘ಸದ್ಯ ಬೆಳ್ಳುಳ್ಳಿ ತೆಗೆದು 2 ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೇನೆ. ಅರ್ಧ ಎಕರೆ ಭೂಮಿ ಖಾಲಿ ಬಿಟ್ಟಿರುವೆ. ಅದೇ ಅರ್ಧ ಎಕರೆಯಲ್ಲಿ ಜೂನ್‌ನಲ್ಲಿ ಬೀಜಕ್ಕಾಗಿ ಬೆಳ್ಳುಳ್ಳಿ ಬೆಳೆಯುತ್ತೇನೆ’ ಎಂದರು.
‘ನಾನು ಸೇರಿ ಮನೆಯವರೆಲ್ಲರೂ ತೋಟದಲ್ಲಿ ಕೆಲಸ ಮಾಡುವ ಕಾರಣ ಹೆಚ್ಚಿನ ಆಳು ಕಾಳಿಗೆ ಖರ್ಚು ಬರುವುದಿಲ್ಲ, ಬಿತ್ತನೆ, ಗೊಬ್ಬರ, ರಾಸಾಯನಿಕ ಸಿಂಪಡಣೆ, ಕಸ ತೆಗೆಯುವುದು, ರಾಶಿ ಎಲ್ಲವೂ ಸೇರಿ ಒಂದೊಂದು ಬೆಳೆಗೆ ಒಂದು ಲಕ್ಷವರೆಗೆ ಖರ್ಚು ಬರುತ್ತದೆ’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.