ADVERTISEMENT

ಪ್ರವಾದಿ ಮೊಹಮ್ಮದ್‌ಗೆ ಅವಹೇಳನ ಆರೋಪ: ಶಾಸಕ ಯತ್ನಾಳ ವಿರುದ್ಧ ಮೊಳಗಿದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 12:28 IST
Last Updated 28 ಏಪ್ರಿಲ್ 2025, 12:28 IST
   

ವಿಜಯಪುರ: ಪ್ರವಾದಿ ಮೊಹಮ್ಮದ್‌ ಪೈಗಂಬರ್ ಅವರನ್ನು ಅವಹೇಳನ ಮಾಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿಜಯಪುರದಲ್ಲಿ ಮುಸ್ಲಿಮರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಸಾವಿರಾರು ಮುಸ್ಲಿಮರು, ‘ಧರ್ಮ ವಿರೋಧಿ ಬಸನಗೌಡಗೆ ಧಿಕ್ಕಾರ, ಜನ ವಿರೋಧಿ ಬಸನಗೌಡಗೆ ಧಿಕ್ಕಾರ, ಬಚ್ಚಲು ಬಾಯಿ ಯತ್ನಾಳಗೆ ಧಿಕ್ಕಾರ, ಬಂಧಿಸಿ, ಬಂಧಿಸಿ ಯತ್ನಾಳ ಬಂಧಿಸಿ’ ಎಂಬ ಘೋಷಣೆಗಳನ್ನು ಮೊಳಗಿಸಿದರು. 

ಸಚಿವ ಶಿವಾನಂದ ಪಾಟೀಲ ಮಾತನಾಡಿ, ‘ವಿಶ್ವಗುರು ಬಸವಣ್ಣ, ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಸೇರಿದಂತೆ ಎಲ್ಲರನ್ನು ಬಾಯಿಗೆ ಬಂದಂತೆ ಬೈಯ್ಯುತ್ತಿರುವ ಯತ್ನಾಳ ಮನುಷ್ಯ ಅಲ್ಲ, ಅವನೊಬ್ಬ ಹೈವಾನ್, ವಿಜಯಪುರದ ಹುಚ್ಚು ನಾಯಿ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ಶಾಸಕರಾದ ಯಶವಂತರಾಯಗೌಡ ಪಾಟೀಲ, ‘ಯತ್ನಾಳ ಆಡುತ್ತಿರುವ ಮಾತುಗಳಿಂದ ಆತನ ವ್ಯಕ್ತಿತ್ವಕ್ಕೆ ಮಾತ್ರವಲ್ಲ, ಸರ್ವರನ್ನು ಸಮಾನವಾಗಿ ಕಂಡ ಇಡೀ ಬಸವ ನಾಡಿಗೆ ಅವಮಾನವಾಗಿದೆ. ಸಮಾಜದ ಶಾಂತಿಗೆ ಭಂಗ ತರುತ್ತಿರುವ ಯತ್ನಾಳ ವಿರುದ್ಧ ಮುಖ್ಯಮಂತ್ರಿ, ಗೃಹ ಸಚಿವರು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಶಾಸಕರಾದ ಅಶೋಕ ಮನಗೂಳಿ, ವಿಠಲ ಕಟಕಧೋಂಡ, ವಿಜಯಾನಂದ ಕಾಶಪ್ಪನವರ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಕರ್ನಾಟಕ ಅಹಲೆ ಸುನ್ನತ್ ರಾಜ್ಯ ಘಟಕದ ಅಧ್ಯಕ್ಷ ಸಯ್ಯದ್ ತನ್ವೀರ್‌ ಪೀರಾ ಹಾಶ್ಮೀ, ಕಾಂಗ್ರೆಸ್‌ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಎಸ್.ಎಂ.ಪಾಟೀಲ ಗಣಿಹಾರ, ಮೊಹ್ಮದ್‌ ರಫೀಕ್ ಟಪಾಲ್, ಎಂ.ಸಿ. ಮುಲ್ಲಾ, ಅಬ್ದುಲ್‌ರಜಾಕ್ ಹೊರ್ತಿ, ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ಶ್ರೀನಾಥ ಪೂಜಾರಿ, ಫಯಾಜ್ ಕಲಾದಗಿ ಹಾಗೂ ವಿವಿಧ ಮಠಾಧೀಶರು ಪ್ರತಿಭಟನೆಯಲ್ಲಿ ಭಾಗವಹಿಸಿ, ಯತ್ನಾಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ಉರಿ ಬಿಸಿಲಿನಲ್ಲಿಯೂ ನಾಲ್ಕೈದು ತಾಸು ಪ್ರತಿಭಟನೆ ನಡೆಸಿ, ಯತ್ನಾಳ ಅವರ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿ, ಯತ್ನಾಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.