ವಿಜಯಪುರ: ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ 31 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆದರೂ ಸ್ಪಂದಿಸದ ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಶನಿವಾರ ಹೋರಾಟಗಾರರು ಪಂಜಿನ ಮೆರವಣಿಗೆ ನಡೆಸಿದರು.
ನಗರದ ಶಿವಾಜಿ ವೃತ್ತದಿಂದ ಆರಂಭವಾದ ಪಂಜಿನ ಮೆರವಣಿಗೆ ಗಾಂಧಿ ಚೌಕಿ, ಸರಾಫ್ ಬಜಾರ್, ಸಿದ್ದೇಶ್ವರ ದೇವಸ್ಥಾನ, ಗಣಪತಿ ಚೌಕಿ, ವಾಜಪೇಯಿ ಸರ್ಕಲ್, ಗಾಂಧಿಚೌಕಿ, ಬಸವೇಶ್ವರ ವೃತ್ತದ ಮೂಲಕ ಸಾಗಿ ಅಂಬೇಡ್ಕರ್ ವೃತ್ತದಲ್ಲಿ ಇರುವ ಪ್ರತಿಭಟನಾ ವೇದಿಕೆ ತಲುಪಿ ಸಮಾಪ್ತಿಯಾಯಿತು.
ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಕ್ಕೆ ಒಂದು ತಿಂಗಳು ಕಳೆದರೂ ಸರ್ಕಾರ ಕಣ್ಣು ಮುಚ್ಚಿ ಕೂತಂತಿದೆ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸಚಿವ ಶಿವಾನಂದ ಪಾಟೀಲ ಮತ್ತು ಶಾಸಕರು ಸರ್ಕಾರದ ಗಮನ ಸೆಳೆಯುವಲ್ಲಿ ವಿಫಲವಾಗಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬೆಂಬಲ: ಕರ್ನಾಟಕ ರಾಜ್ಯ ಕುರುಬರ ಸಂಘ, ವಿಶ್ವ ಹಿಂದೂ ಪರಿಷತ್ ಹಾಗೂ ನಿವೃತ್ತ ಸರ್ಕಾರಿ ನೌಕರರ ಒಕ್ಕೂಟ ಶನಿವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಬೆಂಬಲ ಸೂಚಿಸಿದರು.
ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಕಾರ್ಯದರ್ಶಿ ಸಿದ್ದಣ್ಣ ಹೂಗಾರ, ರಾಜ್ಯ ಕಾಂಗ್ರೆಸ್ ಸರ್ಕಾರ ಕಣ್ಣು ಮುಚ್ಚಿಕುಳಿತಿದೆ. ವಿಜಯಪುರಕ್ಕೆ ಬಹಳ ದೊಡ್ಡ ಅನ್ಯಾಯ ಮಾಡಿದೆ. ರಾಜ್ಯ ಸರ್ಕಾರ ಉತ್ತರ ಕರ್ನಾಟಕಕ್ಕೆ ಸದಾ ಅನ್ಯಾಯ ಮಾಡುತ್ತಾ ಬಂದಿದೆ. ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬಣ್ಣ ಎಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಇದು ಜನತೆಯ ನ್ಯಾಯುತ ಹಕ್ಕಾಗಿದ್ದು, ಈ ಹೋರಾಟಕ್ಕೆ ವಿಶ್ವ ಹಿಂದೂ ಪರಿಷತ್ ಸಂಪೂರ್ಣ ಬೆಂಬಲ ನೀಡುತ್ತದೆ. ಈ ಹೋರಾಟ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗುವವರೆಗೂ ಮುಂದೆವರೆಸೋಣ ಎಂದರು.
ನಿವೃತ್ತ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್ ಲೆಂಡಿ ಮಾತನಾಡಿ, ಸರ್ಕಾರ ಹಾಗೂ ಶಾಸಕರು ಮನಸ್ಸು ಮಾಡಿದರೆ ಇಂದೇ ಕಾಲೇಜು ಸ್ಥಾಪಿಸಬಹುದು. ಅಷ್ಟು ಜಾಗ ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ಇದೆ. ಯಾವ ಕಾರಣಕ್ಕಾಗಿ ಇಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಮುಂದಾಗಿದೆ, ಯಾರಿಗೆ ಲಾಭ ಕೊಡಿಸಲು ಈ ಹುನ್ನಾರ ಮಾಡ್ತಾ ಇದ್ದಾರೆ ಎಂದರು.
ಒಕ್ಕೂಟದ ಸಂಚಾಲಕರಾದ ಸುರೇಶ್ ಜೀಬಿ, ಸಹ ಸಂಚಾಲಕರಾದ ನಬಿಲಾಲ್ ಹರನಾಳ, ಪದಾಧಿಕಾರಿ ಮೊಹಮ್ಮದ್ ಇಕ್ಬಾಳ ಅವಟಿ, ಕರ್ನಾಟಕ ರಾಜ್ಯ ಕುರುಬರ ಸಂಘದ ವಿಶ್ವನಾಥ ಅಂಬಳನೂರ, ಜಿಲ್ಲಾ ಉಪಾಧ್ಯಕ್ಷ ಸಂತೋಷ ಕುರಿದೊಡ್ಡಿ ಅವರು ಬೆಂಬಲಿಸಿದರು.
ಹೋರಾಟ ಸಮಿತಿ ಸದಸ್ಯರಾದ ಭಗವಾನ್ ರೆಡ್ಡಿ, ಲಲಿತಾ ಬಿಜ್ಜರಗಿ, ಲಕ್ಷ್ಮಣ ಕಂಬಾಗಿ, ಗಿರೀಶ್ ಕಲಘಟಗಿ, ಭೋಗೇಶ್ ಸೋಲಾಪುರ, ಜಗದೇವ ಸೂರ್ಯವಂಶಿ, ಸಿದ್ದರಾಮ ಹಲ್ಲೂರ, ಅರವಿಂದ ಕುಲಕರ್ಣಿ, ಮಲ್ಲಿಕಾರ್ಜುನ ಎಚ್, ಬಾಬು ಬಿಜಾಪುರ, ಶಿವಬಾಲಮ್ಮ ಕೊಂಡಗುಲಿ, ಭರತ ಕುಮಾರ, ಅಕ್ರಂ ಮಾಶಾಲ್ಕರ್, ಸುರೇಶ ಬಿಜಾಪುರ, ಮಹಾದೇವಿ ಧರ್ಮಶೆಟ್ಟಿ, ನೀಲಂಬಿಕಾ ಬಿರಾದಾರ, ಸಿದ್ದರಾಮಯ್ಯ ಹಿರೇಮಠ, ವರದಾ ಧರ್ಮಶೆಟ್ಟಿ ಇದ್ದರು.
ಜಿಲ್ಲೆಯ ಸಚಿವರು ಶಾಸಕರು ಪಕ್ಷತೀತವಾಗಿ ನ್ಯಾಯುತ ಬೇಡಿಕೆ ಈಡೇರಿಸಲು ಪ್ರಯತ್ನಿಸಬೇಕು ಹೋರಾಟದಲ್ಲಿ ಯಾವುದೇ ಜಾತಿ ಧರ್ಮದ ವಿಷಯ ಅಡಗಿಲ್ಲ ಇದು ಜಿಲ್ಲೆಯ ಜನರ ವಿಷಯ. ಈ ಹೋರಾಟ ಪಕ್ಷಾತೀತವಾಗಿ ನಡೆಯುತ್ತಿರುವುದು ಪ್ರಶಂಸನಾರ್ಹ– ಸಿದ್ದಣ್ಣ ಹೂಗಾರ, ಜಿಲ್ಲಾ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷತ್
ವಿಜಯಪುರದಲ್ಲಿ ನಡೀತಾ ಇರೋ ಹೋರಾಟ ಸೂಕ್ತವಾಗಿದೆ ನ್ಯಾಯಯುತವಾಗಿದೆ. ಕುರುಬ ಸಮಾಜ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ.– ಪ್ರಭುಲಿಂಗ ದೊಡ್ಡಿನ, ಅಧ್ಯಕ್ಷ ಕರ್ನಾಟಕ ರಾಜ್ಯ ಕುರುಬರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.