ADVERTISEMENT

ತಾಳಿಕೋಟೆ: ಕೈ ಕೊಟ್ಟ ಮಳೆ; ಒಣಗಿದ ಬೆಳೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 5:53 IST
Last Updated 6 ಜುಲೈ 2025, 5:53 IST
ತಾಳಿಕೋಟೆ ತಾಲ್ಲೂಕು ವ್ಯಾಪ್ತಿಯ ಗ್ರಾಮದ ಜಮೀನೊಂದರಲ್ಲಿ ರೈತರು ಬೆಳೆಗಳ ಮಧ್ಯೆ ಗಳೆ ಹೊಡೆಯುತ್ತಿರುವುದು
ತಾಳಿಕೋಟೆ ತಾಲ್ಲೂಕು ವ್ಯಾಪ್ತಿಯ ಗ್ರಾಮದ ಜಮೀನೊಂದರಲ್ಲಿ ರೈತರು ಬೆಳೆಗಳ ಮಧ್ಯೆ ಗಳೆ ಹೊಡೆಯುತ್ತಿರುವುದು   

ತಾಳಿಕೋಟೆ: ಆರಿದ್ರಾ ಮಳೆ ಹೋಗುವ ಮುಂಚೆ ತಾಲ್ಲೂಕಿನ ವಿವಿಧೆಡೆ ಮಳೆಯ ಸಿಂಚನವನ್ನುಂಟು ಮಾಡಿದ್ದರೂ  ನಿರೀಕ್ಷೆಯಷ್ಟಾಗಿಲ್ಲ ಎಂಬ ಕೊರಗು ರೈತರದ್ದಾಗಿದೆ.

ತಾಲ್ಲೂಕಿನಾದ್ಯಂತ ಮುಂಗಾರು ಆರಂಭ ಉತ್ತಮವಾದ ಹಿನ್ನೆಲೆಯಲ್ಲಿ ಹಿಗ್ಗಿದ ರೈತರು ಬಿತ್ತನೆ ಮಾಡಿದ ಹತ್ತಿ, ತೊಗರಿ ಇತರ ಬೆಳೆಗಳು ಇದೀಗ ಮಳೆಯಿಲ್ಲದೇ ಸೊರಗುತ್ತಿವೆ. ‘ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ’ ಎನ್ನುವ ರಾಗ ರೈತರದ್ದಾಗಿದೆ.

ನಿತ್ಯ ದಟ್ಟವಾದ ಮೋಡಗಳ ಭರಾಟೆ ಕಂಡು ಇನ್ನೇನು ಮಳೆ ಬಂದೀತು ಎನ್ನುವ ರೈತರ ನಿರೀಕ್ಷೆಗಳನ್ನು ಆಷಾಢ ಗಾಳಿ ಹೊತ್ತು ಮುಂದೆಮುಂದೆ ಓಡುತ್ತಿದೆ. ದಿನವೆಲ್ಲ ಬರೀ ಮೋಡ, ಬಿಸಿಲೇ ಇಲ್ಲ!  ಅಲ್ಲಲ್ಲಿ ತುಂತುರು ಮಳೆ ರೈತರಿಗೆ ಆಸೆ ಹುಟ್ಟಿಸಿ ಮೋಸ ಮಾಡುತ್ತಿದೆ. ನೆಲ ತೊಯ್ಯುತ್ತಿಲ್ಲ, ಕನಿಷ್ಟ ಚಿಲಕ ನೀರ ಗಟ್ಟಿ ನೆಲದ ಮ್ಯಾಗ ನೀರು ಹರಿಯಬೇಕು ಅದಾಗಿಲ್ಲ ಎನ್ನುವುದು ರೈತರ ಮಾತು.

ADVERTISEMENT

ತಾಳಿಕೋಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಶೇ 90 ರಷ್ಟು ಬಿತ್ತನೆಯಾಗಿದೆ. ಹೆಚ್ಚಿನೆಡೆ ಬೆಳೆ ಗೇಣುದ್ದ ಬೆಳೆದು ನಿಂತಿದೆ. ರೈತಾಪಿಗಳು ತಮ್ಮ ಜಮೀನುಗಳಲ್ಲಿ ಕಳೆ ಕೀಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಗಳೆ ಕೂಡ ಹೊಡೆಯುತ್ತಿದ್ದಾರೆ. ಇದರಿಂದ ಮಣ್ಣು ಸಡಿಲವಾಗಿ ಬೆಳೆಗಳ ಬೇರುಗಳಲ್ಲಿನ ತೇವಾಂಶವನ್ನು ಹೊರಹಾಕುತ್ತದೆ. ಅಗತ್ಯಕ್ಕೆ ತಕ್ಕಂತೆ ಮಳೆ ಬೀಳದಿದ್ದರೆ ಬೇರು ಸಾಯುತ್ತದೆ. ರೈತರು ಆತಂಕದಲ್ಲಿದ್ದಾರೆ.

ತಾಳಿಕೋಟೆ ತಾಲ್ಲೂಕು ವ್ಯಾಪ್ತಿಯ ಗ್ರಾಮದ ಜಮೀನೊಂದರಲ್ಲಿ ಮಳೆಯಿಲ್ಲದೇ ಬೆಳೆ ಸೊರಗಿರುವುದು
ವಾಡಿಕೆಯಂತೆ ತಾಳಿಕೋಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಜೂನ್‌ನಲ್ಲಿ 78 ಮಿಮೀ ಮಳೆಯಾಗಬೇಕಿತ್ತು. ಆದರೆ 48 ಮಿಮೀ ಆಗಿತ್ತು. 30ಮಿಮೀ ಮಳೆ ಕೊರತೆಯಾಗಿದೆ
-ಮಹೇಶ ಜೋಶಿ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ತಾಳಿಕೋಟೆ
ನಿನ್ನೆ ಇವತ್ತಿನ ಮಳೆಯಿಂದ ಮತ್ತ ನಾಲ್ಕೈದು ದಿನ ಬೆಳೆಗೆ ಆಸರೆಯಾಗಬಹುದೇ ವಿನಃ ಇದು ಉತ್ತಮ ಮಳೆಯಲ್ಲ ಮುಂದೆ ಬರುವ ಪುನರ್ವಸು ಮಳೆ ಏನು ಮಾಡುತ್ತದೆಯೋ ನೋಡಬೇಕ್ರಿ
-ಮಲ್ಲಪ್ಪ ಯರನಾಳ ರೈತ ಮೈಲೇಶ್ವರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.