ADVERTISEMENT

ಸಾರಿಗೆ ಇಲಾಖೆಗೆ ಶೀಘ್ರದಲ್ಲೇ 8,000 ಹುದ್ದೆಗಳಿಗೆ ನೇಮಕ: ರಾಮಲಿಂಗಾ ರೆಡ್ಡಿ 

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2023, 15:51 IST
Last Updated 31 ಅಕ್ಟೋಬರ್ 2023, 15:51 IST
ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ   

ವಿಜಯಪುರ: ‘ಸಾರಿಗೆ ಸಂಸ್ಥೆಯಲ್ಲಿ 8,000 ಖಾಲಿ ಹುದ್ದೆಗಳಿಗೆ ನೇಮಕ ಹಾಗೂ ಹೊಸ ಬಸ್ ಖರೀದಿ ಪ್ರಕ್ರಿಯೆ ಶೀಘ್ರವೇ ನಡೆಯಲಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2016ರಲ್ಲಿ ನಾನು ಸಾರಿಗೆ ಸಚಿವನಾಗಿದ್ದಾಗ ನೇಮಕಾತಿ ನಡೆದಿದ್ದು ಹೊರತಾಗಿ, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನೇಮಕಾತಿ ಪ್ರಕ್ರಿಯೆ ನಡೆಸಲಿಲ್ಲ. ಈವರೆಗೆ 13,888 ಜನ ನಿವೃತ್ತರಾಗಿದ್ದಾರೆ. ಸಹಜವಾಗಿಯೇ ಚಾಲಕ, ನಿರ್ವಾಹಕರ ಕೊರತೆ ಕಾಡುತ್ತಿದೆ. ಹೀಗಾಗಿ 8,000 ಹುದ್ದೆಗಳಿಗೆ ಶೀಘ್ರ ನೇಮಕಾತಿ ನಡೆಸಲಾಗುವುದು’ ಎಂದು ಹೇಳಿದರು.

‘ಬಹುತೇಕ ಬಸ್‌ಗಳು ಗುಜರಿಗೆ ಹೋಗಿವೆ. ಹೊಸ ಬಸ್‌ಗಳು ಸಹ ಬಂದಿರಲಿಲ್ಲ. ಹೀಗಾಗಿ 13,800 ಹೊಸ ಬಸ್ ಖರೀದಿಗೆ ಅನುಮತಿ ಕೇಳಿದ್ದೆ, 8,000ಕ್ಕೂ ಅಧಿಕ ಬಸ್ ಖರೀದಿಗೆ ಅನುಮತಿ ಸಿಕ್ಕಿದೆ. ಪ್ರಕ್ರಿಯೆ ಪ್ರಾರಂಭವಾಗಿದೆ. ನಾಲ್ಕೈದು ತಿಂಗಳಲ್ಲಿ 5,200 ಹೊಸ ಬಸ್ ಬರಲಿವೆ’ ಎಂದರು.

ADVERTISEMENT

‘ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯದಿಂದಾಗಿ ಯಾವುದೇ ಸಮಸ್ಯೆಯಾಗಿಲ್ಲ. ಮುಖ್ಯಮಂತ್ರಿಗಳು 9 ತಿಂಗಳಿಗೆ ₹2,800 ಕೋಟಿ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಿದ್ದರು. ಮಾರ್ಚ್ ನಿಂದ ಪ್ರತಿ ತಿಂಗಳು ಹಣ ನೀಡಲಾಗುತ್ತಿದೆ. ಹೆಚ್ಚುವರಿ ಹಣವನ್ನು ಸಹ ಮುಖ್ಯಮಂತ್ರಿ ಕೊಡುವ ಭರವಸೆ ನೀಡಿದ್ದಾರೆ. ಬಿಜೆಪಿಯವರು ಆರೋಪಿಸುವ ಹಾಗೆ ಸಾರಿಗೆ ನೌಕರರ ಯಾವುದೇ ಸಂಬಳ ಬಾಕಿ ಇರಿಸಿಕೊಂಡಿಲ್ಲ’ ಎಂದು ತಿಳಿಸಿದರು.

‘ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟ ಅವರ ಆಂತರಿಕ ವಿಚಾರ. ಆದರೆ, ಕರ್ನಾಟಕದ ಬಸ್‌ಗೆ ಹಾನಿಯಾಗಬಾರದು. ಈ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದಲ್ಲಿ ಸರ್ಕಾರ ಸುಭದ್ರವಾಗಿದೆ. ಈ ಸರ್ಕಾರ ಇನ್ನೂ 10 ವರ್ಷ ಇರಲಿದೆ. ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.