ADVERTISEMENT

ವಿದ್ಯುತ್ ತಿದ್ದುಪಡಿ ಕಾಯ್ದೆಗೆ ಆರ್.ಕೆ.ಎಸ್.ವಿರೋಧ

​ಪ್ರಜಾವಾಣಿ ವಾರ್ತೆ
Published 26 ಮೇ 2020, 14:43 IST
Last Updated 26 ಮೇ 2020, 14:43 IST

ವಿಜಯಪುರ: ದೇಶವು ಕೊರೊನಾ ಸಂಕಷ್ಟ ಹಾಗೂ ಆರ್ಥಿಕ ಹಿಂಜರಿತದಿಂದ ಬಳಲುತ್ತಿರುವ ಸಂದರ್ಭದಲ್ಲಿ ಗಂಭೀರತೆಯನ್ನು ಪರಿಗಣಿಸದೇ, ತನ್ನ ಜವಾಬ್ದಾರಿಯನ್ನು ಮರೆತು ಕೇಂದ್ರ ಸರ್ಕಾರವು ವಿದ್ಯುತ್ ಕಾಯ್ದೆ 2003ಕ್ಕೆ ತಿದ್ದುಪಡಿ ಮಾಡಲು ಹೊರಟಿರುವುದಕ್ಕೆ ಆರ್.ಕೆ.ಎಸ್. ಜಿಲ್ಲಾ ಸಮಿತಿ ವಿರೋಧ ವ್ಯಕ್ತಪಡಿಸಿದೆ.

ರೈತರು ಮೊದಲು ವಿದ್ಯುತ್ ಬಿಲ್‍ ತುಂಬಬೇಕು, ನಂತರದ ದಿನಗಳಲ್ಲಿ ಸರ್ಕಾರವು ಬಿಲ್‍ನ ಮೊತ್ತವನ್ನು ರೈತರಿಗೆ ನೀಡುತ್ತದೆ ಎಂದು ಹೇಳಲಾಗುತ್ತಿದೆ. ಹೀಗಾದರೆ ಇಷ್ಟು ವರ್ಷಗಳ ಕಾಲ ರೈತರ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಎಂಬ ಘೋಷಣೆ ಮಣ್ಣುಪಾಲಾಗಲಿದೆ. ಇದರಿಂದಾಗಿ ಇನ್ನು ಮುಂದೆ ರೈತರು ಪಂಪ್‍ಸೆಟ್‍ಗಳಿಗೆ ವಿದ್ಯುತ್ ಬಿಲ್‍ ಅನ್ನು ತೆರಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದೆ.

ಲಾಕ್‍ಡೌನ್‍ನಿಂದಾಗಿ ರೈತರು ಬೆಳೆದ ಬೆಳೆ ಮಾರಾಟವಾಗದೇ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ರೈತರಿಗೆ ಸಹಾಯ ಮಾಡುವ ಬದಲಾಗಿ ಅವರನ್ನು ಲೂಟಿ ಮಾಡಲು ಹೊರಟಿರುವುದು ಸರ್ಕಾರದ ಲಜ್ಜೆಗೆಟ್ಟತನವನ್ನು ಪ್ರದರ್ಶಿಸುತ್ತದೆ ಎಂದಿದೆ.

ADVERTISEMENT

ಕೆಲವೇ ದಿನಗಳ ಹಿಂದೆ ಎ.ಪಿ.ಎಂ.ಸಿ. ಕಾಯ್ದೆಗೆ ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ಮಾಡಿ ರೈತರಿಗೆ ಬರೆ ಎಳೆದಿದೆ. ಈಗ ವಿದ್ಯುತ್ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವುದರ ಮೂಲಕ ಗಧಾಪ್ರಹಾರವೆಸಗಿದೆ ಎಂದು ಆರೋಪಿಸಿದೆ.

ವಿದ್ಯುತ್ ದರ ನಿಗದಿ ಮಾಡುವ ಮೂಲಕ ಬಹುರಾಷ್ಟ್ರೀಯ ಕಂಪನಿಗಳಿಗೆ ಅವಕಾಶ ನೀಡಿ, ದೇಶಿ ರೈತರನ್ನು ಕೃಷಿಯಿಂದ ಹೊರಗಿಡುವ ಹೀನ ಪ್ರಯತ್ನ ಇದಾಗಿದೆ. ಕೃಷಿ ಕ್ಷೇತ್ರವನ್ನು ಪ್ರವೇಶಿಸಲು ಹಾಗೂ ಅವರಿಗೆ ಭಾರಿ ಲಾಭವನ್ನು ತಂದುಕೊಡಲು ಸರ್ಕಾರವು ಆಸಕ್ತಿವಹಿಸುತ್ತಿದೆ ಎಂದು ಜಿಲ್ಲಾ ಸಂಚಾಲಕ ಬಾಳು ಜೇವೂರ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.