ವಿಜಯಪುರ: ಹೊರ ರಾಜ್ಯಗಳಲ್ಲಿ ನೋಂದಣಿಯಾದ ವಾಹನಗಳು ಜಿಲ್ಲೆಯಲ್ಲಿ ಓಡಾಡುತ್ತಿದ್ದು, ಅಂತಹ ವಾಹನಗಳು ಕರ್ನಾಟಕದಲ್ಲಿ ನೋಂದಣಿಯಾಗದೆ ಇದ್ದಲ್ಲಿ ಅವುಗಳನ್ನು ‘ಸೀಜ್’ (ಮುಟ್ಟುಗೋಲು) ಮಾಡಲಾಗುತ್ತಿದೆ ಎಂದು ಹೆಚ್ಚುವರಿ ಸಾರಿಗೆ ಆಯುಕ್ತ ಕೆ.ಟಿ.ಹಾಲಸ್ವಾಮಿ ತಿಳಿಸಿದರು.
ನಗರದ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಹೊರ ರಾಜ್ಯ ವಾಹನಗಳ ತಪಾಸಣೆಗಾಗಿ ವಿಶೇಷ ತಪಾಸಣಾ ಕಾರ್ಯಾಚರಣೆ ಕುರಿತು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪಾಂಡಿಚೇರಿ, ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಲ್ಲಿ ತೆರಿಗೆ ಕಡಿಮೆ ಇದ್ದು, ಅಲ್ಲಿಂದ ವಾಹನಗಳನ್ನು ಖರೀದಿಸಿ ನೋಂದಣಿ ಮಾಡಿಕೊಂಡು ನಮ್ಮ ರಾಜ್ಯಗಳಲ್ಲಿ ವಾಹನಗಳು ಓಡಾಡುತ್ತಿವೆ ಎಂದು ಹೇಳಿದರು.
ವೋಟಾರು ವಾಹನ ಕಾಯ್ದೆಯಂತೆ ಬೇರೆ ರಾಜ್ಯಗಳಲ್ಲಿ ನೋಂದಣಿಯಾದ ವಾಹನಗಳು ನಮ್ಮ ರಾಜ್ಯಗಳಲ್ಲಿ ಬಳಸಬೇಕಾದರ ವಾಹನ ನೋಂದಣಿಯಾದ 12 ತಿಂಗಳಲ್ಲಿ ನಮ್ಮ ರಾಜ್ಯದ ನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಈಗ ಬಳಸುತ್ತಿರುವ ಹೆಚ್ಚಿನ ವಾಹನಗಳು ನಮ್ಮ ರಾಜ್ಯದ ನೋಂದಣಿ ಮಾಡಿಕೊಳ್ಳದೆ ಬರುವಂತಹ ರಾಜಸ್ವ ಸೋರಿಕೆಯಾಗುತ್ತಿದೆ ಆದ್ದರಿಂದ ಬೆಳಗಾವಿ ಹಾಗೂ ಕಲಬುರ್ಗಿ ಗಡಿ ಭಾಗಗಳಲ್ಲಿ ಹಾಗೂ ರಾಜ್ಯದ ಇತರೆ ಭಾಗಗಳಲ್ಲಿ ವಾಹನಗಳು ಓಡಾಡುತ್ತಿರುವುದನ್ನು ಮನಗಂಡು ವಿಶೇಷ ಪ್ರವರ್ತನ ಕಾರ್ಯವನ್ನು ನಡೆಸಲಾಗುತ್ತಿದೆ ಎಂದರು.
ಕಾರ್ಯಾಚರಣೆಯಲ್ಲಿ ಬೇರೆ ಬೇರೆ ಜಿಲ್ಲೆಗಳ ಅಧಿಕಾರಿಗಳು ಭಾಗವಹಿಸಿ, ವಾಹನಗಳ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ. ಸಾರ್ವಜನಿಕರು ಹಾಗೂ ವಾಹನ ಮಾಲೀಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಾಗೂ ರಾಜ್ಯದ ಬೊಕ್ಕಸಕ್ಕೆ ಉಂಟಾಗುತ್ತಿರುವ ರಾಜಸ್ವ ಸೋರಿಕೆಯನ್ನು ತಡೆಗಟುವ ನಿಟ್ಟಿನಲ್ಲಿ ಈ ವಿಶೇಷ ಪ್ರವರ್ತನ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತಿದೆ ಹಾಗೂ ಈ ಕಾರ್ಯ ನಿರಂತವಾಗಿ ಮುಂದುವರೆಯುತ್ತದೆ ಎಂದರು.
ವಾಹನ ಮಾಲೀಕರು ಎನ್.ಒ.ಸಿ ಪಡೆದುಕೊಂಡು ಕರ್ನಾಟಕ ರಾಜ್ಯದಲ್ಲಿ ಅನ್ವಯವಾಗುವಂತೆ ತೆರಿಗೆಯನ್ನು ನಿಯಮಾನುಸಾರ ಭರಿಸಿ, ವಿಳಾಸ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಈಗಾಗಲೇ ಪಾಂಡಿಚೇರಿ ನೋಂದಣಿ ಹಾಗೂ ಇತರೆ ರಾಜ್ಯದ ನೋಂದಣಿ ಹೊಂದಿರುವ ಸುಮಾರು ಶೇ 90ಕ್ಕಿಂತ ಹೆಚ್ಚು ವಾಹನಗಳನ್ನು ವಶಪಡಿಸಿಕೊಂಡು ಕಾನೂನಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಲಬುರ್ಗಿ ವಿಭಾಗದಲ್ಲಿ ಒಟ್ಟು 65 ವಾಹನಗಳನ್ನು ಈಗಾಗಲೇ ಸೀಜ್ ಮಾಡಿ ದಂಡ ವಿಧಿಸಲಾಗಿದೆ. ಸಾರ್ವಜನಿಕರು ತಮ್ಮ ವಾಹನಗಳನ್ನು ತಾವು ವಾಸಿಸುವ ಪ್ರದೇಶದಲ್ಲಿಯೇ ನೋಂದಣಿ ಮಾಡಿ ತೆರಿಗೆ ಪಾವತಿಸಬೇಕು, ಇಲ್ಲವಾದರೆ ಹೆಚ್ಚುವರಿ ದಂಡ, ಇಲ್ಲಿಯ ಶುಲ್ಕ ಪಾವತಿಸಬೇಕಾಗುತ್ತದೆ, ಹಳೆಯ ತೆರಿಗೆ ರಿಫಂಡ್ ಆಗುತ್ತಾದರೂ ಸಹ ಅದಕ್ಕೆ ಅನೇಕ ಪ್ರಕ್ರಿಯೆ ಕೈಗೊಳ್ಳಬೇಕಾಗುತ್ತದೆ, ತೆರಿಗೆ ಉಳಿಸಲು ಹೋಗಿ ದೊಡ್ಡ ಮಟ್ಟದ ದಂಡ ತೆರಲು ಅವಕಾಶ ಕಲ್ಪಿಸಿಕೊಳ್ಳಬಾರದು ಎಂದರು.
ವಿಜಯುಪುರದ ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಂ ಬಾಬಾ ಮುದ್ದೇಬಿಹಾಳ, ಮೋಟರು ವಾಹನ ನಿರೀಕ್ಷಕ ಪಂಚಾಕ್ಷರಿ ಅಳವಂಡಿ, ಗೋವಿಂದ ರಾಠೋಡ, ಅಧೀಕ್ಷಕ ರಾಘವೆಂದ್ರ ಯಡಹಳ್ಳಿ, ಮುತ್ತರಾಜ, ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.