ಸಚಿವ ಶಿವಾನಂದ ಪಾಟೀಲ
ವಿಜಯಪುರ: ‘ಯತ್ನಾಳ ಯಾವಾಗಲೂ ಹಿಟ್ ಅಂಡ್ ರನ್ ಮಾಡುತ್ತಾರೆ. ಈಗಲೂ ನಾನು ರಾಜೀನಾಮೆ ನೀಡಲು ಸಿದ್ದ, ಖಾಲಿ ಪತ್ರದಲ್ಲಿ ಸಹಿ ಮಾಡಿ ಕೊಡುತ್ತೇನೆ. ಸವಾಲು ಹಾಕಿರುವ ಯತ್ನಾಳ ತಾವು ರಾಜೀನಾಮೆ ನೀಡುತ್ತಾರಾ’ ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಪ್ರಶ್ನಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲೆಟರ್ ಹೆಡ್ ನಲ್ಲಿ ನಾನು ಕೇವಲ ಸಹಿ ಮಾಡಿ ಕೊಡುತ್ತೇನೆ, ನೀವೇ ರಾಜೀನಾಮೆ ವಿಷಯ ಬರೆದು ಸಭಾಧ್ಯಕ್ಷರಿಗೆ ಕೊಡಿ. ಅದೇ ರೀತಿ ಸವಾಲು ಹಾಕಿರುವ ಯತ್ನಾಳ ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಬ್ಬರ ರಾಜೀನಾಮೆ ಪತ್ರವನ್ನು ಅವರೇ ಸಭಾಧ್ಯಕ್ಷರಿಗೆ ನೀಡಲಿ.
ಸಭಾಪತಿಗಳು ಬೇಕಾದರೆ ಮೊದಲು ನನ್ನ ರಾಜೀನಾಮೆ ಅಂಗೀಕರಿಸಿ, ನಂತರ ಯತ್ನಾಳ ರಾಜೀನಾಮೆ ಅಂಗೀಕರಿಸಲಿ’ ಎಂದರು.
‘ಸಾರ್ವಜನಿಕವಾಗಿ ಬಳಸಲು ಸಾಧ್ಯವಿಲ್ಲದ ಪದ ಬಳಸಿ ಸವಾಲು ಹಾಕಿದ್ದು ಯತ್ನಾಳ ಅವರೇ ಹೊರತು ನಾನು ಸವಾಲು ಹಾಕಿಲ್ಲ. ರಾಜೀನಾಮೆ ನೀಡುವ ಮೂಲಕ ನಾನು ನನ್ನ ಉದ್ದೇಶವನ್ನು ವ್ಯಕ್ತಪಡಿಸಿದ್ದೇನೆ. ಯತ್ನಾಳ ಹಾಕಿದ ಸವಾಲನ್ನು ನಾನು ಸ್ವೀಕಾರ ಮಾಡಿದ್ದೇನೆ, ಈಗಲೂ ನಾನು ರಾಜೀನಾಮೆಗೆ ಬದ್ಧ. ಹಾಗೆಯೇ ಯತ್ನಾಳ ಸಹ ರಾಜೀನಾಮೆ ನೀಡಬೇಕು. ನಾನು ಷರತ್ತು ಹಾಕಿ ರಾಜೀನಾಮೆ ನೀಡಿರುವುದೇ ಇದಕ್ಕೆ’ ಎಂದರು.
‘ಬಸವನಬಾಗೇವಾಡಿ, ವಿಜಯಪುರ, ಇಂಡಿ ಇವು ಯಾವೂ ಪಾಕಿಸ್ತಾನ ಅಲ್ಲ. ಹತಾಶರಾಗಿರುವ ಯತ್ನಾಳ ತಾಳ್ಮೆ ಕಳೆದುಕೊಂಡು ಮಾತನಾಡುವ ಓಘದಲ್ಲಿ ಪದೇ ಪದೇ ಇಂಥ ಮಾತನಾಡುತ್ತಾರೆ. ಸಾರ್ವಜನಿಕ ಜೀವನದಲ್ಲಿ ಇಂಥ ಸವಾಲು ಹಾಕಿದ ಮೇಲೆ ಸ್ವೀಕರಿಸಿ ಮುನ್ನಡೆಯಬೇಕು. ಇಲ್ಲವೇ ಸುಮ್ಮನೇ ಇರಬೇಕು’ ಎಂದು ಎಚ್ಚರಿಕೆ ನೀಡಿದರು.
‘ಎಂ.ಬಿ.ಪಾಟೀಲ ವಿರುದ್ಧ ನಾನು ಮುಸ್ಲಿಮರನ್ನು ಎತ್ತಿ ಕಟ್ಟುವ ಕೆಲಸ ಮಾಡಿಲ್ಲ. ಯತ್ನಾಳ ವಿರುದ್ಧ ಜಿಲ್ಲೆಯ ಮುಸ್ಲಿಂ ಮುಖಂಡರು ಆಯೋಜಿಸಿರುವ ಪ್ರತಿಭಟನಾ ಸಭೆಗೆ ಎಂ.ಬಿ. ಪಾಟೀಲರು ಪಾಲ್ಗೊಂಡಿಲ್ಲದರ ಬಗ್ಗೆ ಪ್ರಸ್ತಾಪಿಸಿದ್ದೆ. ಈ ಕುರಿತು ಎಂಬಿ ಪಾಟೀಲ ಅವರು ನನ್ನ ವಿರುದ್ಧ ಹೈಕಮಾಂಡ್‌ಗೆ ದೂರು ಕೊಡುವುದಾರೆ ಅವರ ವಿವೇಚನೆಗೆ ಬಿಟ್ಟಿದ್ದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.