ಸಚಿವ ಶಿವಾನಂದ ಪಾಟೀಲ
ವಿಜಯಪುರ: ಸಕ್ಕರೆ ಕಾರ್ಖಾನೆಗಳ ಆರ್ಥಿಕ ವ್ಯವಹಾರದ ಸಮಗ್ರ ವಹಿವಾಟು ವರದಿ (ಬ್ಯಾಲೆನ್ಸ್ ಶೀಟ್) ಸರ್ಕಾರದ ಬಳಿ ಬರುತ್ತದೆ, ಉಪ ಉತ್ಪನ್ನಗಳಲ್ಲಿ ಕಾರ್ಖಾನೆಗಳು ಹೆಚ್ಚಿನ ಲಾಭ ಗಳಿಸಿದ್ದರೆ ರೈತರಿಗೆ ಹೆಚ್ಚಿನ ದರವನ್ನು ದೊರಕಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಸಕ್ಕರೆ, ಕಬ್ಬು ಅಭಿವೃದ್ದಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಲೆ ನಿರ್ಧಾರ ಎನ್ನುವುದು ನಾಲ್ಕು ಗೋಡೆಗಳ ನಡುವೆ ನಡೆಯುವ ಪ್ರಕ್ರಿಯೆ, ರಸ್ತೆಯಲ್ಲಿ ಇದರ ಬಗ್ಗೆ ಚರ್ಚೆ ಬೇಡ, ಸರ್ಕಾರ ಕಬ್ಬು ಬೆಳೆಗಾರರ ಪರವಾಗಿಯೇ ಇದೆ ಎಂದರು.
ಬೆಳಗಾವಿಯಲ್ಲಿ ರೈತರು ಪ್ರತಿ ಟನ್‌ಗೆ ₹3200 ದರಕ್ಕೆ ಒಪ್ಪಿಕೊಂಡಿದ್ದರು. ಆದರೆ, ಪುನ: ಧರಣಿ ಮುಂದುವರೆಸಿದ್ದಾರೆ. ಕಬ್ಬಿಗೆ ಉತ್ತಮ ಬೆಲೆ ಇದೆ. ಈ ಹಿಂದೆ ₹700 ಪ್ರತಿ ಟನ್ ಬೆಲೆ ಇತ್ತು. ಕಾರ್ಖಾನೆಗಳು ಹೆಚ್ಚಾದ ಪರಿಣಾಮ ಕಬ್ಬಿನ ಬೆಲೆಯೂ ಉತ್ತಮವಾಗಿದೆ. ಕಬ್ಬಿಗೆ ಒಳ್ಳೆಯ ಬೆಲೆ ಬಂದಿದೆ ಅದನ್ನು ನಾವು ಹಾಳು ಮಾಡಿಕೊಳ್ಳುವುದು ಬೇಡ ಎಂದರು.
ಸಕ್ಕರೆ ಕಾರ್ಖಾನೆಗಳಿಗೂ ಅನೇಕ ತೊಂದಗಳಿವೆ, ಸಾಲ ಮೊದಲಾದವುಗಳನ್ನು ಮಾಡಿಯೇ ಅವರು ಕಾರ್ಖಾನೆ ಸ್ಥಾಪಿಸಿದ್ದಾರೆ, ಅವರು ಎದುರಿಸುತ್ತಿರುವ ತೊಂದರೆಗಳು ಹಾಗೂ ಕೇಂದ್ರ ಸರ್ಕಾರದ ನೀತಿ ನಿಯಮಾವಳಿಗಳು ಯಾವ ರೀತಿ ಪರಿಷ್ಕರಣೆಯಾಗಬೇಕು ಎಂಬುದರ ಕುರಿತು ಮಾಜಿ ಸಚಿವ ಮುರುಗೇಶ ನಿರಾಣಿ ಅವರೇ ಕೇಂದ್ರ ಸರ್ಕಾರಕ್ಕೆ ಸುದೀರ್ಘ ಪತ್ರ ಬರೆದಿದ್ದಾರೆ, ಸಕ್ಕರೆ ರಫ್ತು ನಿಂತು ಹೋಗಿದೆ, ಎಥೆನಾಲ್ ಉತ್ಪಾದನೆ ಕಡಿತಗೊಳಿಸಿರುವುದು ಸೇರಿದಂತೆ ಅನೇಕ ಅಂಶಗಳನ್ನು ನಿರಾಣಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ಸರ್ಕಾರ ಸಕ್ಕರೆ ಕಾರ್ಖಾನೆಗಳ ಲಾಭಾಂಶದ ಬಗ್ಗೆ ಯೋಚಿಸದೇ ಒಂದು ತೂಕ ಹೆಚ್ಚಾಗಿ ರೈತರ ಬಗ್ಗೆಯೇ ಯೋಚಿಸುತ್ತಿದೆ ಎಂದರು.
ಅಡುಗೆ ಅನಿಲ ಮಾದರಿಯಲ್ಲಿ ವಾಣಿಜ್ಯ ಹಾಗೂ ಗೃಹ ಬಳಕೆ ಮಾದರಿಯಲ್ಲಿ ಸಕ್ಕರೆ ಬೆಲೆಯನ್ನು ಪ್ರತ್ಯೇಕವಾಗಿ ನಿಗದಿಮಾಡಬೇಕು. ಜನರ ಉಪಯೋಗಕ್ಕಾಗಿ ಈಗಿರುವ ಸಕ್ಕರೆ ದರವನ್ನೇ ಮುಂದುವರೆಸಿ, ವಾಣಿಜ್ಯ ಆಧಾರಿತ ಕೈಗಾರಿಕೆಗಳಿಗೆ ನೀಡುವ ಸಕ್ಕರೆ ದರವನ್ನು ಹೆಚ್ಚಿಸಬೇಕು, ಆಗ ಕಾರ್ಖಾನೆಗಳಿಗೂ ಪ್ರಯೋಜನವಾಗಿ ರೈತರಿಗೂ ಅನುಕೂಲವಾಗುತ್ತದೆ ಎಂದರು.