ADVERTISEMENT

ಸಿಂದಗಿ ಉಪಚುನಾವಣೆ: ಅಭ್ಯರ್ಥಿಗಳ ಹಣೆಬರಹ ನಿರ್ಧಾರ ಇಂದು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2021, 19:30 IST
Last Updated 29 ಅಕ್ಟೋಬರ್ 2021, 19:30 IST
ಸಿಂದಗಿ ವಿಧಾನಸಭಾ ಉಪ ಚುನಾವಣೆಗೆ ನಿಯೋಜನೆಗೊಂಡಿರುವ ಪೊಲೀಸ್‌ ಮತ್ತು ಸಿಬ್ಬಂದಿ ಮತಯಂತ್ರದೊಂದಿಗೆ ಶುಕ್ರವಾರ ಮತಗಟ್ಟೆಗಳಿಗೆ ತೆರಳಿದರು
ಸಿಂದಗಿ ವಿಧಾನಸಭಾ ಉಪ ಚುನಾವಣೆಗೆ ನಿಯೋಜನೆಗೊಂಡಿರುವ ಪೊಲೀಸ್‌ ಮತ್ತು ಸಿಬ್ಬಂದಿ ಮತಯಂತ್ರದೊಂದಿಗೆ ಶುಕ್ರವಾರ ಮತಗಟ್ಟೆಗಳಿಗೆ ತೆರಳಿದರು   

ವಿಜಯಪುರ: ರಾಜಕೀಯಜಿದ್ದಾಜಿದ್ದಿಗೆ ಕಾರಣವಾಗಿರುವ ಸಿಂದಗಿ ವಿಧಾನಸಭೆ ಉಪ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳ ಹಣೆಬರಹವನ್ನು ಅ.30ರಂದು ಬರೆಯಲುಮತದಾರರು ಸಜ್ಜಾಗಿದ್ದಾರೆ.

ಅಖಾಡದಲ್ಲಿರುವ ಕಾಂಗ್ರೆಸ್‌ನ ಅಶೋಕ ಮನಗೂಳಿ, ಬಿಜೆಪಿಯ ರಮೇಶ ಭೂಸನೂರ, ಜೆಡಿಎಸ್‌ನ ನಾಜಿಯಾ ಅಂಗಡಿ, ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿ ಡಾ. ಸುನೀಲಕುಮಾರ್ ಹೆಬ್ಬಿ ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಜಿಲಾನಿ ಗುಡುಸಾಬ್ ಮುಲ್ಲಾ, ದೀಪಿಕಾ ಎಸ್.ಪಡಸಲಗಿ ಅವರ ಭವಿಷ್ಯ ನಿರ್ಧಾರಕ್ಕೆ ಸಿಂದಗಿ ಕ್ಷೇತ್ರ ಸಕಲ ಸನ್ನದ್ಧವಾಗಿದೆ.

ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. 297 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ADVERTISEMENT

ವೇತನ ಸಹಿತ ರಜೆ:ಸಿಂದಗಿ ಕ್ಷೇತ್ರ ವ್ಯಾಪ್ತಿಯಲ್ಲಿ ನೋಂದಾಯಿತ ಮತದಾರರಾಗಿರುವವರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಅ.30 ರಂದು ವೇತನ ಸಹಿತ ರಜೆ ನೀಡಲಾಗಿದೆ.

ನಿಷೇಧಾಜ್ಞೆ ವಿಸ್ತರಣೆ:ಸಿಂದಗಿ ವಿಧಾನಸಭಾ ಉಪಚುನಾವಣೆ ಹಿನ್ನೆಲೆ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಅ. 31ರ ವರೆಗೆ ನಿಷೇಧಾಜ್ಞೆಯನ್ನು ಜಿಲ್ಲಾಧಿಕಾರಿ ವಿಸ್ತರಿಸಿದ್ದಾರೆ.

ಮದ್ಯ ಮಾರಾಟ ನಿಷೇಧ:ಸಿಂದಗಿ ವಿಧಾನಸಭಾ ಉಪಚುನಾವಣೆ ಮತ ಎಣಿಕೆ ಹಿನ್ನೆಲೆ ಜಿಲ್ಲೆಯಾದ್ಯಂತ ನ.2 ರಂದು ಬೆಳಿಗ್ಗೆ 6ರಿಂದ ನ. 3 ರ ಬೆಳಿಗ್ಗೆ 6ರವರೆಗೆ ಮದ್ಯ ಮಾರಾಟ, ಸಂಗ್ರಹಣೆ ಹಾಗೂ ಹಂಚಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಆದೇಶ ಹೊರಡಿಸಿದ್ದಾರೆ.

28 ಪ್ರಕರಣ ದಾಖಲು:ಸಿಂದಗಿ ಉಪ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಇದುವರೆಗೆ 28 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಕಾಂಗ್ರೆಸ್ 12, ಬಿಜೆಪಿ 9, ಜೆಡಿಎಸ್ 4 ಹಾಗೂ 17 ಅಬಕಾರಿ ಪ್ರಕರಣಗಳು ದಾಖಲಾಗಿವೆ.

ಡಂಬಳ ಗ್ರಾಮದಲ್ಲಿ ಹಣ ಹಂಚುತ್ತಿರುವ ದೃಶ್ಯಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸ್ವಯಂಪ್ರೇರಿತರಾಗಿ ಕಲಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಸಿಂದಗಿ ಚುನಾವಣಾಧಿಕಾರಿ ರಾಹುಲ್ ಶಿಂಧೆ ತಿಳಿಸಿದ್ದಾರೆ.

ಸಿಂದಗಿ ಪಟ್ಟಣದ ಸಿ.ಎಂ.ಮನಗೂಳಿ ಕಾಲೇಜು ಉಪನ್ಯಾಸಕ ಅರವಿಂದ ಮನಗೂಳಿ ಅವರು ಅ.26 ರಂದು ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ದ ಕ್ರಮ ಜರುಗಿಸಬೇಕು ಎಂದು ವಕೀಲ ಬಿ.ಎಂ.ಜಿರಾಳಿ ಅವರು ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ನಕಲು ವಿವಿ ಪ್ಯಾಟ್ ಮಷಿನ್:ಗುಂಡು ಹುಮನಾಬಾದ ಎಂಬ ವ್ಯಕ್ತಿ ಫೇಸ್‌ಬುಕ್‌ನಲ್ಲಿ ವಿ.ವಿ.ಪ್ಯಾಟ್ ಮಷಿನ್ ನಕಲು ಪ್ರತಿಯನ್ನು ಹರಿಬಿಟ್ಟಿರುವ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

****

2,34,584 ಒಟ್ಟು ಮತದಾರರು
297
ಮತಗಟ್ಟೆಗಳು
06 ಅಭ್ಯರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.