
ವಿಜಯಪುರ: ‘ವಿಶೇಷವಾಗಿ ರೈತರ ಭೂ-ಸ್ವಾಧೀನ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಹಾಗೂ ವಿವಿಧ ಪ್ರಕರಣಗಳ ರಾಜಿ– ಸಂಧಾನಕ್ಕೆ ಸಂಬಂಧಿಸಿದಂತೆ ವಿಶೇಷ ಲೋಕ ಅದಾಲತ್‌ನ್ನು ಜನವರಿ 24 ರಂದು ಆಯೋಜಿಸಲಾಗಿದೆ’ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎ. ಹರೀಶ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜಿ-ಸಂಧಾನ ಮಾಡಬಹುದಾದ ಭೂ-ಸ್ವಾಧೀನ ವಿಷಯಕ್ಕೆ ಸಂಬಂಧಿಸಿದ ಎಲ್‌ಎಸಿ, ಇಪಿ ಎಲ್‌ಎಸಿ ಪ್ರಕರಣಗಳನ್ನು ಈ ವಿಶೇಷ ಲೋಕ್ ಅದಾಲತ್ ಮೂಲಕ ಬಗೆ ಹರಿಸಿಕೊಳ್ಳಬಹುದಾಗಿದೆ’ ಎಂದರು.
2024 ರ ಡಿಸೆಂಬರ್ 1ಕ್ಕೆ ಜಿಲ್ಲೆಯ ವಿವಿಧ ಸಿವಿಲ್ ನ್ಯಾಯಾಲಯಗಳಲ್ಲಿ 9,820 ಎಲ್‌ಎಸಿ, ಹಾಗೂ 51 ಎಲ್ಎಸಿ ಅಪೀಲ್ ಪ್ರಕರಣಗಳಿದ್ದು, ಈ ಪೈಕಿ 1,666 ಎಲ್‌ಎಸಿ - ಇಪಿ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ, ಅವುಗಳನ್ನು ರಾಜಿಗಾಗಿ ಸಂಬಂಧಪಟ್ಟ ವಕೀಲರ ಹಾಗೂ ಕಕ್ಷಿದಾರರ ಜೊತೆ ಮಾತುಕತೆ ನಡೆಸಿ ರಾಜಿಗಾಗಿ ಗುರುತಿಸುವ ಪ್ರಯತ್ನ ನಡೆದಿದೆ ಎಂದು ವಿವರಿಸಿದರು.
ಮಧ್ಯಸ್ಥಿಕೆ ಅಭಿಯಾನ 2.0: ಜನವರಿ 2 ರಂದು ಆರಂಭ
ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಮಧ್ಯಸ್ಥಿಕೆ ಅಭಿಯಾನ 2.0 ಅಬಿಯಾನ ಜನವರಿ 2 ರಿಂದ ಆರಂಭಗೊಳ್ಳಲಿದ್ದು, ರಾಜಿಯಾಗಬಹುದಾದ ಪ್ರಕರಣಗಳನ್ನು ಮಧ್ಯಸ್ಥಿಕೆ ಕೇಂದ್ರಗಳಿಗೆ ಕಳುಹಿಸಿ, ಅಲ್ಲಿ ವಿಶೇಷ ತರಬೇತಿ ಹೊಂದಿದ ಮಧ್ಯಸ್ಥಿಕೆಗಾರರಿಂದ ರಾಜಿ-ಸಂಧಾನ ಮಾಡಿಸುವ ವ್ಯವಸ್ಥೆ ಇದಾಗಿದೆ ಎಂದು ನ್ಯಾಯಾಧೀಶರಾದ ಹರೀಶ ವಿವರಿಸಿದರು.
ಮೊದಲನೇಯ ಬಾರಿ ನಡೆದ ಮಧ್ಯಸ್ಥಿಕೆ ಅಭಿಯಾನದಲ್ಲಿ ರಾಜಿ ಆಗಬಹುದಾದ ಪ್ರಕರಣಗಳಾದ 49,250 ರ ಪೈಕಿ 3228 ಪ್ರಕರಣಗಳನ್ನು ರಾಜಿಗಾಗಿ ಗುರುತಿಸಲಾಗಿತ್ತು, ಅದರಲ್ಲಿ 748 ಪ್ರಕರಣಗಳು ಮಧ್ಯಸ್ಥಿಕೆ ನಡೆದಿದ್ದು, 115 ಪ್ರಕರಣಗಳು ರಾಜಿ-ಸಂಧಾನದ ಮೂಲಕ ಇತ್ಯರ್ಥಗೊಂಡಿವೆ ಎಂದರು.
2025 ರ ಡಿಸೆಂಬರ್ 1ಕ್ಕೆ ಸಂಬಂಧಿಸಿದಂತೆ 45878 ಸಿವಿಲ್ ಹಾಗೂ 37373 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಎಂದು ವಿವರಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಹಾಗರಗಿ, ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಎಸ್.ಎಸ್. ಚೂರಿ ಇದ್ದರು.
ರಾಜಿ ಸಂಧಾನ: ವಿಜಯಪುರ ಜಿಲ್ಲೆ 2ನೇ ಸ್ಥಾನ ಜನತಾ ನ್ಯಾಯಾಲಯದಲ್ಲಿ 2024ರ ಡಿಸೆಂಬರ್ 1 ರವರೆಗೆ ಬಾಕಿ ಇರುವ 83,251 ಪ್ರಕರಣಗಳಲ್ಲಿ 21,263 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿ ₹66,95,70,565 ಪರಿಹಾರ ಕೊಡಿಸಲಾಗಿದ್ದು 2,89,479 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ₹18,30,25,426 ಪರಿಹಾರ ಕೊಡಿಸಲಾಗಿದೆ ಇದರಿಂದ ರಾಜಿ ಸಂಧಾನ ಮಾಡುವಲ್ಲಿ ವಿಜಯಪುರ ಜಿಲ್ಲೆ ಸತತ 3 ನೇ ಬಾರಿಗೆ 2ನೇ ಸ್ಥಾನ ಪಡೆದುಕೊಂಡಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.