
ವಿಜಯಪುರ: ನಿರ್ಮಲ ಭಕ್ತಿ-ಭಾವದಿಂದ ಭಗವಂತನನ್ನು ಪ್ರಾರ್ಥಿಸಿದರೆ ನಮ್ಮ ಎಲ್ಲ ಸಂಕಷ್ಟಗಳು ದೂರಾಗಿ, ಜೀವನದಲ್ಲಿ ಸಾರ್ಥಕತೆ ಪಡೆಯಲು ಸಾಧ್ಯ ಎಂದು ಷಣ್ಮುಖಾರೂಢ ಮಠದ ಶಿವಲಿಂಗೇಶ್ವರ ದೇವರು ಹೇಳಿದರು.
ನಗರದ ಅಥಣಿ ರಸ್ತೆಯಲ್ಲಿರುವ ನವರಸಪುರದ ಶಿವಾಲಯ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಶನಿವಾರ ನಡೆದ ‘ಶರಣರ ಜೀವನ ದರ್ಶನ ಮತ್ತು ಅಧ್ಯಾತ್ಮಿಕ ಚಿಂತನೆಗಳು’ ವಿಷಯ ಕುರಿತು ಪ್ರವಚನ ನೀಡಿದ ಅವರು, ಎಲ್ಲದಕ್ಕೂ ನಾನು, ನನ್ನದು, ನನ್ನಿಂದ ಎಂಬ ಮಮಕಾರ-ಅಹಂಭಾವ ತೊರೆದು ಈ ಜನ್ಮವು ಇರುವುದು ನನಗಾಗಿ ಅಷ್ಟೇ ಅಲ್ಲದೇ ಈ ಸಮಾಜದ ಅಭ್ಯುದಯ ಮತ್ತು ಸಹಾಯ ಬೇಡಿ ಬಂದವರಿಗೆ ಸಾಧ್ಯವಾದಷ್ಟು ಉಪಕಾರ ಮಾಡುವ ಮನೋಭಾವ ನಮ್ಮದಾಗಬೇಕು ಎಂದರು.
ಇಂದಿನ ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವ ಮತ್ತು ಮಿತಿಮೀರಿದ ಬಳಕೆಯಿಂದ ಸಂಸ್ಕೃತಿ-ಸಂಸ್ಕಾರ, ಜೀವನ-ಮೌಲ್ಯಗಳು ಅಧಃಪತನಗೊಳ್ಳುತ್ತಿದೆ. ಮಾನವ ಕೇವಲ ಹಣ ಗಳಿಕೆಯತ್ತ ತನ್ನ ಜೀವನವನ್ನು ಸಾಗಿಸುತ್ತಾ, ಸಂಸಾರವೆಂಬ ಪ್ರಾಪಂಚಿಕ ಜಗತ್ತಿನಲ್ಲಿ ಮುಳುಗಿ ಹೋಗಿದ್ದಾನೆ. ಮನದಲ್ಲಿರುವ ಅಷ್ಟ ಅರಿಷಡ್ವರ್ಗಗಳಾದ ಮದ, ಮೋಹ, ಮತ್ಸರ, ಲೋಭ, ಮಮಕಾರ ಮತ್ತು ಮನದಲ್ಲಿ ಕಲ್ಮಶ ಭಾವನೆಗಳನ್ನು ತೊಲಗಿಸಿ, ಜೀವನದಲ್ಲಿ ಸಾಕ್ಷಾತ್ಕಾರ ಪಡೆಯಬೇಕು ಎಂದರು.
ಪ್ರಸಾದ ಸೇವೆಗೈದ ಅನುಸೂಯಾ ಫತ್ತೇಪೂರಮಠ ಹಾಗೂ ಲಕ್ಷ್ಮಿ ನರಳೆ ಅವರನ್ನು ಸನ್ಮಾನಿಸಲಾಯಿತು. ಬಸಯ್ಯ ಮಠಪತಿ, ಆರ್.ಕೆ. ಉತ್ತರಕರ, ಎಸ್.ಎಲ್.ಇಂಗಳೇಶ್ವರ, ಬಿ.ಡಿ.ಕಡಕೋಳ, ಪ್ರೊ. ಬಸವರಾಜ ಕುಂಬಾರ, ನಿಂಗಪ್ಪ ನಿಂಬಾಳಕರ, ಸಾಬು ಅಗ್ರಾಣಿ, ರಾಜಕುಮಾರ ಜೊಳ್ಳೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.