ADVERTISEMENT

ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರ ಸಹಕಾರಿ: ಸಿಇಒ ರಿಷಿ ಆನಂದ್‌

​ಪ್ರಜಾವಾಣಿ ವಾರ್ತೆ
Published 6 ಮೇ 2025, 14:13 IST
Last Updated 6 ಮೇ 2025, 14:13 IST
ವಿಜಯಪುರ ನಗರದ ಗಾಂಧಿ ಭವನದಲ್ಲಿ ಜಿಲ್ಲಾ ಬಾಲ ಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಡೆದ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ಸಮಾರಂಭಕ್ಕೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್‌ ಚಿಣ್ಣರೊಂದಿಗೆ ಚಾಲನೆ ನೀಡಿದರು
ವಿಜಯಪುರ ನಗರದ ಗಾಂಧಿ ಭವನದಲ್ಲಿ ಜಿಲ್ಲಾ ಬಾಲ ಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಡೆದ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ಸಮಾರಂಭಕ್ಕೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್‌ ಚಿಣ್ಣರೊಂದಿಗೆ ಚಾಲನೆ ನೀಡಿದರು   

ವಿಜಯಪುರ: ಮಕ್ಕಳ ಜ್ಞಾನ ಮತ್ತು ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರಗಳು ಸಹಾಕಾರಿಯಾಗಿವೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್‌ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಜಿಲ್ಲಾ ಬಾಲ ಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಡೆದ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಬೇಸಿಗೆ ಶಿಬಿರವು ಬಹಳ ತೃಪ್ತಿದಾಯಕವಾಗಿ ಜರುಗಿದ್ದು, ಅತ್ಯಲ್ಪ ಸಮಯದಲ್ಲಿಯೇ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಕರಾಟೆ, ನೃತ್ಯ, ಸಂಗೀತ, ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿಕೆ ಸೇರಿದಂತೆ ಅಗತ್ಯ ಕೌಶಲಗಳನ್ನು ತಿಳಿದುಕೊಂಡಿದ್ದಾರೆ ಎಂದರು.

ADVERTISEMENT

ಸದಾ ಪುಸ್ತಕ, ಓದು-ಬರಹ ಒತ್ತಡದಿಂದ ಮುಕ್ತರಾಗಿ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಆಟವಾಡಿಕೊಂಡು ಸಂತೋಷದಿಂದ ಮುಕ್ತವಾದ ವಾತಾವರಣದಲ್ಲಿ ಕಲಿಕೆಯಲು ಬೇಸಿಗೆ ಶಿಬಿರವು ಸಹಕಾರಿಯಾಗಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಗೆ ಪ್ರೋತ್ಸಾಹ ನೀಡಿ, ಪ್ರತಿಭೆ ಅನಾವರಣಕ್ಕೆ ಈ ಶಿಬಿರ ವೇದಿಕೆಯಾಗಿದೆ ಎಂದರು.

ಮಕ್ಕಳ ಮನಸ್ಸು ಹೂವಿನಂತೆ ಅರಳಲು ಬೇಸಿಗೆ ಶಿಬಿರವು ನೆರವಾಗಲಿದೆ. ಈ ಶಿಬಿರದಲ್ಲಿ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳು ನೀಡುವ ಸಲಹೆ ಹಾಗೂ ಸೂಕ್ತ ಮಾರ್ಗದರ್ಶನವು ಮಕ್ಕಳು ಕಲಿಕೆಯತ್ತ ಆಸಕ್ತಿ ತಾಳಿ ಅವರಲ್ಲಿನ ಸೃಜನಾತ್ಮಕ ಕಲೆಯ ರೂಢಿಸಿಕೊಳ್ಳಲು ಶಿಬಿರದ ಉಪಯುಕ್ತತೆ ಸಾಕಾರಗೊಳ್ಳುತ್ತದೆ. ಮಕ್ಕಳು ಹೊಸ-ಹೊಸ ವಿಷಯಗಳನ್ನು ಕಲಿಯುವುದರಿಂದ ಅವರ ಕಲಿಕಾ ಕಾರ್ಯಕ್ಷಮತೆ ದ್ವಿಗುಣವಾಗುವುದಷ್ಟೇ ಅಲ್ಲದೇ ಆತ್ಮ ವಿಶ್ವಾಸದ ದೃಢತೆ ಹೆಚ್ಚಾಗುತ್ತದೆ ಎಂದರು.

ಮಕ್ಕಳಲ್ಲಿ ಓದುವ ಹವ್ಯಾಸ ರೂಢಿಸುವುದು, ನೈತಿಕತೆ, ನಾಯಕತ್ವ ಗುಣ, ವಿಜ್ಞಾನ, ಗಣಿತ ಚಟುವಟಿಕೆ, ಕರಾಟೆ, ನೃತ್ಯ, ಸಂಗೀತ, ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿಕೆ ಕೌಶಲ್ಯ ಹಾಗೂ ಇನ್ನಿತರ ಆಸಕ್ತಿದಾಯಕ ಚಟುವಟಿಕೆಗಳೂ ಸೇರಿದಂತೆ ಹಲ ಉಪಯುಕ್ತ ವಿಷಯಗಳನ್ನು ಶಿಬಿರದಲ್ಲಿ ಕಲಿಸಿಕೊಡಲಾಗಿದೆ ಎಂದರು.

ಈ ಶಿಬಿರವನ್ನು ಬೇಸಿಗೆಗೆ ಮಾತ್ರ ಸೀಮಿತಗೊಳಿಸದೇ ವರ್ಷವಿಡೀ ಮಕ್ಕಳ ಸರ್ವತೋಮುಖ ವ್ಯಕ್ತಿತ್ವದ ಬೆಳವಣಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಬಾಲಭವನ ಕಾರ್ಯದರ್ಶಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ. ಚವ್ಹಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ದೀಪಾ ಕಾಳೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ, ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನೀಲ್ ಹಳ್ಳಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಂಪನ್ಮೂಲ ವ್ಯಕ್ತಿಗಳಾದ ಭಾರತಿ ಕುಂದಣಗಾರ, ಸವಿತಾ ಬಿರಾದಾರ, ಜಗದೀಶ ಗುಳೇದಗುಡ್ಡ, ವಾಸು ಕುಲಕರ್ಣಿ, ಸುಮಿತಾ ಅಕ್ಕಿ  ಉಪಸ್ಥಿತರಿದ್ದರು.

ಮುಂಬರುವ ದಿನಗಳಲ್ಲಿ ಬಾಲ ಭವನದ ಹೊರಾಂಗಣ ಆವರಣವನ್ನು ನವೀಕರಣಗೊಳಿಸಿ ಮಕ್ಕಳ ಸ್ನೇಹಿ ಉದ್ಯಾನವನ್ನಾಗಿ ಮಾಡಲಾಗುವುದು
-ರಿಷಿ ಆನಂದ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯ್ತಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.