
ತಾಳಿಕೋಟೆ: ಪಟ್ಟಣದಲ್ಲಿರುವ ವೈವಿಧ್ಯಮಯ ಕ್ರೀಡಾಭಿಮಾನಿಗಳು, ಎಲ್ಲ ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಸಾಕಷ್ಟು ಪ್ರೋತ್ಸಾಹ, ನೀಡುವ ಸಹಕಾರದಿಂದ ಪಟ್ಟಣದಲ್ಲಿ ಕ್ರೀಡೆಗಳು, ಕ್ರೀಡಾಪಟುಗಳು ಬೆಳೆಯಲು ಅವಕಾಶವಾಗುತ್ತಿದೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಚೇರ್ಮನ್ ವಿ.ಸಿ.ಹಿರೇಮಠ ಹೇಳಿದರು.
ಅವರು ಪಟ್ಟಣದ ಎಸ್.ಕೆ ಪಿಯು ಕಾಲೇಜು ಮೈದಾನದಲ್ಲಿ ಸ್ಥಳೀಯ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಿರುವ ಎರಡು ದಿನಗಳ ತಾಳಿಕೋಟಿ ವಾಲಿಬಾಲ್ ಪ್ರೀಮಿಯರ್ ಲೀಗ್ ಸೀಜನ್-2 ಪಂದ್ಯಾವಳಿಯನ್ನು ಉದ್ಘಾಟಿಸಿ ಶನಿವಾರ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ತಾಳಿಕೋಟಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ರವೀಂದ್ರ ಕಟ್ಟಿಮನಿ ಮಾತನಾಡಿ, ಪಟ್ಟಣದಲ್ಲಿ ಎರಡನೇ ಬಾರಿಗೆ ಈ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದ್ದು ಇದಕ್ಕೆ ವಿ.ವಿ. ಸಂಘದ ಅಧ್ಯಕ್ಷರು ಹಾಗೂ ಎಲ್ಲ ಪದಾಧಿಕಾರಿಗಳು ವಿಶೇಷವಾಗಿ ಪಟ್ಟಣದ ವಾಲಿಬಾಲ್ ಹಿರಿಯ ಆಟಗಾರರ ಸಂಪೂರ್ಣ ಸಹಕಾರ ಮಾರ್ಗದರ್ಶನ ಕಾರಣವಾಗಿದೆ ಎಂದರು.
ವಿ.ವಿ.ಸಂಘದ ಸಹ ಕಾರ್ಯದರ್ಶಿ ಕಾಶಿನಾಥ ಮುರಾಳ, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಡಿ.ಬಿ. ಹೆಬ್ಬಾಳ, ಹಿರಿಯ ವಾಲಿಬಾಲ್ ಕ್ರೀಡಾಪಟು ಮಹೇಶ ಚಲವಾದಿ ಮಾತನಾಡಿದರು.
ಸಮಾರಂಭದಲ್ಲಿ ವಿವಿ ಸಂಘದ ಕಾರ್ಯದರ್ಶಿ ಎಂ.ಎಸ್ ಸರಶೆಟ್ಟಿ, ಸಹಕಾರಿ ಬ್ಯಾಂಕ್ ಅಧ್ಯಕ್ಷ ಕಾಶಿನಾಥ ಸಜ್ಜನ, ವಿವಿ ಸಂಘದ ವಿವಿಧ ಕಾಲೇಜುಗಳ ಚೇರ್ಮನ್, ಸ್ಪೋರ್ಟ್ಸ್ ಕ್ಲಬ್‌ನ ಪದಾಧಿಕಾರಿಗಳು, ದಾನಿಗಳು, ಎಂಟು ತಂಡಗಳ ತರಬೇತುದಾರರು, ನಾಯಕರು ಹಾಗೂ ಕ್ರೀಡಾಪಟುಗಳು ಇದ್ದರು. ಎಸ್.ಕೆ.ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷಕ ಅನೀಲಕುಮಾರ ಇರಾಜ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.