ADVERTISEMENT

ಚಿನ್ನದ ನಗೆ ಬೀರಿದ ‘ಅಕ್ಕ’ನ ಶಿಷ್ಯೆಯರು

ಕನ್ನಡದಲ್ಲೇ ಶುಭ ಕೋರಿ, ಬೆನ್ನುತಟ್ಟಿದ ರಾಜ್ಯಪಾಲ ಗೆಹಲೋತ್‌

ಬಸವರಾಜ ಸಂಪಳ್ಳಿ
Published 19 ಡಿಸೆಂಬರ್ 2022, 23:15 IST
Last Updated 19 ಡಿಸೆಂಬರ್ 2022, 23:15 IST
ಎಂ.ಎ.ಕನ್ನಡದಲ್ಲಿ ಮೂರು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ಹುಬ್ಬಳ್ಳಿಯ ಎಸ್‌ವಿಪಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಸವಿತಾ ಕುಲಕರ್ಣಿ ಅವರನ್ನು ಕುಟುಂಬದವರು ಅಭಿನಂದಿಸಿದರು–ಪ್ರಜಾವಾಣಿ ಚಿತ್ರ
ಎಂ.ಎ.ಕನ್ನಡದಲ್ಲಿ ಮೂರು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ಹುಬ್ಬಳ್ಳಿಯ ಎಸ್‌ವಿಪಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಸವಿತಾ ಕುಲಕರ್ಣಿ ಅವರನ್ನು ಕುಟುಂಬದವರು ಅಭಿನಂದಿಸಿದರು–ಪ್ರಜಾವಾಣಿ ಚಿತ್ರ   

ವಿಜಯಪುರ:ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿಸೋಮವಾರ ನಡೆದ 13 ಮತ್ತು 14ನೇ ಘಟಿಕೋತ್ಸವದಲ್ಲಿಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ 167 ವಿದ್ಯಾರ್ಥಿನಿಯರು 202 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಸಾಧನೆಯ ನಗೆ ಬೀರಿದರು.

ವಿದ್ಯಾರ್ಥಿನಿಯರ ಚಿನ್ನದ ಭೇಟೆಯನ್ನು ಕಂಡ ರಾಜ್ಯಪಾಲ ಥಾವರ್‌ ಚೆಂದ್‌ ಗೆಹಲೋತ್‌ ಅವರು ಕನ್ನಡದಲ್ಲೇ ಶುಭ ಕೋರಿ, ಬೆನ್ನುತಟ್ಟಿದ್ದು ವಿಶೇಷ.

ವಿಜಯಪುರ ನಗರದ ಚಹಾ ಅಂಗಡಿ ಮಾಲೀಕ ಕಲೀಲ್‌ ಪಾಷಾ ಮತ್ತು ಸಲಿಮಾ ಬಾನು ದಂಪತಿ ಪುತ್ರಿ ಮುಬಾಶಿರಿನ್‌ ಇನಾಂದಾರ್‌ ಅವರು ಎಂ.ಎಸ್‌ಸಿ ಫುಡ್‌ ಪ್ರೋಸೆಸಿಂಗ್‌ ಆ್ಯಂಡ್‌ ನ್ಯೂಟ್ರೇಷನ್‌ ವಿಭಾಗದಲ್ಲಿ ಮೂರು ಚಿನ್ನದ ಪದಕಗಳನ್ನು ಕೊರಳಿಗೆ ಹಾಕಿಕೊಂಡರು.

ADVERTISEMENT

ಮಗಳ ಸಾಧನೆಯಿಂದ ಖುಷಿಯಾದ ದಂಪತಿ ‘ಬೇಟಿ ಮುಂದೆಯೂ ಇದೇ ರೀತಿ ಸಾಧನೆ ಮಾಡಿ, ಒಂದು ಉತ್ತಮ ಕೆಲಸಕ್ಕೆ ಸೇರಿಕೊಳ್ಳಲಿ’ ಎಂದು ಆಶಿಸಿದರು.

ಮೂರು ವರ್ಷದ ಮಗ, ಪತಿ ಮತ್ತು ಕುಟುಂಬದೊಂದಿಗೆ ಧಾರವಾಡದ ಕಾಮನಕಟ್ಟಿಯಿಂದ ಬಂದಿದ್ದಹುಬ್ಬಳ್ಳಿಯ ಎಸ್‌ವಿಪಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಸವಿತಾ ಕುಲಕರ್ಣಿ ಎಂ.ಎ. ಕನ್ನಡ ದಲ್ಲಿ ಮೂರು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡು ನಗು ಬೀರಿದರು.

‘ಪತಿ, ಕುಟುಂಬದವರ ಪ್ರೋತ್ಸಾಹ ಹಾಗೂ ಅಧ್ಯಾಪಕರ ಮಾರ್ಗದರ್ಶನದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಮುಂದೆ ಪಿಎಚ್‌ಡಿ ಮಾಡಿ, ಅಧ್ಯಾಪಕಿಯಾಗುವ ಗುರಿ ಇದೆ’ ಎಂದು ಸವಿತಾ ಕುಲಕರ್ಣಿ ಆಶಯ ವ್ಯಕ್ತಪಡಿಸಿದರು.

ಎಂ.ಎ. ಸಮಾಜಶಾಸ್ತ್ರದಲ್ಲಿ ಮೂರು ಚಿನ್ನದ ಪದಕ ಗಳಿಸಿದ ಸಿಂದಗಿ ತಾಲ್ಲೂಕಿನ ಕುಮಸಗಿಯ ಶೈಲಶ್ರೀ ಬೆಟವಾಲ ಅವರು, ತಂದೆ, ತಾಯಿ ಕೃಷಿ ಮಾಡುತ್ತಾರೆ. ನಾನು ದೇವರ ಹಿಪ್ಪರಗಿಯಲ್ಲಿರುವ ದೊಡ್ಡೊಪ್ಪನ ಮನೆಯಲ್ಲಿ ಇದ್ದುಕೊಂಡು ಅವರ ಪ್ರೋತ್ಸಾಹದೊಂದಿಗೆ ಓದಿ, ಈ ಸಾಧನೆ ಮಾಡಿದ್ದೇನೆ ಮುಂದೆ ಪಿ.ಎಚ್‌ಡಿ ಅಧ್ಯಯನ ಮಾಡಿ, ಪದವಿ ಕಾಲೇಜಿಗೆ ಪ್ರೋಪೆಸರ್‌ ಆಗಬೇಕು ಎಂದು ಆಶಯ ಇದೆ ಎಂದುಸಂತಸ ವ್ಯಕ್ತಪಡಿಸಿದರು.

ಪುಣೆಯ ಟಿಸಿಎಸ್‌ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಹಾಗೂ ಕೊರೊನಾ ಕಾರಣಕ್ಕೆ ವರ್ಕ್‌ ಫ್ರಮ್‌ ಹೋಂನಲ್ಲಿರುವ ವಿಜಯಪುರದ ಮುಕ್ತಾಂಕಾ ಹಿರೇಮಠ ಅವರು, ಪ್ರತಿ ದಿನ ರಾತ್ರಿ ಕಂಪನಿ ಕೆಲಸ ಮಾಡಿಕೊಂಡು, ಹಗಲು ವೇಳೆ ಕಾಲೇಜಿಗೆ ಬಂದು ಓದುವ ಮೂಲಕ ಎಂಬಿಎನಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಇದೇ ರೀತಿ ಮೂರು, ಎರಡು ಚಿನ್ನದ ಪದಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿನಿಯರ ಚಿನ್ನದ ನಗೆ ಘಟಿಕೋತ್ಸವದಲ್ಲಿ ಅನುರಣಿಸಿತು.

ಘಟಿಕೋತ್ಸವದಲ್ಲಿ ಸ್ನಾತಕ, ಸ್ನಾತಕೋತ್ತರ ಮತ್ತು ಪಿಜಿ ಡಿಪ್ಲೋಮಾ ಸೇರಿ ಒಟ್ಟು 23,911 ವಿದ್ಯಾರ್ಥಿನಿಯರಿಗೆ ಪದವಿ, 55 ವಿದ್ಯಾರ್ಥಿನಿಯರಿಗೆ ಪಿಎಚ್.ಡಿ, 2,169 ವಿದ್ಯಾರ್ಥಿನಿಯರಿಗೆ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.