ADVERTISEMENT

ನೀರು ಹರಿಸುವ ಪ್ರಸ್ತಾವ ಇಲ್ಲ

ನೀರಾವರಿ ಸಲಹಾ ಸಮಿತಿ ಸಭೆ ಕರೆದು ತೀರ್ಮಾನ: ಕತ್ತಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 4:27 IST
Last Updated 29 ಜೂನ್ 2021, 4:27 IST
ಆಲಮಟ್ಟಿ ಜಲಾಶಯವನ್ನು ಸಚಿವ ಉಮೇಶ ಕತ್ತಿ ವೀಕ್ಷಿಸಿದರು. ಶಾಸಕರಾದ ಸಿದ್ದು ಸವದಿ, ಹನುಮಂತ ನಿರಾಣಿ ಇದ್ದಾರೆ
ಆಲಮಟ್ಟಿ ಜಲಾಶಯವನ್ನು ಸಚಿವ ಉಮೇಶ ಕತ್ತಿ ವೀಕ್ಷಿಸಿದರು. ಶಾಸಕರಾದ ಸಿದ್ದು ಸವದಿ, ಹನುಮಂತ ನಿರಾಣಿ ಇದ್ದಾರೆ   

ಆಲಮಟ್ಟಿ: ವಿಜಯಪುರ, ಬಾಗಲಕೋಟೆ ಸೇರಿ ಉತ್ತರಕರ್ನಾಟಕದಲ್ಲಿ ಉತ್ತಮ ಮಳೆಯಾಗಿದ್ದು, ಬಿತ್ತನೆ ಕಾರ್ಯವೂ ಪ್ರಗತಿಯಲ್ಲಿದೆ. ಸದ್ಯಕ್ಕೆ ಕಾಲುವೆಗೆ ನೀರು ಬಿಡುವ ಯಾವುದೇ ಪ್ರಸ್ತಾವ ಇಲ್ಲ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ತಿಳಿಸಿದರು.

ಆಲಮಟ್ಟಿಯ ಜಲಾಶಯದಲ್ಲಿ ಸೋಮವಾರ ನೀರಿನ ಸಂಗ್ರಹಣೆ, ಪ್ರವಾಹ ನಿಯಂತ್ರಣದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಜಲಾಶಯ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಲಾಶಯದಲ್ಲಿ 89 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿದೆ, ಮುಂದಿನ ತಿಂಗಳು ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗುವುದು, ಆ ಸಭೆಯಲ್ಲಿ ತೀರ್ಮಾನಿಸಿ ನೀರು ಬಿಡಲಾಗುವುದು ಎಂದರು.

ADVERTISEMENT

ಪಡಿತರದಲ್ಲಿ ರಾಗಿ, ಜೋಳ: ರಾಗಿ ಮತ್ತು ಜೋಳವನ್ನು ಪಡಿತರದಲ್ಲಿ ನೀಡಬೇಕೆಂಬ ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದಿದೆ, ಆದರೆ ಉತ್ತರಕರ್ನಾಟಕ ಭಾಗದಲ್ಲಿ ಜೋಳ ನೀಡಲು ವರ್ಷಕ್ಕೆ ಕನಿಷ್ಠ 6.5 ಲಕ್ಷ ಟನ್ ಜೋಳ ಹಾಗೂ ದಕ್ಷಿಣ
ಕರ್ನಾಟಕದಲ್ಲಿ ರಾಗಿ ನೀಡಲು 6.5 ಲಕ್ಷ ಟನ್ ರಾಗಿಯ ಅಗತ್ಯವಿದೆ. ಆ ಪ್ರಮಾಣದಲ್ಲಿ ಜೋಳ ಹಾಗೂ ರಾಗಿ ಸಿಗುತ್ತಿಲ್ಲ. ಕಳೆದ ಬಾರಿ ಕೇವಲ 80 ಸಾವಿರ ಟನ್ ಜೋಳ ದೊರೆಕಿದೆ ಎಂದರು.

ಜೋಳಕ್ಕೆ ನಿಗದಿಪಡಿಸಿರುವ ಬೆಂಬಲ ಬೆಲೆಯನ್ನು ಹೆಚ್ಚಿಸಲು ನವದೆಹಲಿಗೆ ಮೂರ್ನಾಲ್ಕು ಸಾರಿ ಹೋಗಿ ಒತ್ತಡ ಹೇರಿದ್ದೇನೆ ಎಂದರು.

ಆಲಮಟ್ಟಿ ವೀಕ್ಷಣೆ: ಆಲಮಟ್ಟಿಯ ರಾಕ್, ಕೃಷ್ಣಾ, ಲವಕುಶ, ಮೊಘಲ್, ಸಂಗೀತ, ಲೇಸರ್ ಕಾರಂಜಿಯನ್ನು ವೀಕ್ಷಿಸಿ ಸಂತೋಷಗೊಂಡ ಕತ್ತಿ, ಆಲಮಟ್ಟಿಯ ಪ್ರವಾಸಿ ತಾಣ, ನಿರ್ವಹಿಸಿದ ಪರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂಬರುವ ದಿನದಲ್ಲಿ ಸಾಧ್ಯವಾದರೆ ಬೆಳಗಾವಿಯಂತೆ ಇಲ್ಲಿಯೂ ಜಂಗಲ್ ಸಫಾರಿ ಪ್ರಾರಂಭಿಸಲು ಪ್ರಯತ್ನಿಸುತ್ತೇನೆ ಎಂದರು.

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಮುಖ್ಯ ಎಂಜಿನಿಯರ್ ಎಚ್. ಸುರೇಶ, ಡಿ. ಬಸವರಾಜ, ಪಿ.ಕೆ. ಪೈ, ಮಹೇಶ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.