ADVERTISEMENT

ವಿಜಯಪುರ: ಸಾರಿಗೆ ನೌಕರರ ಮುಷ್ಕರ; ವ್ಯಾಪಾರಕ್ಕೂ ತಟ್ಟಿದ ಬಿಸಿ

ಪ್ರಯಾಣಿಕರಿಗೆ ನೆರವಾದ ಖಾಸಗಿ ವಾಹನಗಳ ಸಂಚಾರ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 14:41 IST
Last Updated 8 ಏಪ್ರಿಲ್ 2021, 14:41 IST
ವಿಜಯಪುರದ ಕೇಂದ್ರ ಬಸ್‌ ನಿಲ್ದಾಣದ ಎದುರು ಪ್ರಯಾಣಿಕರು ಬಿಸಿಲಿನಲ್ಲೇ ಬಸ್‌ಗಳಿಗಾಗಿ ಕಾಯುತ್ತಿದ್ದ ದೃಶ್ಯ ಗುರುವಾರ ಕಂಡುಬಂದಿತು –ಪ್ರಜಾವಾಣಿ ಚಿತ್ರ
ವಿಜಯಪುರದ ಕೇಂದ್ರ ಬಸ್‌ ನಿಲ್ದಾಣದ ಎದುರು ಪ್ರಯಾಣಿಕರು ಬಿಸಿಲಿನಲ್ಲೇ ಬಸ್‌ಗಳಿಗಾಗಿ ಕಾಯುತ್ತಿದ್ದ ದೃಶ್ಯ ಗುರುವಾರ ಕಂಡುಬಂದಿತು –ಪ್ರಜಾವಾಣಿ ಚಿತ್ರ   

ವಿಜಯಪುರ: ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ರಾಜ್ಯದಾದ್ಯಂತ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಎರಡನೇ ದಿನವಾದ ಗುರುವಾರ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು.

ಸಾರಿಗೆ ಸಂಸ್ಥೆಯ ಯಾವೊಂದು ಬಸ್ಸುಗಳು ರಸ್ತೆಗೆ ಇಳಿಯಲಿಲ್ಲ. ಆದರೆ, ಖಾಸಗಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವ ಮೂಲಕ ಪ್ರಯಾಣಿಕರಿಗೆ ಒಂದಷ್ಟು ನೆರವಾದವು.

ಮುಷ್ಕರದ ಪರಿಣಾಮ ನಗರದ ಕೇಂದ್ರ ಬಸ್‌ ನಿಲ್ದಾಣ, ಸೆಟಲೈಟ್‌ ಬಸ್‌ ನಿಲ್ದಾಣ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳ ಬಸ್‌ ನಿಲ್ದಾಣಗಳು ಪ್ರಯಾಣಿಕರು ಮತ್ತು ಬಸ್‌ಗಳಿಲ್ಲದೇ ಭಣಗುಡುತ್ತಿದ್ದ ಚಿತ್ರಣ ಕಂಡುಬಂದಿತು.

ADVERTISEMENT

ನಗರದ ಕೇಂದ್ರ ಬಸ್‌ ನಿಲ್ದಾಣದ ಆಸುಪಾಸು ಖಾಸಗಿ ಬಸ್‌, ಮಿನಿ ಬಸ್‌, ಆಟೊ, ಟಂಟಂ, ಕ್ರೂಸರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದವು. ಜನರು ಹೆಚ್ಚಿನ ಹಣ ತೆತ್ತು ತಮ್ಮ ಊರುಗಳಿಗೆ ತೆರಳಿದರು.ಹುಬ್ಬಳ್ಳಿ, ಕಲಬುರ್ಗಿಗೂ ಖಾಸಗಿ ಬಸ್‌ಗಳ ಸೇವೆ ಲಭ್ಯವಿತ್ತಾದರೂ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರಲಿಲ್ಲ.

ಮುಷ್ಕರದ ಹಿನ್ನೆಲೆಯಲ್ಲಿ ನಗರಕ್ಕೆ ವಿವಿಧೆಡೆಯಿಂದ ಬಂದು, ಹೋಗುವವರ ಸಂಖ್ಯೆ ವಿರಳವಾಗಿದ್ದ ಕಾರಣ ಮಾರುಕಟ್ಟೆಯಲ್ಲಿ ವ್ಯಾಪಾರ, ವಹಿವಾಟು ಕ್ಷೀಣವಾಗಿತ್ತು. ಅಲ್ಲದೇ, ಯುಗಾದಿ ಹಬ್ಬ ಸಮೀಪಿಸುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಒಂದಷ್ಟು ವ್ಯಾಪಾರ, ವಹಿವಾಟಿನ ನಿರೀಕ್ಷೆ ಇತ್ತು. ಆದರೆ, ಮುಷ್ಕರದ ಪರಿಣಾಮ ವ್ಯಾಪಾರ, ವಹಿವಾಟಿಕ್ಕೆ ಏಟು ಬಿದ್ದಿದೆ.

ಬೆರಳೆಣಿಕೆ ಮಂದಿ ಪ್ರಯಾಣಿಕರಿಗೆ ತಮ್ಮ ಊರುಗಳಿಗೆ ತೆರಳಲು ವಾಹನಗಳು ಲಭಿಸದ ಕಾರಣ ಪರದಾಡುವಂತಾಯಿತು.

ಯುಗಾದಿ ಹಬ್ಬ ಸಮೀಪಿಸುತ್ತಿದ್ದು, ಕೆಲಸದ ನಿಮಿತ್ತ ನಗರದಲ್ಲಿ ಇರುವ ಸರ್ಕಾರಿ, ಖಾಸಗಿ ಕಂಪನಿಗಳ ನೌಕರರು ತಮ್ಮ ಊರುಗಳಿಗೆ ತೆರಳಲು ಬಸ್‌ ವ್ಯವಸ್ಥೆ ಇಲ್ಲದೇ ಇರುವುದರಿಂದ ಈ ಬಾರಿ ಯುಗಾದಿಯನ್ನು ತಾವಿರುವ ಸ್ಥಳದಲ್ಲೇ ಆಚರಿಸುವಂತಾಗಿದೆ. ಅಲ್ಲದೇ, ರಾಜ್ಯ, ಹೊರ ರಾಜ್ಯಗಳಲ್ಲಿ ನೆಲೆಸಿರುವ ಜಿಲ್ಲೆಯ ಜನರು ಸಹ ಅಲ್ಲಿಯೇ ಈ ವರ್ಷ ಯುಗಾದಿ ಆಚರಿಸುವಂತಾಗಿದೆ.

ಆದಾಯ ನಷ್ಠ:

ಸಾರಿಗೆ ಸಂಸ್ಥೆ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ಪ್ರಥಮ ದಿನವಾದ ಬುಧವಾರ ₹38.70 ಲಕ್ಷ ಹಾಗೂ ಎರಡನೇ ದಿನವಾದ ಗುರುವಾರ ₹60 ಲಕ್ಷ ಆದಾಯ ನಷ್ಠವಾಗಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ ವಿಭಾಗೀಯ ಸಂಚಾಲಕ ನಾರಾಯಣಪ್ಪ ಕುರುಬರ ‘ಪ್ರಜಾವಾಣಿ’ಗೆ ತಿಳಿಸಿದರು.

ಒಟ್ಟು 670 ಅನುಸೂಚಿಗಳ ಪೈಕಿಗುರುವಾರ ಕೇವಲ 22 ವಿವಿಧ ಮಾರ್ಗಗಳಲ್ಲಿ ಬಸ್‌ಗಳನ್ನು ಓಡಿಸಲಾಯಿತು. 648 ಮಾರ್ಗಗಳಲ್ಲಿ ಸಂಚಾರ ರದ್ದುಗೊಂಡಿತ್ತು ಎಂದು ಹೇಳಿದರು.

ಖಂಡನೆ:

ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗದಿದ್ದರೆ ನೀಡಿರುವ ವಸತಿ ಸೌಲಭ್ಯವನ್ನು ಹಿಂಪಡೆಯಲಾಗುವುದು ಎಂದು ಅಧಿಕಾರಿಗಳು ಮನೆಗೆ ನೋಟಿಸ್‌ ಅಂಟಿಸಿರುವುದಕ್ಕೆ ಸಾರಿಗೆ ನೌಕರರು ಮತ್ತು ಅವರ ಕುಟುಂಬದವರು ಖಂಡನೆ ವ್ಯಕ್ತಪಡಿಸಿದರು.

‘ಅಧಿಕಾರಿಗಳ ಇಂತಹ ಬೆದರಿಕೆಗೆ ಅಂಜುವುದಿಲ್ಲ. ಬೇಡಿಕೆ ಈಡೇರುವವರೆಗೆ ಮುಷ್ಕರ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಮುಷ್ಕರದಿಂದ ನಗರ ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳ ನಡೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.