
ಮುದ್ದೇಬಿಹಾಳ: ನಗರದ ಹೃದಯ ಭಾಗದಲ್ಲಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಘಟಕ ಮತ್ತು ಬಸ್ ನಿಲ್ದಾಣ ಸುಧಾರಣೆಗೆ ಈಗಾಗಲೇ ₹ 4.90 ಕೋಟಿ ಅನುದಾನದ ಯೋಜನೆ ಸಿದ್ದಪಡಿಸಿದ್ದು ಆದಷ್ಟು ಬೇಗ ಸುಧಾರಣೆ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಶಾಸಕ, ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ ಲಿಮಿಟೆಡ್ ಅಧ್ಯಕ್ಷ ಸಿ.ಎಸ್.ನಾಡಗೌಡ ಹೇಳಿದರು.
ಶನಿವಾರ ಸಾರಿಗೆ ಘಟಕದ ಹಿರಿಯ ಅಧಿಕಾರಿಗಳೊಂದಿಗೆ ಬಸ್ ನಿಲ್ದಾಣ, ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿ ಸುಧಾರಣೆಗೆ ಕೆಲವು ಸಲಹೆ ಸೂಚನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟಕ, ನಿಲ್ದಾಣದ ರಸ್ತೆಗಳಿಗೆ ಫೆವರ್, ಕಾಂಕ್ರಿಟ್ ಸೇರಿ ಇತರೆ ಕೆಲಸಗಳ ಅವಶ್ಯಕತೆ ಇರುವುದನ್ನು ಮನಗಂಡು ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಇಂಜಿನೀಯರುಗಳ ಜೊತೆ ಚರ್ಚಿಸಲಾಗಿದೆ. ಆದಷ್ಟು ಬೇಗ ಸರ್ಕಾರಕ್ಕೆ ಮನವಿ ಮಾಡಿಕೊಂಡು ನಿಗಮದ ಮೂಲಕ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುತ್ತದೆ. ಅನುದಾನ ಲಭ್ಯವಾದರೆ ಸುಧಾರಣೆ ಕೆಲಸಕ್ಕೆ ವೇಗ ದೊರಕುತ್ತದೆ ಎಂದರು.
ಶುಕ್ರವಾರ ಕೆಕೆಆರ್‌ಟಿಸಿ ಕಲಬುರ್ಗಿ ವಿಭಾಗದ ವ್ಯವಸ್ಥಾಪಕ ನಿರ್ದೇಶಕಿ ಡಾ.ಬಿ.ಸುಜಾತಾ ಭೇಟಿ ನೀಡಿ ಪರಿಶೀಲಿಸಿದ ಬೆನ್ನಲ್ಲೇ ಶಾಸಕರೂ ಭೇಟಿ ನೀಡಿದ್ದರು.
ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಇಜಿನಿಯರ್ ಮಲ್ಲಿಕಾರ್ಜುನ ಅಂಗಡಿ, ಘಟಕ ವ್ಯವಸ್ಥಾಪಕ ಅಶೋಕಕುಮಾರ ಭೋವಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ, ಪುರಸಭೆ ನಾಮನಿರ್ದೇಶಿತ ಸದಸ್ಯ ಗೋಪಿ ಮಡಿವಾಳರ ಇನ್ನಿತರರು ಇದ್ದರು.
ಘಟಕ, ನಿಲ್ದಾಣದಲ್ಲಿ ಸಾಕಷ್ಟು ಅವ್ಯವಸ್ಥೆ ಇದೆ. ವಿಜಯಪುರ ನಗರ ಸಾರಿಗೆಗೆ ಹೊಸ ಬಸ್ ಕೊಟ್ಟರೂ ಮುದ್ದೇಬಿಹಾಳ ಘಟಕಕ್ಕೆ ಒಂದೂ ಹೊಸ ಬಸ್ ಕೊಟ್ಟಿಲ್ಲ. ನೀವ್ಯಾಕೆ ಘಟಕಕ್ಕೆ ಬಂದು ಪರಿಶೀಲಿಸುತ್ತಿಲ್ಲ ಎಂದು ಶಾಸಕ ನಾಡಗೌಡರು ವ್ಯವಸ್ಥಾಪಕ ನಿರ್ದೇಶಕಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದೂ ಅಲ್ಲದೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಗಮನಕ್ಕೆ ತರಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.
ಆ ಹಿನ್ನೆಲೆ ವ್ಯವಸ್ಥಾಪಕ ನಿರ್ದೆಶಕಿಯವರು ಶುಕ್ರವಾರ ದಿಢೀರ್‌ನೆ ಘಟಕ, ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು