ADVERTISEMENT

ವಿಜಯಪುರ | ಕೊಳವೆಬಾವಿ ಅವಘಡ: ಮನೆಗೆ ಮರಳಿದ ಮಗು; ಲಚ್ಯಾಣದಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 15:44 IST
Last Updated 6 ಏಪ್ರಿಲ್ 2024, 15:44 IST
   

ವಿಜಯಪುರ: ಕೊಳವೆಬಾವಿ ಅವಘಡದಲ್ಲಿ ರಕ್ಷಿಸಿ, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ಸಾತ್ವಿಕ್‌ ಮುಜಗೊಂಡ ಶನಿವಾರ ಸಂಜೆ ಪೋಷಕರೊಂದಿಗೆ ತಮ್ಮೂರಿಗೆ ಮರಳಿದನು.

ಜಿಲ್ಲಾಸ್ಪತ್ರೆಯಲ್ಲಿ ಎರಡು ದಿನ ಆರೈಕೆ ಮಾಡಿದ ವೈದ್ಯರು, ಮಗುವನ್ನು ತಂದೆ, ತಾಯಿಯನ್ನು ಅಂಬುಲೆನ್ಸ್‌ ಮೂಲಕ ಲಚ್ಯಾಣದಲ್ಲಿರುವ ಮನೆಗೆ ಕಳುಹಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ ಮತ್ತು ವೈದ್ಯರ ತಂಡ ಶುಭಹಾರೈಸಿ ಜಿಲ್ಲಾಸ್ಪತ್ರೆಯಿಂದ ಬೀಳ್ಕೊಟ್ಟರು.

ADVERTISEMENT

ಯುಗಾದಿ ಸಂಭ್ರಮ:

ಊರಿಗೆ ಮಗು ಮರಳಿದ ಸುದ್ದಿ ಕೇಳಿ ಕುಟುಂಬಸ್ಥರು, ಸಂಬಂಧಿಕರು, ಗ್ರಾಮಸ್ಥರು ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಮಗುವನ್ನು ಮುಂದಿಸಿ, ಹಾರೈಸಿದರು. ಇಡೀ ಲಚ್ಯಾಣದಲ್ಲಿ ಮೂರು ದಿನ ಮೊದಲೇ ಯುಗಾದಿ ಸಂಭ್ರಮ ಮನೆ ಮಾಡಿತ್ತು.

ಮಗುವಿನೊಂದಿಗೆ ಪೋಷಕರು ಲಚ್ಯಾಣದ ಆರಾಧ್ಯಾ ದೈವ, ಪವಾಡ ಪುರುಷ ಶ್ರೀ ಸಿದ್ಧಲಿಂಗ ಮಹಾರಾಜರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಪಟಾಕಿ ಹಾರಿಸಿ ಸಂಭ್ರಮಿಸಿದರು. ‘ಶರಣು ಶಂಕರ ಸಿದ್ಧಲಿಂಗ ಮಹಾರಾಜ ಕೀ ಜೈ’ ಎಂದು ಜೈಘೋಷ ಮೊಳಗಿಸಿದರು.

ಮಠದ ಮಹಾದ್ವಾರದಲ್ಲಿ ಮಗುವಿಗೆ ಆರತಿ ಬೆಳಗಿ, ಸಿಡಿಗಾಯಿ ಒಡೆದು ಸ್ವಾಗತಿಸಲಾಯಿತು. ಬಳಿಕ ಮಠ ಒಳ ಪ್ರವೇಶಿಸಿ ಶ್ರೀ ಸಿದ್ದಲಿಂಗನ ದರ್ಶನ ಮಾಡಿಸಲಾಯಿತು. ಮಗು ಸಿದ್ದಲಿಂಗನ ದರ್ಶನ ಮಾಡುತ್ತಿದಂತೆ ನೆರೆದ ಭಕ್ತರ ಸಂಭ್ರಮ ಮುಗಲು ಮುಟ್ಟಿತು. ಬಾಲಕನ ಸಮ್ಮುಖದಲ್ಲಿ ಸಿದ್ದಲಿಂಗನಿಗೆ ಭಕ್ತರು ಪೂಜೆ ಸಲ್ಲಿಸಿ, ಮಗುವಿಗೆ ಮಠದಲ್ಲಿನ ಸಾಧು ಸಂತರು ವಿಭೂತಿ, ಪ್ರಸಾದ ಹಚ್ಚಿ ತೀರ್ಥ ಕುಡಿಸುವ ಮೂಲಕ ಮಗು ನೂರು ವರ್ಷ ಬಾಳಲಿ ಎಂದು ಹಾರೈಸಿದರು.

ಬಳಿಕ ನಡೆದ ಸಮಾರಂಭದಲ್ಲಿ ಆರೋಗ್ಯ ಇಲಾಖೆಯ 108 ಅಂಬುಲೆನ್ಸ್‌ ಸಿಬ್ಬಂದಿಯನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.