ಬಸನಗೌಡ ಪಾಟೀಲ ಯತ್ನಾಳ
ವಿಜಯಪುರ: ‘ವಿಜಯಪುರದಲ್ಲಿ ಖಾಸಗಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿರುವ ಸಚಿವ ಶಿವಾನಂದ ಪಾಟೀಲ ಈ ಹಿಂದೆ ಆರೋಗ್ಯ ಸಚಿವರಿದ್ದಾಗ ಯಾಕೆ ಸರ್ಕಾರಿ ವೈದ್ಯಕೀಯ ಕಾಲೇಜು ಮಾಡಲಿಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಿವಾನಂದ ಪಾಟೀಲ ಹತಾಶರಾಗಿದ್ದಾರೆ, ಜಿಲ್ಲೆಯಲ್ಲಿ ನಿಯಂತ್ರಣ ಕಳೆದುಕೊಂಡಿದ್ದಾರೆ, ಏನು ನಡೆಯುತ್ತಿಲ್ಲ, ಅದಕ್ಕೆ ಇಂತಹ ರಾಗ, ಪ್ರಲಾಪ ಮಾಡುತ್ತಿದ್ದಾರೆ. ತಮ್ಮ ಹಿಂಬಾಲಕರ ಕೈಯಲ್ಲಿ ಹೇಳಿಕೆ ಕೊಡಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ರಾಜ್ಯ ಸರ್ಕಾರದ ಬಳಿ ಹಣವಿಲ್ಲ ಎಂಬ ಕಾರಣಕ್ಕೆ ವಿಜಯಪುರದಲ್ಲಿ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಮಾಡಲು ಮುಂದಾಗಿದೆ. ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ನಾನೇ ತೆಗೆದುಕೊಳ್ಳಬೇಕು ಎನ್ನುವ ಹುಚ್ವು ಇಲ್ಲ. ನನಗೂ ತಾಕತ್ತು ಇದೆ, ಬೇಕಾದರೆ ಸ್ವಂತಃ ಖಾಸಗಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುತ್ತೇನೆ’ ಎಂದು ಹೇಳಿದರು.
‘ಸರ್ಕಾರಿ ವೈದ್ಯಕೀಯ ಕಾಲೇಜು ಎಂದಾಕ್ಷಣ ಯಾರಿಗೂ ಉಚಿತವಾಗಿ ಸೇರ್ಪಡೆ ಮಾಡಿಕೊಳ್ಳುವುದಿಲ್ಲ. ಅಲ್ಲೂ ಸಹಿತ ದುಡ್ಡು ಕಟ್ಟಬೇಕು, ಮೆರಿಟ್ ಇದ್ದವರಿಗೆ ಎಲ್ಲೂ ತೊಂದರೆ ಆಗಲ್ಲ’ ಎಂದರು.
‘ಯಾರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೋ ಅಂತವರಿಗೆ ಮಾತ್ರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಬಗ್ಗೆ ಮಾತನಾಡುವ ನೈತಿಕತೆ ಇದೆ. ಮೊದಲು ನಿಮ್ಮ ಮಕ್ಕಳು ಯಾವ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ ಎಂಬುದನ್ನು ಬಹಿರಂಗ ಮಾಡಿ, ಆ ಮೇಲೆ ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ’ ಎಂದು ಯತ್ನಾಳ ಸವಾಲು ಹಾಕಿದರು.
‘ಈಗ ವಿಜಯಪುರ ಸಾಕಷ್ಟು ಬದಲಾವಣೆಯಾಗಿದೆ. ಇಲ್ಲಿ ಸರ್ಕಾರಿ ಅಥವಾ ಖಾಸಗಿ ವೈದ್ಯಕೀಯ ಕಾಲೇಜು ಆದರೆ, ಸಾವಿರಾರು ನಿರುದ್ಯೋಗಿ ಯುವಕರಿಗೆ ನೌಕರಿ ಸಿಗತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.